ನೇಹಾ ಕಕ್ಕಡ್ ಬಾಲಿವುಡ್ನ (Bollywood) ಜನಪ್ರಿಯ ಗಾಯಕಿಯರಲ್ಲಿ ಒಬ್ಬರು. ಸಿಂಗಿಂಗ್ ರಿಯಾಲಿಟಿ ಶೋನ ಜಡ್ಜ್ ಸಹ ಆಗಿರುವ ನೇಹಾ ಕಕ್ಕರ್ ಹಿಂದಿ ಮಾತ್ರವೇ ಅಲ್ಲದೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ದೇಶ ವಿದೇಶಗಳಲ್ಲಿ ಲೈವ್ ಶೋಗಳನ್ನು ಸಹ ನೇಹಾ ಕಕ್ಕಡ್ ನೀಡುತ್ತಿರುತ್ತಾರೆ. ಆದರೆ ಇತ್ತೀಚೆಗಷ್ಟೆ ನೇಹಾ ಕಕ್ಕಡ್ ಆಸ್ಟ್ರೇಲಿಯಾದ ಮೆಲ್ಬರ್ನ್ಗೆ ಶೋ ನೀಡಲೆಂದು ತೆರಳಿದ್ದರು. ಆ ಶೋನ ಒಂದು ವಿಡಿಯೋ ವೈರಲ್ ಆಗಿದ್ದು, ನೆರೆದಿದ್ದ ಜನರೆಲ್ಲ ನೇಹಾಗೆ ಧಿಕ್ಕಾರ ಕೂಗುತ್ತಿದ್ದರೆ ನೇಹಾ, ವೇದಿಕೆ ಮೇಲೆ ನಿಂತು ಜೋರಾಗಿ ಅಳುತ್ತಾ, ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ನೇಹಾ ತಡವಾಗಿ ಬಂದಿದ್ದಕ್ಕೆ ಕಾಯುತ್ತಾ ಕೂತಿದ್ದ ಪ್ರೇಕ್ಷಕರು ಬೈದರು, ಹಾಗಾಗಿ ನೇಹಾ ಅಳುತ್ತಾ ಮನವಿ ಮಾಡಿದರು ಎನ್ನಲಾಗುತ್ತು. ಇದೀಗ ಆ ಘಟನೆ ಬಗ್ಗೆ ನೇಹಾ ಮಾತನಾಡಿದ್ದಾರೆ.
ಮೆಲ್ಬೋರ್ನ್ ಶೋಗೆ ಬರೋಬ್ಬರಿ ಮೂರು ಗಂಟೆ ತಡವಾಗಿ ಬಂದರಂತೆ ನೇಹಾ, ಕಾಯುತ್ತಾ ಕೂತಿದ್ದ ಪ್ರೇಕ್ಷಕರು ನೇಹಾರನ್ನು ಮೂದಲಿಸಿದ್ದು ಮಾತ್ರವೇ ಅಲ್ಲದೆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ನೇಹಾ ಅಳುತ್ತಾ ಎಲ್ಲರ ಬಳಿ ಮನವಿ ಮಾಡಿ, ಹಾಡು ಹಾಡಲು ಆರಂಭಿಸಿದ್ದಾರೆ. ಆದರೆ ಅಂದು ತಡವಾಗಿದ್ದು ಏಕೆ? ತಾವು ಅತ್ತಿದ್ದು ಏಕೆ ಎಂದು ಗಾಯಕಿ ನೇಹಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿವರಗಳನ್ನು ಹಂಚಿಕೊಂಡಿದ್ದಾರೆ.
‘ನೇಹಾ ಮೂರು ಗಂಟೆ ತಡವಾಗಿ ಬಂದಳು ಎಂದಿದ್ದಾರೆ ಆದರೆ ಅಂದು ನಾನು ಏಕೆ ಅಷ್ಟು ತಡವಾಗಿ ಬಂದೆ ಎಂದು ಯಾರೂ ಸಹ ಕೇಳಿಲ್ಲ. ನನಗೆ, ನನ್ನ ಜೊತೆ ಬಂದ ಸಂಗೀತಗಾರರಿಗೆ ಏನಾಯ್ತು ಎಂದು ಯಾರೂ ಕೇಳಲಿಲ್ಲ. ಅಂದು ಸಹ ನಾನು ವೇದಿಕೆ ಮೇಲೆ ಮಾತನಾಡಿದಾಗ ಅಂದು ನನಗೆ, ನನ್ನ ಸಂಗೀತ ತಂಡಕ್ಕೆ ಏನಾಯಿತು ಎಂದು ನಾನು ಹೇಳಲಿಲ್ಲ. ನನ್ನ ಉದ್ದೇಶ ಇದ್ದಿದ್ದು ಹೇಗಾದರೂ ಮಾಡಿ ಕಾಯುತ್ತಿರುವ ಜನರಿಗೆ ಮನರಂಜನೆ ಒದಗಿಸಬೇಕು, ಹಾಗೂ ನನ್ನಿಂದ ಯಾರಿಗೂ ತೊಂದರೆ ಆಗಬಾರದು ಎಂಬುದಷ್ಟೆ ಆಗಿತ್ತು’ ಎಂದಿದ್ದಾರೆ.
