ಲೈಂಗಿಕ ದೌರ್ಜನ್ಯ ಆರೋಪ: ಸಂಗೀತ ನಿರ್ದೇಶಕನ ಬಂಧನ
Music composer: ರಶ್ಮಿಕಾ ಮಂದಣ್ಣ ನಟನೆಯ ‘ಥಮ’, ಜಾನ್ಹವಿ ಕಪೂರ್ ನಟನೆಯ ‘ಪರಮ ಸುಂದರಿ’ ಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಸಚಿನ್ ಸಂಘ್ವಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಇಲ್ಲಿದೆ ಪೂರ್ಣ ಮಾಹಿತಿ...

ಇತ್ತೀಚೆಗೆ ಬಿಡುಗಡೆ ಆದ ರಶ್ಮಿಕಾ ಮಂದಣ್ಣರ (Rashmika Mandanna) ‘ಥಮ’, ಸೂಪರ್ ಹಿಟ್ ಸಿನಿಮಾ ‘ಸ್ತ್ರೀ 2’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಜೋಡಿ ಸಚಿನ್-ಜಿಗರ್ ಜೋಡಿಯಲ್ಲಿ ಸಚಿನ್ ಸಂಘ್ವಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಸಚಿನ್ ಅವರನ್ನು ಪೊಲೀಸರು ಬಂಧಿಸಿ, ಠಾಣೆ ಜಾಮೀನಿನ ಮೇಲೆ ಬಿಡುಗಡೆ ಸಹ ಮಾಡಿದ್ದಾರೆ.
ಸಚಿನ್ ಸಂಘ್ವಿ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ದೂರು ನೀಡಿದ್ದರು. ಸಚಿನ್ ಸಂಘ್ವಿ, ತಮಗೆ ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವುದಾಗಿ, ಪ್ರತ್ಯೇಕ ಮ್ಯೂಸಿಕ್ ಆಲ್ಬಮ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಹಾಗೂ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಯುವತಿ ದೂರು ನೀಡಿದ್ದರು.
ಯುವತಿ ನೀಡಿರುವ ದೂರಿನಂತೆ, 2024 ರಲ್ಲಿ ಸಚಿನ್, ಯುವತಿಯನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಮಾಡಿದ್ದರಂತೆ. ಹೊಸ ಮ್ಯೂಸಿಕ್ ಆಲ್ಬಮ್ನಲ್ಲಿ ಅವಕಾಶ ನೀಡುವುದಾಗಿ ಸಚಿನ್ ಹೇಳಿದ್ದರಂತೆ. ಇಬ್ಬರೂ ಸಹ ಆಗಿನಿಂದ ಪರಿಚಯದಲ್ಲಿದ್ದರಂತೆ. ಸಚಿನ್, ಒಮ್ಮೆ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡು, ಅಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾರೆ. ಅಲ್ಲದೆ, ಸಚಿನ್, ತಮ್ಮನ್ನು ಮದುವೆ ಆಗುವುದಾಗಿ ಹೇಳಿ, ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವಂಚನೆ ಮಾಡಿದ್ದಾರೆ ಎಂದಿದ್ದಾರೆ ಯುವತಿ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಗೆದ್ದು ಬೀಗಿದ ನಟಿ ರಶ್ಮಿಕಾ ಮಂದಣ್ಣ
ಸಚಿನ್ ಮೇಲಿನ ಆರೋಪದ ಬಗ್ಗೆ ಮಾತನಾಡಿರುವ ಅವರ ವಕೀಲ ‘ನನ್ನ ಕಕ್ಷಿದಾರರ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಪ್ರಕರಣಕ್ಕೆ ವಿಚಾರಣೆಗೆ ಒಳಪಡುವ ಅರ್ಹತೆ ಇಲ್ಲ. ನನ್ನ ಕಕ್ಷಿದಾರರನ್ನು ಪೊಲೀಸರು ಬಂಧಿಸಿದ್ದು ಕಾನೂನುಬಾಹಿರವಾಗಿತ್ತು ಮತ್ತು ಅದಕ್ಕಾಗಿಯೇ ಅವರನ್ನು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದಿದ್ದಾರೆ.
ಸಚಿನ್ ಮತ್ತು ಜಿಗರ್ ಅವರ ಜೋಡಿ ಬಾಲಿವುಡ್ನ ಬಲು ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ. ‘ಸ್ತ್ರೀ 2’, ‘ಬೇಡಿಯಾ’, ‘ಥಮ’, ಜಾನ್ಹವಿಯ ‘ಪರಮ ಸುಂದರಿ’ ಇನ್ನೂ ಹಲವು ಸಿನಿಮಾಗಳಿಗೆ ಈ ಜೋಡಿ ಒಟ್ಟಿಗೆ ಕೆಲಸ ಮಾಡಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಸಚಿನ್ ಮೊದಲಿಗೆ ಪ್ರೀತಮ್ ಅವರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಆಗ ಕೆಲವು ಸಿನಿಮಾಗಳಿಗೆ ಹಾಡುಗಳನ್ನು ಸಹ ಹಾಡಿದ್ದರು. ಬಳಿಕ ಅವರು ಜಿಗರ್ ಜೊತೆಗೆ ಸೇರಿ ಸಂಗೀತ ನಿರ್ದೇಶನ ಆರಂಭಿಸಿದರು. ಸಚಿನ್ ಅವರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಯಶಸ್ಸು ಸಿಗಲು ಆರಂಭವಾಗಿತ್ತು, ಅಷ್ಟರಲ್ಲೇ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




