ಸಿನಿಮಾ ಮಾಡುವುದು ಎಷ್ಟು ಕಷ್ಟವೋ ಅದರ ಪ್ರಚಾರ ಮಾಡುವುದು ಕೂಡ ಅಷ್ಟೇ ಕಷ್ಟ. ಅದಕ್ಕಾಗಿ ಸೆಲೆಬ್ರಿಟಿಗಳು ಇಲ್ಲಸಲ್ಲದ ಕಸರತ್ತು ಮಾಡುತ್ತಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ಅವರು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಆದರೆ ಈ ನಟಿಗೆ ಹೇಳಿಕೊಳ್ಳುವಂತಹ ಯಶಸ್ಸು ಇನ್ನೂ ಸಿಕ್ಕಿಲ್ಲ. ಒಂದೇ ಒಂದು ಗೆಲುವಿಗಾಗಿ ಅವರು ಹಲವು ಬಗೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಮಾಡಿದರೂ ಅವರಿಗೆ ಜನಮೆಚ್ಚುಗೆ ಸಿಗುತ್ತಿಲ್ಲ. ಪದೇ ಪದೇ ಅವರು ರಿಮೇಕ್ ಸಿನಿಮಾವನ್ನೇ ಮಾಡುತ್ತಿದ್ದಾರೆ. ಈಗ ಜಾನ್ವಿ ಕಪೂರ್ ನಟಿಸಿರುವ ‘ಮಿಲಿ’ (Mili) ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗಲಿದೆ. ಅದರ ಸಲುವಾಗಿ ಜಾನ್ವಿ ಕಪೂರ್ ಅವರು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಆದರೆ ಜನರಿಗೆ ಅವರ ಈ ಗಿಮಿಕ್ ಹಿಡಿಸಿಲ್ಲ.
‘ಮಿಲಿ’ ಚಿತ್ರದ ಪ್ರಚಾರಕ್ಕಾಗಿ ಸೋಮವಾರ (ಅ.31) ಜಾನ್ವಿ ಕಪೂರ್ ಅವರು ದೆಹಲಿಗೆ ತೆರಳಿದ್ದರು. ಅಲ್ಲಿನ ಮಲ್ಟಿಪ್ಲೆಕ್ಸ್ನಲ್ಲಿ ಅವರು ಪಾಪ್ಕಾರ್ನ್ ಮಾರಿದ್ದಾರೆ! ಅರೆರೆ, ನಿರ್ಮಾಪಕ ಬೋನಿ ಕಪೂರ್ ಮಗಳು ಹೀಗೇಕೆ ಪಾಪ್ಕಾರ್ನ್ ಮಾರುತ್ತಿದ್ದಾರೆ ಅಂತ ಜನರು ಒಂದು ಕ್ಷಣ ಅಚ್ಚರಿಪಟ್ಟಿದ್ದಾರೆ. ಇದು ಪ್ರಚಾರದ ಗಿಮಿಕ್ ಎಂಬುದು ಮರುಕ್ಷಣವೇ ಗೊತ್ತಾಗಿದೆ.
ಜಾನ್ವಿ ಕಪೂರ್ ಅವರು ಪಾಪ್ ಕಾರ್ನ್ ಮಾರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ಅದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಇವರು ಶ್ರೀದೇವಿ-ಬೋನಿ ಕಪೂರ್ ದಂಪತಿಯ ಪುತ್ರಿ ಆಗಿರದೇ ಇದ್ದರೆ ಪಾಪ್ಕಾರ್ನ್ ಮಾರುವ ಕೆಲಸವನ್ನೇ ಮಾಡಬೇಕಿತ್ತು’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ಸಿನಿಮಾದ ಪ್ರಚಾರಕ್ಕಾಗಿ ಬೇಕಿದ್ದರೆ ಟಾಯ್ಲೆಟ್ ಕೂಡ ತೊಳೀತಾರೆ’ ಎಂದು ಇನ್ನೊಬ್ಬರು ಕಟುವಾಗಿ ಟೀಕಿಸಿದ್ದಾರೆ. ‘ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಇವರಿಗೆ ಜನರ ನೆನಪಾಗುತ್ತದೆ. ಬಾಕಿ ಸಮಯದಲ್ಲಿ ನೆನಪು ಇರುವುದಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.
ಮಲಯಾಳಂನ ‘ಹೆಲೆನ್’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ನಾಯಕಿಪ್ರಧಾನ ಕಥೆಯುಳ್ಳ ಆ ಚಿತ್ರವನ್ನು ಹಿಂದಿಯಲ್ಲಿ ‘ಮಿಲಿ’ ಎಂದು ರಿಮೇಕ್ ಮಾಡಲಾಗಿದೆ. ಬೋನಿ ಕಪೂರ್ ಅವರು ಮಗಳು ಜಾನ್ವಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಿಂದಲಾದರೂ ಜಾನ್ವಿಗೆ ಗೆಲುವು ಸಿಗುತ್ತೋ ಇಲ್ಲವೋ ಎಂಬುದು ನವೆಂಬರ್ 4ರಂದು ಗೊತ್ತಾಗಲಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಜೊತೆಗೆ ಸನ್ನಿ ಕೌಶಲ್ ಹಾಗೂ ಮನೋಜ್ ಪಾಹ್ವಾ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:32 pm, Tue, 1 November 22