‘ಮೊದಲು ಮುದ್ದು ಮಾಡೋದು, ಆಮೇಲೆ ಅಳೋದು’: ಕರಣ್ ಜೋಹರ್​ಗೆ ಬಿಸಿಮುಟ್ಟಿಸಿದ ಮನೋಜ್ ಬಾಜ್​ಪೇಯಿ

Manoj Bajpayee: ಬಾಲಿವುಡ್​ನ ಪ್ರತಿಭಾವಂತ ನಟ ಮನೋಜ್ ಬಾಜ್​ಪೇಯಿ, ಬಾಲಿವುಡ್​ನ ಸ್ಟಾರ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ಇತ್ತೀಚೆಗಿನ ಸ್ಟಾರ್ ನಟರ ಸಂಭಾವನೆ ಕುರಿತ ಹೇಳಿಕೆಯನ್ನು ಕಟುವಾಗಿ ಟೀಕೆ ಮಾಡಿದ್ದಾರೆ.

‘ಮೊದಲು ಮುದ್ದು ಮಾಡೋದು, ಆಮೇಲೆ ಅಳೋದು’: ಕರಣ್ ಜೋಹರ್​ಗೆ ಬಿಸಿಮುಟ್ಟಿಸಿದ ಮನೋಜ್ ಬಾಜ್​ಪೇಯಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Aug 03, 2024 | 8:04 PM

ಹಿಂದಿ ಸಿನಿಮಾಗಳ ಸೋಲಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಕಾರಣಗಳನ್ನು ಹುಡುಕುತ್ತಿದ್ದಾರೆ. ಕೆಲವರು ನಿರ್ದೇಶಕರನ್ನು ದೂರಿದರೆ ಇನ್ನೂ ಕೆಲವರು ನಟರು ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ಕಂಪ್ಲೇಂಟ್ ಮಾಡುತ್ತಿದ್ದಾರೆ. ಈ ಮಧ್ಯೆ ನಟ ಮನೋಜ್ ಬಾಜ್​ಪೇಯಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸ್ಟಾರ್ಗಳನ್ನು ಮೊದಲು ಮೆಚ್ಚಿ ಹೊಗಳಿದ್ದು ನಿರ್ಮಾಪಕರೇ, ಈಗ ಅವರನ್ನು ದೂರುತ್ತಿರುವವರು ನಿರ್ಮಾಪಕರೇ ಎಂದು ಆರೋಪ ಮಾಡಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಒಪ್ಪಿದ್ದಾರೆ.

ಇತ್ತೀಚೆಗೆ ಕರಣ್ ಜೋಹರ್ ಅವರು ಸ್ಟಾರ್ ಹೀರೋಗಳ ಸಂಭಾವನೆ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ ಅವರು ಕಲಾವಿದರು ದೊಡ್ಡ ಸಂಬಾವನೆ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಿನಿಮಾದ ಮೇಕಿಂಗ್ ಚಾರ್ಜ್ ಹೆಚ್ಚುತ್ತಿದ್ದು, ಇದಕ್ಕೆ ಕೆಲ ಹೀರೋಗಳ ಕಾರಣ ಎಂದು ವಾದ ಮುಂದಿಟ್ಟಿದ್ದರು. ಈ ಎಲ್ಲಾ ವಿಚಾರಗಳ ಬಗ್ಗೆ ಮನೋಜ್ ಬಾಜ್​ಪೇಯಿ ಮಾತನಾಡಿದ್ದಾರೆ.

‘ಹಾಗಾದರೆ ಸ್ಟಾರ್​ಗಳಿಗೆ ಸಂಭಾವನೆ ನೀಡುತ್ತಿರುವವರು ಯಾರು? ಈ ಮೊದಲು ಸಂಭಾವನೆ ನಿಡಿದವರು ಯಾರು’ ಎಂದು ಮನೋಜ್ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸ್ಟಾರ್ಗಳು ದೊಡ್ಡ ಮಟ್ಟದ ಸಂಭಾವನೆ ಕೇಳಿದಾಗ ಕೊಡುವುದಿಲ್ಲ ಎಂದು ನೇರವಾಗಿ ಹೇಳಬೇಕು ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ. ಮನೋಜ್ ಮಾತನಾಡಿದ್ದು ಕರಣ್ ಜೋಹರ್ ಬಗ್ಗೆ ಎನ್ನಲಾಗುತ್ತಿದೆ.

