ಜಾಕ್ವೆಲಿನ್ ಫರ್ನಾಂಡಿಸ್ಗೆ ಶಾಕ್; 7 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿದ ಜಾರಿ ನಿರ್ದೇಶನಾಲಯ
ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ (Jacqueline Fernandez) ಸಾಕಷ್ಟು ಸಂಕಷ್ಟ ಎದುರಾಗುತ್ತಿದೆ. ಅವರ ವರ್ಚಸ್ಸಿಗೆ ಹಾನಿ ಆಗುವಂತಹ ಘಟನೆ ನಡೆಯುತ್ತಿದೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ (Sukesh Chandrashekhar) ಜತೆ ಜಾಕ್ವೆಲಿನ್ಗೆ ನಂಟು ಇದೆ ಎನ್ನಲಾಗುತ್ತಿದೆ. ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಜಾಕ್ವೆಲಿನ್ಗೆ ಸಂಬಂಧಿಸಿದ 7.27 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಎಫ್ಡಿ ಹಣ ಕೂಡ ಸೇರಿದೆ.
‘ಅಕ್ರಮವಾಗಿ ಗಳಿಸಿದ ಹಣದಿಂದ ವಿವಿಧ ಉಡುಗೊರೆಗಳನ್ನು ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ನೀಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ. ಇದರ ಮೌಲ್ಯ 5.71 ಕೋಟಿ ರೂಪಾಯಿ ಆಗಿದೆ. ಸುಕೇಶ್ ಚಂದ್ರಶೇಖರ್ ಅವರು ತಮ್ಮ ಸಹವರ್ತಿ ಮತ್ತು ಈ ಪ್ರಕರಣದ ಆರೋಪಿ ಪಿಂಕಿ ಇರಾನಿ ಮೂಲಕ ಉಡುಗರೆಗಳನ್ನು ಜಾಕ್ವೆಲಿನ್ಗೆ ತಲುಪಿಸಿದ್ದರು. ಈ ಉಡುಗೊರೆಗಳ ಜೊತೆಗೆ, ಸುಕೇಶ್ ಚಂದ್ರಶೇಖರ್ 1.32 ಕೋಟಿ (1,72,913 ಡಾಲರ್) ಹಾಗೂ 14 ಲಕ್ಷ ರೂಪಾಯಿಯನ್ನು ಜಾಕ್ವೆಲಿನ್ ಅವರ ಕುಟುಂಬ ಸದಸ್ಯರಿಗೆ ಹವಾಲ ಮೂಲಕ ತಲುಪಿಸಿದ್ದರು’ ಎಂದು ಇಡಿ ಸ್ಟೇಟ್ಮೆಂಟ್ನಲ್ಲಿ ತಿಳಿಸಿದೆ.
‘ವೆಬ್-ಸರಣಿ ಪ್ರಾಜೆಕ್ಟ್‌ನ ಸ್ಕ್ರಿಪ್ಟ್ ಬರೆಯಲು ಜಾಕ್ವೆಲಿನ್ ಫರ್ನಾಂಡೀಸ್ ಪರವಾಗಿ ಸ್ಕ್ರಿಪ್ಟ್ ರೈಟರ್‌ಗೆ ಸುಕೇಶ್ ಚಂದ್ರಶೇಖರ್ ಮುಂಗಡವಾಗಿ 15 ಲಕ್ಷ ರೂಪಾಯಿಗಳ ಹಣವನ್ನು ತಲುಪಿಸಿದ್ದರು. ಈ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಇಡಿ ತಿಳಿಸಿದೆ.
ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರು ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವುದು ಅಧಿಕಾರಿಗಳಿಗೆ ತಿಳಿದುಬಂದಿದೆ. ಇಬ್ಬರ ನಡುವಿನ ವ್ಯವಹಾರ ಯಾವ ರೀತಿ ಇತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸುಕೇಶ್ ಚಂದ್ರಶೇಖರ್ ಒಡೆತನದಲ್ಲಿ ಇದ್ದ ಚೆನ್ನೈನ ಬಂಗಲೆ, 82 ಲಕ್ಷ ರೂ. ಹಣ ಹಾಗೂ 10ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಇಡಿ ಅಧಿಕಾರಿಗಳು ಈ ಮೊದಲೇ ಮುಟ್ಟುಗೋಲು ಹಾಕಿಕೊಂಡಿದ್ದರು.
ಇದನ್ನೂ ಓದಿ: ‘ಜಾಕ್ವೆಲಿನ್ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್ ಚಂದ್ರಶೇಖರ್ ಹೊಸ ಪುರಾಣ
ಸುಕೇಶ್ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್; ಕತ್ತಿನ ಮೇಲಿರುವ ಅಚ್ಚೇನು?