ಡ್ರಗ್ಸ್ ಕೇಸ್: ರಾಣಾ ದಗ್ಗುಬಾಟಿ, ರಾಕುಲ್, ರವಿತೇಜ ಸೇರಿ ಟಾಲಿವುಡ್ನ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್
ಸೆ.6ರಂದು ರಾಕುಲ್ ಪ್ರೀತ್ ಸಿಂಗ್, ಸೆ.8ರಂದು ರಾಣಾ ದಗ್ಗುಬಾಟಿ, ಸೆ.9ರಂದು ರವಿತೇಜ, ಸೆ.31ರಂದು ನಿರ್ದೇಶಕ ಪುರಿ ಜಗನ್ನಾಥ್ ಅವರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದೆ. ಒಟ್ಟು 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ.
ಡ್ರಗ್ಸ್ ಪಿಡುಗಿನ (Drug Case) ಜೊತೆ ಸೆಲೆಬ್ರಿಟಿಗಳ ಹೆಸರು ತಳುಕು ಹಾಕಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಮುಜುಗರ ತರಿಸುವಂತಹ ಸಂಗತಿ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಮಾದಕ ವಸ್ತು ಜಾಲ ಹರಡಿರುವ ಬಗ್ಗೆ ಸುಳಿವು ಸಿಗುತ್ತಿದೆ. ಕನ್ನಡ ಮತ್ತು ಹಿಂದಿ ಚಿತ್ರರಂಗದ ಅನೇಕರು ಡ್ರಗ್ಸ್ ಕೇಸ್ನಲ್ಲಿ ಜೈಲು ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅಷ್ಟರಲ್ಲಾಗಲೇ ತೆಲುಗು ಚಿತ್ರರಂಗದ 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯ (Enforcement Directorate) ಸಮನ್ಸ್ ಜಾರಿ ಮಾಡಿದೆ. ರಾಣಾ ದಗ್ಗುಬಾಟಿ (Rana Daggubati), ರಾಕುಲ್ ಪ್ರೀತ್ ಸಿಂಗ್ (Rakul Preet Singh), ಪುರಿ ಜಗನ್ನಾಥ್, ರವಿತೇಜ ಮುಂತಾದವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಅಂದಹಾಗೆ, ಇದು 4 ವರ್ಷ ಹಿಂದಿನ ಪ್ರಕರಣ. 2017ರಲ್ಲಿ ದೊಡ್ಡ ಮಾದಕ ವಸ್ತು ಜಾಲ ಪತ್ತೆ ಆಗಿತ್ತು. ಅದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 12 ಕೇಸ್ಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ‘ಇವರೆಲ್ಲರನ್ನು ಆರೋಪಿಗಳು ಎಂದು ಹೇಳಲಾಗಿಲ್ಲ. ಅಕ್ರಮ ಹಣ ವರ್ಗಾವಣೆಯಲ್ಲಿ ಈ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೋ ಇಲ್ಲವೋ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಸೆ.6ರಂದು ರಾಕುಲ್ ಪ್ರೀತ್ ಸಿಂಗ್, ಸೆ.8ರಂದು ರಾಣಾ ದಗ್ಗುಬಾಟಿ, ಸೆ.9ರಂದು ರವಿತೇಜ, ಸೆ.31ರಂದು ನಿರ್ದೇಶಕ ಪುರಿ ಜಗನ್ನಾಥ್ ಅವರ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಒಟ್ಟು 8 ಸೆಲೆಬ್ರಿಟಿಗಳಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 30 ಜನರನ್ನು ಬಂಧಿಸಲಾಗಿದೆ. 62 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆ ಪೈಕಿ 11 ಮಂದಿಗೆ ಸಿನಿಮಾ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಇರುವುದು ತಿಳಿದುಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಹೈದರಾಬಾದ್ನಲ್ಲಿ ಹಲವು ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬಂದಿದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ ಮಾಡುತ್ತಿರುವುದು ಗೊತ್ತಾಗಿದೆ. 26 ಶಾಲೆಗಳು, 27 ಕಾಲೇಜುಗಳು ಹಾಗೂ ಮಕ್ಕಳ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿಲಾಗಿದೆ. ಬ್ಯಾನ್ ಆಗಿರುವ ಅನೇಕ ಡ್ರಗ್ಗಳನ್ನು ಪಬ್, ಶಾಲೆ, ಕಾಲೇಜುಗಳಿಗೆ ಬಂಧಿತರು ಪೂರೈಕೆ ಮಾಡುತ್ತಿದ್ದರು. ಇಂಜಿನಿಯರಿಂಗ್ ಪದವಿಧರರು, ಸುಶಿಕ್ಷಿತರು, ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:
Sandalwood Drug Case: ಡ್ರಗ್ ಸೇವನೆ ದೃಢಪಟ್ಟ ಬೆನ್ನಲ್ಲೇ ವಕೀಲರ ಸಲಹೆ ಪಡೆದ ನಟಿ ರಾಗಿಣಿ ದ್ವಿವೇದಿ! ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