‘ಸ್ಟಾರ್ಗಳೇ ಸಿನಿಮಾಗೆ ಮುಖ್ಯವಾಗುತ್ತಾರೆ. ಯಾರಾದರೂ ನಿರ್ಮಾಪಕರು ಸ್ಟಾರ್ ಹೀರೋ ಜೊತೆ ಕೈ ಜೋಡಿಸಿದರು ಎಂದರೆ ಅವರ ಭುಜದ ಮೇಲೆ ಹತ್ತಿ ಕೂರುತ್ತಾರೆ. ಯಾವುದಾದರೂ ಸ್ಟಾರ್ ಹೀರೋ ಸೌಕರ್ಯ ಕೇಳಿದ ಎಂದರೆ ಅದರಲ್ಲಿ ತಪ್ಪಿಲ್ಲ. ಅದು ಹುಚ್ಚುತನದ್ದಾಗದಿದ್ದರೆ ಆಯಿತು. ಅನೇಕ ಸ್ಟಾರ್​ಗಳು ಸಿನಿಮಾದ ಸಂಭಾವನೆ ಕಡಿಮೆ ಪಡೆದು, ಲಾಭದ ಹಣದಲ್ಲಿ ಪಾಲು ಪಡೆಯುತ್ತಿದ್ದಾರೆ’ ಎಂದಿದ್ದಾರೆ ಮನೋಜ್.

ಇದನ್ನೂ ಓದಿ:‘ಸ್ಟಾರ್ ನಟರು ಸೂರ್ಯ, ಚಂದ್ರರನ್ನೇ ಕೇಳುತ್ತಾರೆ’; ಕರಣ್ ಜೋಹರ್ ಅಸಮಾಧಾನ

ಮನೋಜ್ ಅವರು ಕರಣ್ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ‘ಕೆಲವು ನಿರ್ಮಾಪಕರು ಸ್ಟಾರ್ ಹೀರೋಗಳನ್ನು ಮುದ್ದಿನಿಂದ ನೋಡಿಕೊಳ್ಳುತ್ತಾರೆ. ಅವರ ಭುಜದ ಮೇಲೆ ಹತ್ತಿ ಕೂರುತ್ತಾರೆ. ಈಗ ಅವರೇ ಹೀರೋಗಳು ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎನ್ನುತ್ತಾರೆ. ನೀವು ಮೊದಲು ನನಗೆ ರಸಗುಲ್ಲಾ ಹಾಗೂ ಪ್ರೋಟೀನ್ ಶೇಕ್ ನೀಡಿ. ಹಾಗಾದಾಗ ನಾನು ಮ್ಯಾರಾಥನ್ ಓಡಬಹುದು. ನಾನು ಮಾತ್ರ ಈ ರೇಸ್​ ಅನ್ನು ಗೆಲ್ಲಬಹುದು ಎಂದು ನೀವು ಅಂದುಕೊಂಡಿರುತ್ತೀರಿ. ಆ ಬಳಿಕ ನಾನೆಷ್ಟು ರಸಗುಲ್ಲಾ ತಿಂದೆ, ಎಷ್ಟು ಪ್ರೋಟಿನ್ ಶೇಕ್ ಕುಡಿದೆ ಎಂಬ ಲೆಕ್ಕ ಹೇಳಿ ಕಣ್ಣೀರು ಹಾಕುತ್ತೀರಿ’ ಎಂದು ಅವರು ಹೇಳಿದ್ದಾರೆ. ಇದು ಕರಣ್ ಜೋಹರ್ ಅವರಿಗೆ ಹೇಳಿದ ಮಾತು ಎಂದು ಅನೇಕರು ಭಾವಿಸಿದ್ದಾರೆ.

‘ನನಗೆ ಯಾರೂ ಇಷ್ಟೊಂದು ಹಣ ನೀಡಿಲ್ಲ. ನಾನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸ್ಟಾಫ್​ಗಳ ಜೊತೆ ಹೋಗುತ್ತೇನೆ. ನಾನು ಕೆಲವೊಮ್ಮೆ ಕೆಲ ಮೂಲಭೂತ ಸೌಕರ್ಯಗಳನ್ನು ತ್ಯಾಗ ಮಾಡಿದ್ದು ಇದೆ. ಆದಾಗ್ಯೂ ನನಗೆ ಆಫರ್ ನೀಡಿಲ್ಲ. ಈಗಲೂ ನಿಮಗೆ ಸ್ಟಾರ್​ಗಳೇ ಬೇಕು. ಅವರಿಂದ ಹೆಚ್ಚು ಲಾಭ ಆಗಬಹುದು ಎನ್ನುವ ಭ್ರಮೆ ನಿಮಗೆ. ಕೊನೆಯಲ್ಲಿ ಎಲ್ಲರೂ ಆಡೋದು ಜೂಜನ್ನೇ’ ಎಂದು ಮನೋಜ್ ಕೋಪ ಹೊರಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Sat, 3 August 24