ನಟ ಗೋವಿಂದ ಅವರಿಗೆ ಬುಧವಾರ (ಅಕ್ಟೋಬರ್ 1) ಬೆಳಗ್ಗೆ ಗುಂಡೇಟು ತಗುಲಿತು. ತಮ್ಮದೇ ರಿವೋಲ್ವಾರ್ನಿಂದ ಆಕಸ್ಮಿಕವಾಗಿ ಬುಲೆಟ್ ಸಿಡಿಯಿತು ಎಂದು ಗೋವಿಂದ ಹೇಳಿದ್ದಾರೆ. ಅವರ ಕಾಲಿಗೆ ಗಾಯವಾಗಿದೆ. ಆದರೆ ತಾನಾಗಿಯೇ ಬುಲೆಟ್ ಸಿಡಿಯಿತು ಎಂದು ಗೋವಿಂದ ಹೇಳಿದ್ದನ್ನು ಮುಂಬೈ ಪೊಲೀಸರು ನಂಬುತ್ತಿಲ್ಲ ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗೋವಿಂದ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಗುಂಡೇಟಿನ ಹಿಂದಿರುವ ಅಸಲಿ ವಿಷಯ ಏನು ಎಂಬುದು ತನಿಖೆ ಮುಗಿದ ನಂತರ ತಿಳಿಯಲಿದೆ.
ಗೋವಿಂದ ಅವರ ಮನೆಯಲ್ಲೇ ಈ ಘಟನೆ ನಡೆಯಿತು. ರಿವೋಲ್ವಾರ್ನಿಂದ ಗುಂಡು ಸಿಡಿದಾಗ ಆ ಸ್ಥಳದಲ್ಲಿ ಗೋವಿಂದ ಒಬ್ಬರೇ ಇದ್ದರು. ಆದ್ದರಿಂದ ಬೇರೆ ಯಾರಿಂದಲೋ ಹತ್ಯೆ ಪ್ರಯತ್ನ ನಡೆದಿಲ್ಲ ಎಂಬುದನ್ನು ಪೊಲೀಸರು ನಂಬಿದ್ದಾರೆ. ಆದರೆ ತಂತಾನೇ ಬುಲೆಟ್ ಸಿಡಿಯಿತು ಎಂದು ಗೋವಿಂದ ಹೇಳಿದ್ದನ್ನು ಪೊಲೀಸರು ಪೂರ್ತಿಯಾಗಿ ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.
ಇದನ್ನೂ ಓದಿ: ಕಾಲಿಗೆ ಗುಂಡೇಟು ಬಿದ್ದ ಪ್ರಕರಣ; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಗೋವಿಂದ
ಇನ್ಸ್ಪೆಕ್ಟರ್ ದಯಾನಾಯಕ್ ಅವರ ನೇತೃತ್ವದ ತಂಡವು ಈ ಪ್ರಕರಣದ ತನಿಖೆ ಮಾಡುತ್ತಿದೆ. ಗೋವಿಂದ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ, ನಟನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬುಧವಾರ ಮುಂಜಾನೆ ಗುಂಡು ಹಾರಿದ್ದು ಹೇಗೆ ಎಂಬುದನ್ನು ಗೋವಿಂದ ವಿವರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ತಮ್ಮ ಭದ್ರತೆಗಾಗಿ ಗೋವಿಂದ ಅವರು ರಿವೋಲ್ವಾರ್ ಲೈಸೆನ್ಸ್ ಹೊಂದಿದ್ದಾರೆ. ಅವರ ರಿವೋಲ್ವಾರ್ ತುಂಬ ಹಳೆಯದಾಗಿದ್ದು, ಸರಿಯಾಗಿ ಲಾಕ್ ಆಗಿರದ ಕಾರಣ ಮಿಸ್ಫೈರ್ ಆಗಿದೆ ಎಂಬ ಮಾಹಿತಿ ಇದೆ. ಗೋವಿಂದ ಅವರ ಕಾಲಿಗೆ ಗಾಯ ಆಗಿದ್ದು, 8ರಿಂದ 10 ಹೊಲಿಗೆ ಹಾಕಲಾಗಿದೆ. ಸದ್ಯದಲ್ಲೇ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಗೋವಿಂದ ಅವರ ಆಪ್ತರು ಮತ್ತು ಕುಟುಂಬದವರು ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.