ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಮಿಷನ್ ಮಜ್ನು’ (Mission Majnu) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಹೀರೋ ಆಗಿ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ನಟಿಸಿದ್ದರೆ, ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಮಿಷನ್ ಮಜ್ನು’ ಚಿತ್ರವು ಥಿಯೇಟರ್ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಸದ್ಯಕ್ಕೆ ಬಾಲಿವುಡ್ ಸಿನಿಮಾಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿಲ್ಲವಾದ್ದರಿಂದ ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಜನವರಿ 20ರಂದು ನೆಟ್ಫ್ಲಿಕ್ಸ್ (Netflix) ಮೂಲಕ ‘ಮಿಷನ್ ಮಜ್ನು’ ಸಿನಿಮಾ ರಿಲೀಸ್ ಆಗಲಿದೆ. ಅಚ್ಚರಿ ಎಂದರೆ ಈ ಚಿತ್ರದ ಟ್ರೇಲರ್ ನೋಡಿದವರಿಗೆ ಆಲಿಯಾ ಭಟ್ ನಟನೆಯ ‘ರಾಜಿ’ ಸಿನಿಮಾ ನೆನಪಾಗುತ್ತಿದೆ.
‘ರಾಜಿ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳ ನಡುವೆ ಒಂದು ಸಾಮ್ಯತೆ ಇದೆ. ಈ ಎರಡೂ ಚಿತ್ರಗಳ ಕಥೆಯಲ್ಲಿ ಹೋಲಿಕೆ ಇದೆ. ಭಾರತದ ವಿರುದ್ಧ ಪಾಕಿಸ್ತಾನ ನಡೆಸುವ ಸಂಚನ್ನು ತಿಳಿಯಲು ಹೀರೋ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಜೆಯಂತೆ ಬದುಕುತ್ತಾನೆ. ಅಲ್ಲಿನ ಯುವತಿಯನ್ನೇ ಮದುವೆ ಆಗುತ್ತಾನೆ. ಇದು ‘ಮಿಷನ್ ಮಜ್ನು’ ಚಿತ್ರದ ಕಥೆ. ‘ರಾಜಿ’ ಸಿನಿಮಾದ ಕಥೆ ಕೂಡ ಇದೇ ರೀತಿ ಇತ್ತು. ಭಾರತದ ಯುವತಿಯೊಬ್ಬಳು ಪಾಕಿಸ್ತಾನದ ಸೈನ್ಯಾಧಿಕಾರಿಯೊಬ್ಬನನ್ನು ಮದುವೆಯಾಗಿ ಹೋಗಿ, ಅಲ್ಲಿ ಭಾರತದ ಪರವಾಗಿ ಏಜೆಂಟ್ ಆಗಿ ಕೆಲಸ ಮಾಡುತ್ತಾಳೆ. ಹಾಗಾಗಿ ಪ್ರೇಕ್ಷಕರಿಗೆ ‘ಮಿಷನ್ ಮಜ್ನು’ ಟ್ರೇಲರ್ ನೋಡಿದಾಗ ‘ರಾಜಿ’ ಚಿತ್ರ ನೆನಪಾಗಿದೆ.
ಇದನ್ನೂ ಓದಿ: ಸಿದ್ದಾರ್ಥ್ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ
‘ರಾಜಿ’ ಸಿನಿಮಾ ತುಂಬ ಕ್ಲಾಸ್ ಆಗಿ ಮೂಡಿಬಂದಿತ್ತು. ಆದರೆ ‘ಮಿಷನ್ ಮಜ್ನು’ ಸಖತ್ ಮಾಸ್ ಆಗಿದೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳ ಕೂಡ ಇರಲಿವೆ. ಶಾಂತನು ಭಾಗ್ಚಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜನರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಕಿಯಾರಾ ಜತೆಗಿನ ಬ್ರೇಕಪ್ ವದಂತಿಗೆ ತುಪ್ಪ ಸುರಿದ ಸಿದ್ದಾರ್ಥ್ ಮಲ್ಹೋತ್ರಾ; ಫ್ಯಾನ್ಸ್ ಊಹಿಸಿದ್ದೇನು?
ಈ ಹಿಂದೆ ಸಿದ್ದಾರ್ಥ್ ಮಲ್ಹೋತ್ರ ನಟಿಸಿದ್ದ ‘ಶೇರ್ಷಾ’ ಸಿನಿಮಾ ಕೂಡ ನೈಜ ಘಟನೆಗಳನ್ನು ಆಧರಿಸಿ ದೇಶಭಕ್ತಿ ಚಿತ್ರವಾಗಿತ್ತು. ಅದು ಸಹ ಒಟಿಟಿಯಲ್ಲಿ ರಿಲೀಸ್ ಆಗಿ ಜನಮೆಚ್ಚುಗೆ ಗಳಿಸಿತ್ತು. ಈಗ ಅವರು ಅದೇ ರೀತಿ ಮತ್ತೊಂದು ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ‘ಗುಡ್ಬೈ’ ಚಿತ್ರ ಕಳೆದ ವರ್ಷ ರಿಲೀಸ್ ಆಗಿ ಸೋಲು ಕಂಡಿತು. ಹಾಗಾಗಿ ಅವರಿಗೆ ‘ಮಿಷನ್ ಮಜ್ನು’ ಚಿತ್ರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ರಶ್ಮಿಕಾ ಮಂದಣ್ಣ ಮತ್ತು ಸಿದ್ದಾರ್ಥ್ ಮಲ್ಹೋತ್ರ ಅವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:52 pm, Mon, 9 January 23