ಇದನ್ನೂ ಓದಿ:ಕಡಲ ತೀರದಲ್ಲಿ ನೇಹಾ ಕಕ್ಕರ್ ಸ್ನಾನ; ಫೇಮಸ್ ಗಾಯಕಿಯ ಹಾಟ್ ಅವತಾರ
‘ಅಂದು ನಾನು ಮತ್ತು ನಮ್ಮ ತಂಡ ಸಂಪೂರ್ಣ ಉಚಿತವಾಗಿ ಪ್ರದರ್ಶನ ನೀಡಿದೆವು ಎಂಬುದು ನಿಮಗೆ ಗೊತ್ತೆ? ಅಂದು ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಗಳು ಎಲ್ಲ ಟಿಕೆಟ್ ಹಣವನ್ನು ತೆಗೆದುಕೊಂಡು ಪರಾರಿಯಾದರು. ನಮ್ಮ ಫೋನ್ ಕರೆಗಳನ್ನು ಅವರು ಸ್ವೀಕರಿಸಲಿಲ್ಲ. ನಮ್ಮ ಬ್ಯಾಂಡ್ನವರಿಗೆ ಊಟ, ವಸತಿ ಕನಿಷ್ಟ ನೀರಿನ ವ್ಯವಸ್ಥೆ ಸಹ ಇರಲಿಲ್ಲ. ಕೊನೆಗೆ ನನ್ನ ಪತಿಯೇ ಎಲ್ಲರಿಗೂ ಊಟ, ವಸತಿ ಇನ್ನಿತರೆಗಳ ವ್ಯವಸ್ಥೆ ಮಾಡಿದರು. ಇಷ್ಟೆಲ್ಲ ಆದರೂ ನಾವು ವೇದಿಕೆ ಮೇಲೆ ಬಂದು ನಮಗಾಗಿ ಕಾಯುತ್ತಿದ್ದವರಿಗಾಗಿ ಪ್ರದರ್ಶನ ನೀಡಿದೆವು’ ಎಂದಿದ್ದಾರೆ ನೇಹಾ.
‘ಅಂದು ಸೌಂಡ್ ಚೆಕ್ ಸಹ ಆಗಿರಲಿಲ್ಲ. ಸೌಂಡ್ ಆಪರೇಟ್ ಮಾಡುವ ವ್ಯಕ್ತಿಗೆ ಹಣ ನೀಡಿರಲಿಲ್ಲವೆಂಬ ಕಾರಣಕ್ಕೆ ಆ ವ್ಯಕ್ತಿ ಸೌಂಡ್ ಆನ್ ಮಾಡುವುದೇ ಇಲ್ಲ ಎಂದಿದ್ದ. ಆತನ ಮನವೊಲಿಸಿ, ಕೈಯಿಂದ ಹಣ ಕೊಟ್ಟು ಆನ್ ಮಾಡಿಸಿದೆವು. ಅಂದು ಸೌಂಡ್ ಚೆಕ್ ಇಲ್ಲದೆ ನಾನು ಹಾಡು ಹಾಡಿದೆ. ಕೊನೆಯ ಕ್ಷಣದ ವರೆಗೆ ಕಾನ್ಸರ್ಟ್ ಇದೆಯೋ ಇಲ್ಲವೋ, ನಡೆಯುತ್ತದೆಯೋ ಇಲ್ಲವೊ ಎಂಬುದು ಸಹ ಗೊತ್ತಿರಲಿಲ್ಲ. ಆ ಶೋನ ಆಯೋಜಕರು, ಸ್ಪಾನ್ಸರ್ಗಳು ಎಲ್ಲರೂ ಪಲಾಯನ ಮಾಡಿದರು. ಹೇಳುತ್ತಾ ಹೋದರೆ ಇನ್ನೂ ಸಾಕಷ್ಟಿದೆ ಆದರೆ ಇಷ್ಟು ಸಾಕು ಅನಿಸುತ್ತದೆ’ ಎಂದಿದ್ದಾರೆ ನೇಹಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Fri, 28 March 25