ಸಹೋದರ, ಮಾಜಿ ಪತ್ನಿ ವಿರುದ್ಧ 100 ಕೋಟಿ ಮಾನನಷ್ಟ ದಾವೆ ಹೂಡಿದ ನಟ ನವಾಜುದ್ಧೀನ್ ಸಿದ್ಧಿಕಿ

|

Updated on: Mar 26, 2023 | 6:35 PM

ಬಾಲಿವುಡ್ ನಟ ನವಾಜುದ್ಧೀನ್ ಸಿದ್ಧಿಕಿ ತನ್ನ ಮಾಜಿ ಪತ್ನಿ ಹಾಗೂ ಸಹೋದರನ ವಿರುದ್ಧ 100 ಕೋಟಿ ಮೊತ್ತದ ಮಾನನಷ್ಟು ಮೊಕದ್ದಮೆ ಹೂಡಿದ್ದಾರೆ.

ಸಹೋದರ, ಮಾಜಿ ಪತ್ನಿ ವಿರುದ್ಧ 100 ಕೋಟಿ ಮಾನನಷ್ಟ ದಾವೆ ಹೂಡಿದ ನಟ ನವಾಜುದ್ಧೀನ್ ಸಿದ್ಧಿಕಿ
ನವಾಜುದ್ಧೀನ್ ಸಿದ್ಧಿಕಿ
Follow us on

ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ಧಿಕಿಯ (Nawazuddin Siddiqui) ಸಂಸಾರದ ಜಗಳ ಬೀದಿಗೆ ಬಂದು ಬಹುದಿನಗಳಾಗಿವೆ. ನವಾಜುದ್ದೀನ್ ಸಿದ್ಧಿಕಿಯ ಮಾಜಿ ಪತ್ನಿ ಆಲಿಯಾ ಸಿದ್ಧಿಕಿ ಅಲಿಯಾಸ್ ಅಂಜನಾ ಪಾಂಡೆ ನವಾಜುದ್ದೀನ್ ಮನೆಯ ಮುಂದೆ ನಿಂತು ವಿಡಿಯೋ ಮಾಡಿದ್ದರು. ಅದು ಬಹಳ ವೈರಲ್ ಆಗಿತ್ತು. ನವಾಜುದ್ದೀನ್ ಸಿದ್ಧಿಕಿ ಸಹೋದರನೂ ಸಹ ಅಣ್ಣನ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದರು. ಮಾಜಿ ಪತ್ನಿ, ಸಹೋದರ ಏನೇ ಹೇಳಿದರು ಸುಮ್ಮನೇ ಇದ್ದ ನವಾಜುದ್ಧೀನ್ ಸಿದ್ಧಿಕಿ ಕೆಲ ದಿನಗಳ ಹಿಂದೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿದ್ದರು. ಇದೀಗ 100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ನವಾಜುದ್ಧೀನ್ ಸಿದ್ಧಿಕಿ ಪರವಾಗಿ ವಕೀಲ ಸುನಿಲ್ ಕುಮಾರ್ ನ್ಯಾಯಾಲಯದಲ್ಲಿ ದಾವೆಯ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆ ಮಾರ್ಚ್ 30 ರಂದು ನಡೆಯಲಿದೆ. ದೂರಿನಲ್ಲಿ ಮಾಜಿ ಪತ್ನಿ ಹಾಗೂ ಸಹೋದರ ಶಮ್ಷುದ್ಧೀನ್ ಸಿದ್ಧಿಕಿ ವಿರುದ್ಧ ಮಾನನಷ್ಟ, ಸುಳ್ಳು ಆರೋಪ, ಮಾನಸಿಕ ಹಿಂಸೆ ನೀಡಿದ್ದಾರೆಂದು ನವಾಜುದ್ಧೀನ್ ಸಿದ್ಧಿಕಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಈ ಇಬ್ಬರೂ, ತಮ್ಮ ಪರವಾಗಿ ಭವಿಷ್ಯದಲ್ಲಿ ಮಾನಹಾನಿ ಉಂಟುಮಾಡುವ ಹೇಳಿಕೆಯನ್ನಾಗಲಿ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕಂಟೆಂಟ್ ಅನ್ನು ಹಾಕುವುದಕ್ಕೆ ತಡೆ ನೀಡಬೇಕೆಂದು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಜೊತೆಗೆ ಇಬ್ಬರೂ ತಮಗೆ ಕ್ಷಮೆ ಕೇಳಬೇಕೆಂದು ಸಹ ಸಿದ್ಧಿಕಿ ಹೇಳಿದ್ದಾರೆ.

ಅದು ಮಾತ್ರವೇ ಅಲ್ಲದೆ, ತಮ್ಮ ವಿರುದ್ಧ ಈ ಇಬ್ಬರೂ ಸುಳ್ಳು ಆರೋಪಗಳನ್ನು ಮಾಡಲು, ಮಾನಹಾನಿ ಮಾಡಲು ಯಾರ ಸಹಾಯ ತೆಗೆದುಕೊಂಡಿದ್ದಾಗಿಯೂ ಬಹಿರಂಗಪಡಿಸುವಂತೆ ಸೂಚಿಸಬೇಕಾಗಿಯೂ ಸಿದ್ಧಿಕಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹಾಗೂ ಇನ್ನು ಮುಂದೆ ಮಾಜಿ ಪತ್ನಿ ಹಾಗೂ ಸಹೋದರ ಇಬ್ಬರೂ ತಮ್ಮ ಆಸ್ತಿಗಳನ್ನು ಬಳಸದಂತೆ ತಡೆಯಾಜ್ಞೆ ನೀಡಬೇಕೆಂದು ಸಹ ಕೋರಿದ್ದಾರೆ ನವಾಜುದ್ದೀನ್.

ಮಾಜಿ ಪತ್ನಿ ಹಾಗೂ ಸಹೋದರ ಶಮ್ಷುದ್ಧೀನ್ ವಿರುದ್ಧ ಬಹುದೀರ್ಘವಾದ ದೂರನ್ನೇ ನವಾಜುದ್ಧೀನ್ ಸಿದ್ಧಿಕಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇಬ್ಬರೂ ತಮಗೆ ಮಾಡಿದ್ದಾರೆ ಎನ್ನಲಾದ ಮೋಸವನ್ನು, ಮಾಡಿರುವ ಹಣ ಆಸ್ತಿ ನಷ್ಟವನ್ನು ವಿವರಿಸಿದ್ದಾರೆ. ಕೆಲಸ ಇಲ್ಲದ ಸಹೋದರ ಶಮ್ಷುದ್ಧೀನ್ ಅನ್ನು ತಮ್ಮ ಮ್ಯಾನೇಜರ್ ಆಗಿ ಇಟ್ಟುಕೊಂಡು ಅವನಿಗೆ ನನ್ನ ಹಣಕಾಸು ವ್ಯವಹಾರ ನೋಡಿಕೊಳ್ಳಲು ಬಿಟ್ಟೆ. ಅವನು ನನ್ನ ಹೆಸರಿನಲ್ಲಿ ಆಸ್ತಿ, ಕಾರು ಖರೀದಿಸುತ್ತೇನೆಂದು ಹೇಳಿ ಇಬ್ಬರ ಹೆಸರಿನಲ್ಲೂ ಖರೀದಿಸಿದ್ದಾನೆ. ಯಾರಿ ರಸ್ತೆಯಲ್ಲಿ ಎರಡು ಆಸ್ತಿಗಳು, ಶಹಪುರದಲ್ಲಿ ಒಂದು ಫಾರಂ ಹೌಸ್, ಬುಲ್ದಾನಾ ಹಾಗೂ ದುಬೈನಲ್ಲಿ ಆಸ್ತಿ, 14 ಕಾರುಗಳನ್ನು ನನ್ನ ಹಣದಲ್ಲಿ ಆತನೂ ಪಾಲುದಾರನಾಗಿರುವಂತೆ ಖರೀದಿ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದಾಗ ನನ್ನ ಪತ್ನಿಯ ಕೈಯಿಂದ ನನ್ನ ಮೇಲೆ ತರಹೇ ವಾರಿ ದೂರುಗಳನ್ನು ದಾಖಲಿಸಿದ್ದಾನೆ ಎಂದಿದ್ದಾರೆ ಸಿದ್ಧಿಕಿ.

ತಮ್ಮ ಮಾಜಿ ಪತ್ನಿಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರುವ ಸಿದ್ಧಿಕಿ, ಆಕೆಯನ್ನು ನಾನು ಮದುವೆಯಾಗುವ ಮುನ್ನ ಆಕೆ ಒಬ್ಬಾತನನ್ನು ಮದುವೆಯಾಗಿದ್ದಳು. ಆದರೆ ನಾನು ಕೇಳಿದಾಗ ಆಕೆ, ನಾನು ಮದುವೆಯಾಗದ ಮುಸ್ಲಿಂ ಯುವತಿ ಎಂದು ಸುಳ್ಳು ಹೇಳಿದ್ದಳು. ನನ್ನ ಮಾಜಿ ಪತ್ನಿ ಹಾಗೂ ಸಹೋದರ ಸೇರಿಕೊಂಡು ಸುಮಾರು 21 ಕೋಟಿ ರುಪಾಯಿ ಮೋಸವನ್ನು ನನಗೆ ಮಾಡಿದ್ದಾರೆ. ನನ್ನ ಸಹೋದರನನ್ನು 2020 ರಲ್ಲಿ ಕೆಲಸದಿಂದ ತೆಗೆದು ಬೇರೊಬ್ಬ ಸಿಎ ಅನ್ನು ನೇಮಕ ಮಾಡಿಕೊಂಡಾಗ ನನಗೆ ಗೊತ್ತಾಗಿದ್ದೆಂದರೆ ಆತ 37 ಕೋಟಿ ಮೊತ್ತದ ಹಣವನ್ನು ಬಿಲ್ ಹಾಗೂ ಇತರೆ ತೆರಿಗೆ ಹಣ ಕಟ್ಟದೆ ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದ ಎಂದಿದ್ದಾರೆ ಸಿದ್ಧಿಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Sun, 26 March 23