‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ

Nawazuddin Siddiqui: ಸೌತ್​ ಸಿನಿಮಾಗಳ ಗೆಲುವಿನಿಂದ ಬಾಲಿವುಡ್​ನಲ್ಲಿ ಹೊಸ ಚರ್ಚೆ ಶುರು ಆಗಿದೆ. ಹಿಂದಿ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ
ನವಾಜುದ್ದೀನ್ ಸಿದ್ದಿಕಿ, ಯಶ್
TV9kannada Web Team

| Edited By: Madan Kumar

Apr 30, 2022 | 12:12 PM

ಭಾರತೀಯ ಚಿತ್ರರಂಗದಲ್ಲಿ ಈಗ ಹೊಸ ಚರ್ಚೆ ಶುರುವಾಗಿದೆ. ಸೌತ್​ ವರ್ಸಸ್​ ನಾರ್ತ್​ ಎಂಬ ವಾತಾವರಣ ನಿರ್ಮಾಣ ಆಗಿದೆ. ಇಷ್ಟು ದಿನಗಳ ಕಾಲ ದೇಶಾದ್ಯಂತ ಪ್ರಾಬಲ್ಯ ಹೊಂದಿದ್ದ ಬಾಲಿವುಡ್ (Bollywood)​ ಸಿನಿಮಾಗಳು ಈಗ ಮಂಕಾಗಿವೆ. ಅವುಗಳ ಎದುರು ದಕ್ಷಿಣ ಭಾರತದ ಬಿಗ್​ ಬಜೆಟ್​ ಸಿನಿಮಾಗಳು ಶೈನ್​ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದ ಹಿಂದಿ ಚಿತ್ರಗಳು ಈಗ ಏಕಾಏಕಿ ನೆಲ ಕಚ್ಚಿರುವುದು ಯಾಕೆ ಎಂಬ ಕುರಿತು ಚರ್ಚೆ ಆಗುತ್ತದೆ. ನಟ ನವಾಜುದ್ದೀನ್​ ಸಿದ್ದಿಕಿ (Nawazuddin Siddiqui) ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ದಕ್ಷಿಣ ಭಾರತದ ಸಿನಿಮಾಗಳ (South Cinema) ಅಭೂತಪೂರ್ವ ಗೆಲುವಿನಿಂದಾಗಿ ಬಾಲಿವುಡ್​ ಮಂದಿಗೆ ಅಭದ್ರತೆ ಕಾಡುತ್ತಿದೆಯೇ ಎಂದು ಕೇಳಿದ್ದಕ್ಕೆ ನಾವಾಜುದ್ದೀನ್​ ಸಿದ್ದಿಕಿ ಉತ್ತರಿಸಿದ್ದಾರೆ. ಇದೆಲ್ಲವೂ ಸದ್ಯದ ಟ್ರೆಂಡ್​ ಅಷ್ಟೇ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳುವುದರ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಬಾಲಿವುಡ್​ನಲ್ಲಿ ನವಾಜುದ್ದೀನ್​ ಸಿದ್ದಿಕಿ ಸಖತ್ ಬೇಡಿಕೆ ಸೃಷ್ಟಿಕೊಂಡಿದ್ದಾರೆ. ಎಲ್ಲ ಬಗೆಯ ಪಾತ್ರಗಳಿಗೂ ಅವರು ಜೀವ ತುಂಬುತ್ತಾರೆ. ಖಳನಾಗಿ, ಹೀರೋ ಆಗಿ, ಪೋಷಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ವಾರ (ಏ.29) ತೆರೆಕಂಡ ‘ಹೀರೋಪಂತಿ 2’ ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಟೈಗರ್​ ಶ್ರಾಫ್​ ಹೀರೋ. ಆದರೆ ‘ಕೆಜಿಎಫ್​ 2’ ಸಿನಿಮಾದ ಹವಾ ಎದುರು ‘ಹೀರೋಪಂತಿ 2’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಓಪನಿಂಗ್​ ಸಿಕ್ಕಿಲ್ಲ. ಅದೇ ರೀತಿ, ಕಳೆದ ವಾರ ತೆರೆಕಂಡ ಶಾಹಿದ್​ ಕಪೂರ್​ ನಟನೆಯ ‘ಜೆರ್ಸಿ’ ಸಿನಿಮಾ ಕೂಡ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿದೆ. ಹಾಗಿದ್ದರೂ ಕೂಡ ನವಾಜುದ್ದೀನ್​ ಸಿದ್ದಿಕಿ ಅವರು ಈ ಸಂದರ್ಭವನ್ನು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ.

