ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡಂತೆ ಮೋಡಿ ಮಾಡಲೇ ಇಲ್ಲ ‘ಮಿಲಿ’; ಜಾನ್ವಿ ಸಿನಿಮಾ ಗಳಿಸಿದ್ದೆಷ್ಟು?
ನಟಿ ಜಾನ್ವಿ ಕಪೂರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಸ್ಟಾರ್ ಕಿಡ್ ಆಗಿ, ಚಿತ್ರರಂಗದಲ್ಲಿ ಇಷ್ಟು ವರ್ಷ ಶ್ರಮಿಸಿದ ಹೊರತಾಗಿಯೂ ಅವರಿಗೆ ಗೆಲುವು ಸಿಕ್ಕಿಲ್ಲ.
ಶುಕ್ರವಾರ (ನವೆಂಬರ್ 4) ರಿಲೀಸ್ ಆದ ‘ಮಿಲಿ’ ಚಿತ್ರದ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದರು. ವಿಮರ್ಶಕರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಆದರೆ, ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಹೇಳಿಕೊಳ್ಳುವಂತಹ ಮೋಡಿ ಮಾಡಲೇ ಇಲ್ಲ. ಈ ಚಿತ್ರ ಮೊದಲ ದಿನ 35-45 ಲಕ್ಷ ರೂಪಾಯಿ ಗಳಿಸಿಕೊಂಡಿದೆ. 2019ರಲ್ಲಿ ರಿಲೀಸ್ ಆದ ಮಲಯಾಳಂ ಚಿತ್ರ ‘ಹೆಲೆನ್’ನ ರಿಮೇಕ್ ‘ಮಿಲಿ’. ಮೂಲ ಚಿತ್ರವನ್ನು ಮಾತುಕಟ್ಟಿ ಕ್ಸೇವಿಯರ್ ಅವರು ನಿರ್ದೇಶನ ಮಾಡಿದ್ದರು. ಈಗ ಅವರೇ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಕೌಶಲ್ ಹಾಗೂ ಮನೋಜ್ ಪಹ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ಜಾನ್ವಿ ತಂದೆ ಬೋನಿ ಕಪೂರ್ ಅವರೇ ಬಂಡವಾಳ ಹೂಡಿದ್ದಾರೆ. ಬರೋಬ್ಬರಿ 38 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಚಿತ್ರ ಸಿದ್ಧಗೊಂಡಿದೆ. ಆದರೆ, ಈ ಚಿತ್ರ ಮಾಡುತ್ತಿರುವ ಗಳಿಕೆ ನೋಡಿದರೆ ಬೋನಿ ಕಪೂರ್ ದೊಡ್ಡ ನಷ್ಟ ಅನುಭವಿಸಿದರೂ ಅಚ್ಚರಿ ಏನಿಲ್ಲ.
ಸಾವಿನ ದವಡೆಯಲ್ಲಿ ಸಿಲುಕಿದ ಯುವತಿ ಬದುಕಲು ಹೋರಾಡುವ ಯುವತಿಯೊಬ್ಬಳ ಕಥೆ ‘ಮಿಲಿ’. ದೊಡ್ಡ ಫ್ರೀಜರ್ನಲ್ಲಿ ಸಿಕ್ಕಿ ಬೀಳುವ ಯುವತಿ, ರಾತ್ರಿ ಇಡೀ ಅಲ್ಲಿಯೇ ಕಳೆಯುತ್ತಾಳೆ. ಇದರಿಂದ ಆಕೆ ಹೇಗೆ ಹೊರ ಬರುತ್ತಾಳೆ ಅನ್ನೋದು ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೊದಲು ಜಾನ್ವಿ ಕಪೂರ್ ಅವರ ಸಿನಿಮಾಗಳಲ್ಲಿ ಅವರ ನಟನೆ ಬಗ್ಗೆ ಎಲ್ಲರಿಂದ ಟೀಕೆ ವ್ಯಕ್ತವಾಗಿತ್ತು. ಆದರೆ, ಈಗ ಅವರು ನಟನೆಯಲ್ಲಿ ಪ್ರಬುದ್ಧರಾಗುತ್ತಿದ್ದಾರೆ ಎಂದು ಪ್ರೇಕ್ಷಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.
ಇದನ್ನೂ ಓದಿ: Mili Twitter Review: ಜಾನ್ವಿ ಕಪೂರ್ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
‘ಮಿಲಿ’ ಸಿನಿಮಾದ ಜೊತೆಗೆ ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ ಚತುರ್ವೇದಿ ನಟನೆಯ ‘ಪೋನ್ ಭೂತ್’ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಆದಾಗ್ಯೂ ಈ ಸಿನಿಮಾ ಮೊದಲ ದಿನ 2 ಕೋಟಿ ರೂಪಾಯಿ ಗಳಿಸಿದೆ. ಹುಮಾ ಖುರೇಷಿ ಹಾಗೂ ಸೋನಾಕ್ಷಿ ಸಿನ್ಹಾ ಅವರ ‘ಡಬಲ್ ಎಕ್ಸ್ಎಲ್’ ಸಿನಿಮಾ ಕೆಲವೇ ಲಕ್ಷಗಳ ಬಿಸ್ನೆಸ್ ಮಾಡಿದೆ.
ಮತ್ತಷ್ಟು ಮನರಂಜನೆ ಸುದ್ಧಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