ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಬಳಿಕ ಕೊಂಚ ಸೈಲೆಂಟ್ ಆಗಿದ್ದಾರೆ. ಆ ಸಿನಿಮಾ ಹೀನಾಯವಾಗಿ ಸೋತಿದ್ದರಿಂದ ಮುಂದಿನ ಚಿತ್ರಗಳ ಆಯ್ಕೆಯಲ್ಲಿ ಅವರು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಎಂಬ ಕಾರಣಕ್ಕೆ ಆಮಿರ್ ಖಾನ್ ಅವರು ಸೋಶಿಯಲ್ ಮೀಡಿಯಾ (Aamir Khan Instagram Live) ಮೂಲಕ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಕೆಲವರು ಟ್ರೋಲ್ ಮಾಡಿದ್ದಾರೆ. ಡ್ರಗ್ಸ್ (Drugs) ಬಗ್ಗೆಯೂ ಆಮಿರ್ ಖಾನ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಆಮಿರ್ ಖಾನ್ ಉತ್ತರ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಆಮಿರ್ ಖಾನ್ ಅವರು ಲೈವ್ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಮಾಡಿದ ಕಮೆಂಟ್ಗಳಿಗೆ ಅವರು ಉತ್ತರಿಸಿದ್ದಾರೆ. ಲೈವ್ನಲ್ಲಿ ಮಾತನಾಡುವಾಗ ಆಮಿರ್ ಖಾನ್ ಅವರ ಮುಖ ಬಾಡಿದ ಹಾಗೆ ಕಾಣಿಸಿದೆ. ಅದೇ ಕಾರಣಕ್ಕೋ ಏನೋ ಕೆಲವರು ಟ್ರೋಲ್ ಮಾಡಿದ್ದಾರೆ. ‘ಸರ್, ನೀವು ಡ್ರಗ್ಸ್ ತೆಗೆದುಕೊಂಡಿದ್ದೀರಿ ಎನಿಸುತ್ತಿದೆ. ಡ್ರಗ್ಸ್ ಸೇವಿಸುವುದನ್ನು ನಿಲ್ಲಿಸಿ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಚ್ಚಿ ಬೀಳಿಸುತ್ತಿದೆ ಆಮಿರ್ ಖಾನ್ ಹೊಸ ಲುಕ್; ಅಭಿಮಾನಿಗಳಲ್ಲಿ ಹೆಚ್ಚಿದೆ ಕೌತುಕ
ಆಮಿರ್ ಖಾನ್ ಅವರು ಬೇಕಿದ್ದರೆ ಈ ಕಮೆಂಟ್ ನಿರ್ಲಕ್ಷಿಸಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇಂಥ ನೆಗೆಟಿವ್ ಕಮೆಂಟ್ಗಳನ್ನು ಕೂಡ ಅವರು ಓದಿದ್ದಾರೆ. ‘ನೀವು ಏನು ಹೇಳುತ್ತಿದ್ದೀರಿ’ ಎಂದು ಆಮಿರ್ ಖಾನ್ ಮರುಪ್ರಶ್ನೆ ಹಾಕಿದ್ದಾರೆ. ಆ ಮೂಲಕ ತಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ಸ್ಟೈಲಿಸ್ಟ್ನ ಬದಲಿಸಿ ಎಂದು ಕೂಡ ಕೆಲವರು ಸಲಹೆ ನೀಡಿದ್ದಾರೆ. ‘ನನ್ನ ಸ್ಟೈಲ್ ಭಿನ್ನವಾಗಿರುತ್ತದೆ. ಹಾಗಾಗಿ ಅನೇಕರಿಗೆ ಇಷ್ಟ ಆಗುವುದಿಲ್ಲ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ಆಮಿರ್ ಖಾನ್, ಸಲ್ಮಾನ್ ಖಾನ್, ಶಾರುಖ್ ಮುಂತಾದವರು ಡ್ಯಾನ್ಸ್ ಮಾಡಿದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗುತ್ತಿದೆ. ಲೈವ್ ಸೆಷನ್ ವೇಳೆ ಆ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ‘ನಿಮ್ಮ ಮಗಳ ಮದುವೆಯಲ್ಲಿಯೇ ಕುಣಿಯದ ನೀವು ಅಂಬಾನಿ ಕುಟುಂಬದ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ದು ಯಾಕೆ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನಾಟು ನಾಟು ಸ್ಟೆಪ್ ಹಾಕಲಾಗದೇ ಸೋತ ಆಮಿರ್, ಸಲ್ಲು, ಶಾರುಖ್; ಮುಜುಗರ ತಪ್ಪಿಸಲು ಮಾಡಿದ್ದೇನು?
‘ನಾನು ನನ್ನ ಮಗಳ ಮದುವೆಯಲ್ಲೂ ಡ್ಯಾನ್ಸ್ ಮಾಡಿದ್ದೇನೆ’ ಎಂದು ಹೇಳಿ ಆಮಿರ್ ಖಾನ್ ನಕ್ಕಿದ್ದಾರೆ. ‘ಮುಖೇಶ್ ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್ ಮಾಡಿದ್ದು ಯಾಕೆಂದರೆ ಅವರು ನನ್ನ ಆತ್ಮೀಯ ಸ್ನೇಹಿತರು. ಮುಖೇಶ್, ನೀತಾ ಮತ್ತು ಅವರ ಮಕ್ಕಳು ನಮ್ಮ ಕುಟುಂಬ ಇದ್ದಂತೆ. ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್ ಮಾಡುತ್ತೇನೆ. ನಮ್ಮ ಸಮಾರಂಭದಲ್ಲಿ ಅವರು ಡ್ಯಾನ್ಸ್ ಮಾಡುತ್ತಾರೆ’ ಎಂದು ಆಮಿರ್ ಖಾನ್ ಉತ್ತರ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.