‘ಒಂದು ಸಿನಿಮಾ ಗೆದ್ದಾಗ ಎಲ್ಲರೂ ಅದರ ಜೊತೆ ನಿಲ್ಲುತ್ತಾರೆ ಮತ್ತು ಅಗತ್ಯಕ್ಕಿಂತಲೂ ಹೆಚ್ಚಾಗಿ ಹೊಗಳುತ್ತಾರೆ. ಹಾಗೆಯೇ ಒಂದು ಸಿನಿಮಾ ಸೋತಾಗ ಜನರು ಅಗತ್ಯಕ್ಕಿಂತಲೂ ಜಾಸ್ತಿ ಟೀಕಿಸುತ್ತಾರೆ. ಇದು ಫ್ಯಾಷನ್​ ಇದ್ದಂತೆ. ಒಂದು ವೇಳೆ ಬಾಲಿವುಡ್​ ಸಿನಿಮಾ ಗೆದ್ದರೆ ಈ ಮಾತುಗಳೆಲ್ಲ ಬದಲಾಗುತ್ತವೆ. ನನ್ನ ಪ್ರಕಾರ ಇದು ಒಂದು ಟ್ರೆಂಡ್​ ಅಷ್ಟೇ’ ಎಂದು ನವಾಜುದ್ದೀನ್​ ಸಿದ್ದಿಕಿ ಹೇಳಿದ್ದಾರೆ.

ಬಾಲಿವುಡ್​ನವರು ಅತಿಯಾಗಿ ಸೌತ್​ ಸಿನಿಮಾಗಳನ್ನು ರಿಮೇಕ್​ ಮಾಡುವ ಬಗ್ಗೆಯೂ ನವಾಜುದ್ದೀನ್​ ಸಿದ್ದಿಕಿ ಅವರಿಗೆ ತಕರಾರು ಇದೆ. ಆ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದರು. ದಕ್ಷಿಣ ಭಾರತದ ಹಲವು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ಇದು ತಪ್ಪು ಅನ್ನೋದು ನವಾಜುದ್ದೀನ್ ಅವರ ಅಭಿಪ್ರಾಯ. ‘ನಮ್ಮಿಂದ ಒಂದು ತಪ್ಪು ನಡೆದಿದೆ. ನಾವು ಸೌತ್ ಚಿತ್ರಗಳನ್ನು ರೀಮೇಕ್ ಮಾಡುತ್ತಲೇ ಇದ್ದೇವೆ. ನಾವು ಒರಿಜಿನಲ್​ ಸ್ಟೋರಿಗಳನ್ನು ಮಾಡುತ್ತಿಲ್ಲ. ನಾವು ರಿಮೇಕ್​ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಮೂಲ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕಿದೆ’ ಎಂದಿದ್ದರು ನವಾಜುದ್ದೀನ್ ಸಿದ್ದಿಕಿ.

ಒಟ್ಟಿನಲ್ಲಿ ‘ಆರ್​ಆರ್​ಆರ್​’, ‘ಪುಷ್ಪ’ ಹಾಗೂ ‘ಕೆಜಿಎಫ್​ 2’ ಸಿನಿಮಾದ ಗೆಲುವಿನಿಂದ ಬಾಲಿವುಡ್​ನಲ್ಲಿ ಹೊಸ ಚರ್ಚೆ ಶುರು ಆಗಿರುವುದಂತೂ ನಿಜ. ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳೆಲ್ಲರೂ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada