ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಮಿರ್ಜಾಪುರ್’ ಸಿನಿಮಾ

ಪಂಕಜ್ ತ್ರಿಪಾಠಿ ಹಾಗೂ ಆಲಿ ಫಜಲ್ ಅಭಿನಯದ 'ಮಿರ್ಜಾಪುರ್: ದಿ ಮೂವಿ' ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 24.75 ಕೋಟಿ ರೂಪಾಯಿ ಗಳಿಸಿ ಭರ್ಜರಿ ಶುರುವಾತು ಪಡೆದಿದೆ. ಗುರ್ಮೀತ್ ಸಿಂಗ್ ನಿರ್ದೇಶನದ ಈ ಚಿತ್ರವು 2026ರ ನಾಲ್ಕನೇ ಅತಿ ದೊಡ್ಡ ಹಿಂದಿ ಓಪನರ್ ಸಿನಿಮಾ ಆಗಿ ಹೊರಹೊಮ್ಮಿದೆ. ಮುಂದೆ ಈ ಚಿತ್ರ ಹಲವು ದಾಖಲೆ ಬರೆಯೋ ಸಾಧ್ಯತೆ ಇದೆ.

ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಮಿರ್ಜಾಪುರ್’ ಸಿನಿಮಾ
ಮಿರ್ಜಾಪುರ್ ಸಿನಿಮಾ

Updated on: Sep 05, 2026 | 12:15 PM

ಮುಖ್ಯಾಂಶಗಳು

  • ಬೆಳ್ಳಿಪರದೆಯಲ್ಲೂ ಮಿರ್ಜಾಪುರ್ ಧಮಾಕಾ
  • ಮೊದಲ ದಿನವೇ 24.75 ಕೋಟಿ ಕಲೆಕ್ಷನ್
  • 2026ರ ಬಿಗ್ಗೆಸ್ಟ್ ಓಪನರ್ಸ್ ಪಟ್ಟಿಗೆ ಎಂಟ್ರಿ 

‘ಮಿರ್ಜಾಪುರ್’ ವೆಬ್ ಸರಣಿ ಒಟಿಟಿಯಲ್ಲಿ ದೊಡ್ಡ ಮಟ್ಟದಲ್ಲಿ ಧಮಾಕಾ ಮಾಡಿತ್ತು. ಈಗ ಈ ಸರಣಿ ‘ಮಿರ್ಜಾಪುರ್: ದಿ ಮೂವಿ’ ಸಿನಿಮಾ ರೂಪದಲ್ಲಿ ಬಂದಿದೆ. ಇದು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಪಂಕಜ್ ತ್ರಿಪಾಠಿ, ಆಲಿ ಫಜಲ್ ಹಾಗೂ ರವಿ ಕಿಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬೃಹತ್ ಮಟ್ಟದ ಗಳಿಕೆ ಮಾಡಿದೆ. ಈ ಮೂಲಕ 2026ರ ನಾಲ್ಕನೇ ಅತಿ ದೊಡ್ಡ ಓಪನಿಂಗ್ ಕಂಡ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುರ್ಮೀತ್ ಸಿಂಗ್ ನಿರ್ದೇಶನದ ಈ ಕ್ರೈಮ್ ಡ್ರಾಮಾ ಸೆಪ್ಟೆಂಬರ್ 4ರಂದು ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ತೆರೆಕಂಡಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಮೊದಲ ದಿನ ದೇಶಾದ್ಯಂತ ಒಟ್ಟು 24.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ದಾಖಲೆಯ ಗಳಿಕೆ ಮಾಡಿದೆ. ಇದರಲ್ಲಿ ಹಿಂದಿ ಆವೃತ್ತಿ 24.60 ಕೋಟಿ ಗಳಿಸಿದರೆ, ತೆಲುಗು ಆವೃತ್ತಿ 15 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ಒಟ್ಟು ಭಾರತೀಯ ಗ್ರಾಸ್ ಕಲೆಕ್ಷನ್ 29.70 ಕೋಟಿ ರೂಪಾಯಿ ತಲುಪಿದೆ.

ಮೊದಲ ದಿನ ದೇಶಾದ್ಯಂತ ಒಟ್ಟು 11,135 ಶೋಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ. ಚಿತ್ರಮಂದಿರಗಳಲ್ಲಿ ಶೇ. 42.81ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ. ಬೆಳಗಿನ ಶೋಗಳಲ್ಲಿ ಶೇ. 25.85ರಷ್ಟಿದ್ದ ಪ್ರೇಕ್ಷಕರ ಸಂಖ್ಯೆ ಮಧ್ಯಾಹ್ನ ಮತ್ತು ಸಂಜೆಯ ವೇಳೆ ಹೆಚ್ಚಾಯಿತು. ರಾತ್ರಿಯ ಶೋಗಳಲ್ಲಿ ಶೇ. 62.38ರಷ್ಟು ಭರ್ಜರಿ ಪ್ರೇಕ್ಷಕರ ಉಪಸ್ಥಿತಿ ಕಂಡುಬಂದಿದೆ.

ಈ ವರ್ಷದ ಅತಿ ದೊಡ್ಡ ಹಿಂದಿ ಓಪನರ್ ಸಿನಿಮಾಗಳ ಪಟ್ಟಿಯಲ್ಲಿ ‘ಮಿರ್ಜಾಪುರ್: ದಿ ಮೂವಿ’ ನಾಲ್ಕನೇ ಸ್ಥಾನ ಪಡೆದಿದೆ. ಧುರಂಧರ್ ದಿ ರಿವೇಂಜ್, ಟಾಕ್ಸಿಕ್ ಹಾಗೂ ಬಾರ್ಡರ್ 2 ಸಿನಿಮಾಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಇತ್ತೀಚೆಗೆ 22 ಕೋಟಿ ರೂಪಾಯಿ ಗಳಿಸಿದ್ದ ಇಮ್ರಾನ್ ಹಾಶ್ಮಿ ಅಭಿನಯದ ‘ಆವಾರಾಪನ್ 2’ ಸಿನಿಮಾದ ದಾಖಲೆಯನ್ನು ಮಿರ್ಜಾಪುರ್ ಹಿಂದಿಕ್ಕಿದೆ.

ಇದನ್ನೂ ಓದಿ: ಮುನ್ನಾ ಭಯ್ಯಾ ಇಲ್ಲದೆ ಸೊರಗಿದ ‘ಮಿರ್ಜಾಪುರ್ 3’

ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಹಾಗೂ ಎಕ್ಸೆಲ್ ಎಂಟರ್ಟೇನ್ಮೆಂಟ್ ಬ್ಯಾನರ್‌ನಲ್ಲಿ ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಜಿತೇಂದ್ರ ಕುಮಾರ್, ರಸಿಕಾ ದುಗಲ್, ಶ್ವೇತಾ ತ್ರಿಪಾಠಿ, ಸಶಾಕ್ಟ್ ತೈಲಂಗ್ ಸೇರಿದಂತೆ ದಂಡೇ ಚಿತ್ರದಲ್ಲಿದೆ. ಸದ್ಯ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us