ಚಿತ್ರರಂಗಕ್ಕೆ ಅಂಟಿರುವ ಡ್ರಗ್ಸ್ (Drugs Case) ಜಾಲದ ನಂಟು ತುಂಬಾ ವಿಸ್ತಾರವಾಗಿದೆ. ತನಿಖೆ ಮಾಡಿದಂತೆಲ್ಲ ಇದರ ವ್ಯಾಪ್ತಿ ವಿಸ್ತಾರ ಆಗುತ್ತಲೇ ಇದೆ. ಮಾದಕ ವಸ್ತು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಈಗಾಗಲೇ ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಎನ್ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈಗ ನಟ ಅರ್ಮಾನ್ ಕೊಹ್ಲಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅರ್ಮಾನ್ ಕೊಹ್ಲಿ (Armaan Kohli) ಅವರನ್ನು ಬಂಧಿಸಲಾಗಿದೆ.
ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಅರ್ಮಾನ್ ಕೊಹ್ಲಿ ಫೇಮಸ್ ಆಗಿದ್ದಾರೆ. ಮುಂಬೈನಲ್ಲಿ ಹರಡಿರುವ ಡ್ರಗ್ಸ್ ಜಾಲವನ್ನು ಎನ್ಸಿಬಿ ಅಧಿಕಾರಿಗಳು ಭೇದಿಸುತ್ತಿದ್ದಾರೆ. ಶನಿವಾರ (ಆ.28) ಅಜಯ್ ರಾಜು ಸಿಂಗ್ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ ಅರ್ಮಾನ್ ಕೊಹ್ಲಿ ಮನೆ ಮೇಲೆ ದಾಳಿ ಮಾಡಲಾಯಿತು. ಆಗ ಅನೇಕ ಮಾದಕ ವಸ್ತುಗಳು ಅವರ ಮನೆಯಲ್ಲಿ ಪತ್ತೆ ಆಗಿವೆ ಎನ್ನಲಾಗಿದೆ.
ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಕೊಹ್ಲಿ ಹಾಗೂ ನಟಿ ನಿಶಿ ಅವರ ಪುತ್ರ ಅರ್ಮಾನ್ ಕೊಹ್ಲಿ. ಬಾಲನಟನಾಗಿಯೇ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1992ರಲ್ಲಿ ಅವರ ತಂದೆಯೇ ನಿರ್ದೇಶಿಸಿದ ‘ವಿರೋಧಿ’ ಸಿನಿಮಾ ಮೂಲಕ ಅವರು ಹೀರೋ ಆದರು. ನಂತರ ಅನೇಕ ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸಿದರು. ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಅವರು ಸ್ಪರ್ಧಿಸಿದ್ದರು. 98 ದಿನಗಳ ಕಾಲ ಪೈಪೋಟಿ ನೀಡಿದ್ದರು. ಈಗ ಡ್ರಗ್ಸ್ ಕೇಸ್ನಲ್ಲಿ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ.
ಇದೇ ಕೇಸ್ನಲ್ಲಿ ಶನಿವಾರ (ಆ.28) ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಬಂಧಿಸಲಾಗಿತ್ತು. ಇನ್ನೂ ಅನೇಕರು ಈ ಜಾಲದಲ್ಲಿ ತೊಡಗಿಕೊಂಡಿರುವ ಸಾಧ್ಯತೆ ಇದ್ದು, ಅವರೆಲ್ಲರಿಗೂ ಬಂಧನದ ಭೀತಿ ಎದುರಾಗಿದೆ. ಕನ್ನಡ, ತೆಲುಗು ಸೇರಿ ಎಲ್ಲ ಭಾಷೆಯ ಚಿತ್ರರಂಗದಲ್ಲೂ ಡ್ರಗ್ಸ್ ವಾಸನೆ ಬಡಿಯುತ್ತಿದೆ. ಈ ದಂಧೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಯಲ್ಲೂ ಸೆಲೆಬ್ರಿಟಿಗಳು ಭಾಗಿ ಆಗಿರುವ ಶಂಕೆ ಇದೆ. ಹಾಗಾಗಿ ಕೆಲವೇ ದಿನಗಳ ಹಿಂದೆ ಟಾಲಿವುಡ್ನ ಅನೇಕ ಟಾಪ್ ನಟ-ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.
ಇದನ್ನೂ ಓದಿ:
ಡ್ರಗ್ಸ್ ಕೇಸ್: ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ ಸೇರಿ ಟಾಲಿವುಡ್ನ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್