ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಯ (Mukesh Ambani) ಪತ್ನಿ ನೀತಾ ಅಂಬಾನಿಯ (Nita Ambani) ಹೆಸರಲ್ಲಿ ನಿರ್ಮಿಸಲಾಗಿರುವ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMCC)ನ ಉದ್ಘಾಟನೆ ನೆನ್ನೆ ಬಹು ಅದ್ದೂರಿಯಾಗಿ ನೆರವೇರಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ನ ಬಹುತೇಕ ದೊಡ್ಡ ಸೆಲೆಬ್ರಿಟಿಗಳ ಜೊತೆಗೆ ಹಾಲಿವುಡ್ನ ಕೆಲ ಖ್ಯಾತಮಾನರೂ ಭಾಗವಹಿಸಿದ್ದು ವಿಶೇಷ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾರೆಯರ ಪಟ್ಟಿ ಬಹಳ ದೊಡ್ಡದಿದೆ. ಹಾಗಿದ್ದರೆ ಉದ್ಘಾಟನೆಯಾದ ಕಲ್ಚರಲ್ ಸೆಂಟರ್ನ ವಿಶೇಷತೆ ಏನು?
ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMCC) ಭಾರತದ ಅತಿ ದೊಡ್ಡ ಪ್ರದರ್ಶನ ಕಲಾ ಕೇಂದ್ರವಾಗಿದೆ. ಈ ಕೇಂದ್ರವು ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ಫ್ಯಾಷನ್ ಇನ್ನೂ ಹಲವು ಮಾದರಿಯ ಪ್ರದರ್ಶನಗಳಿಗೆ ವೇದಿಕೆ ಒದಗಿಸುತ್ತಿದೆ. ನಾಲ್ಕು ಅಂತಸ್ಥಿನ ಈ ಕೇಂದ್ರದಲ್ಲಿ ಒಮ್ಮೆಗೆ ಹಲವು ಪ್ರದರ್ಶನ ಕಲೆಗಳ ಪ್ರದರ್ಶನ ಹಾಗೂ ವೀಕ್ಷಣೆ ನಡೆಯಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕೇಂದ್ರವು ಒಳಗೊಂಡಿದ್ದು, ಸುಸಜ್ಜಿತ ಸ್ಟುಡಿಯೋ ಸಹ ಎನ್ಎಂಸಿಸಿಯಲ್ಲಿ ಇದೆ. ಜೊತೆಗೆ ಕಲಾ ಶಿಕ್ಷಣ, ತರಬೇತಿ ಕೇಂದ್ರಗಳನ್ನು ಸಹ ನಿರ್ಮಿಸಲಾಗಿದೆ.
ಇಷ್ಟು ಬೃಹತ್ ಆದ, ಇಷ್ಟು ವೈಭವದಿಂದ ಕೂಡಿದ ಪ್ರದರ್ಶನ ಕಲಾ ಕೇಂದ್ರ ಭಾರತದಲ್ಲಿ ಇದೇ ಮೊದಲು. ನೀತಾ ಅಂಬಾನಿ ಈ ಕೇಂದ್ರದ ನಿರ್ಮಾತೃವಾಗಿದ್ದು, ಭಾರತದ ಸಂಸ್ಕೃತಿ ಹಾಗೂ ಕಲೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಕಲಾ ಕೇಂದ್ರ ನಿರ್ಮಿಸಲಾಗಿದೆ ಎಂದಿದ್ದಾರೆ. ಈ ಕೇಂದ್ರದಲ್ಲಿನ ರಂಗಮಂಚ ಭಾರಿ ವಿಶಾಲವಾಗಿದ್ದು ಒಮ್ಮೆಲೆ ಎರಡು ಸಾವಿರ ಮಂದಿ ಕೂತು ಪ್ರದರ್ಶನವನ್ನು ಕಣ್ಣು ತುಂಬಿಸಿಕೊಳ್ಳಬಹುದಿದೆ. ಜೊತೆಗೆ ರಂಗ ವೇದಿಕೆಗೆ ವಿಶ್ವದರ್ಜೆಯ ಲೇಸರ್ ಹಾಗೂ ಲೈಟಿಂಗ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ರಘುಪತಿ ರಾಘವ ರಾಜಾರಾಂ ಭಜನೆಗೆ ನೃತ್ಯ ಪ್ರದರ್ಶನವನ್ನು ನೀಡಿದ ನೀತಾ ಅಂಬಾನಿ, ಆ ಬಳಿಕ ಮಾತನಾಡಿ, ”ಭಾರತದಲ್ಲಿ ಒಂದು ವಿಶ್ವದರ್ಜೆಯ ಕಲಾಕೇಂದ್ರ ನಿರ್ಮಾಣವಾಗಬೇಕು ಎಂಬುದು ನಮ್ಮ ಕನಸಾಗಿತ್ತು. ಭಾರತದ ಕಲೆ, ಸಂಸ್ಕೃತಿಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ನಿರ್ಮಿಸಲು ನಾವು ಕಾತರರಾಗಿ ಕಾಯುತ್ತಿದ್ದೆವು. ಅಂತೆಯೇ ಈಗ ಎನ್ಎಂಸಿಸಿ ನಿರ್ಮಾಣವಾಗಿದೆ. ಕಲೆಯು ಮನುಷ್ಯನಲ್ಲಿ ಮಾನವೀಯತೆ ತುಂಬುತ್ತದೆ. ಸ್ವತಃ ನಾನೂ ಒಬ್ಬ ಕಲಾವಿದಳಾಗಿ ಎನ್ಎಂಸಿಸಿಯು ಕಲೆಯನ್ನು ಸಂಭ್ರಮಿಸುವ ಕಾರ್ಯ ಮಾಡುತ್ತದೆ, ಕಲಾವಿದರಿಗೆ ದೊಡ್ಡ ವೇದಿಕೆ ಒದಗಿಸುತ್ತದೆ ಎಂದು ನಂಬಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: Mukesh Ambani: ಮುಕೇಶ್, ನೀತಾ ಅಂಬಾನಿ ಚಾಲಕ ತಿಂಗಳಿಗೆ ಪಡೆಯುವ ವೇತನ ಎಷ್ಟು?
ಮುಂಬೈನಲ್ಲಿ ಐಶಾರಾಮಿಯಾಗಿ, ಸಕಲ ಆಧುನಿಕ ಸೌಲಭ್ಯಗಳೊಟ್ಟಿದೆ. ಈ ಕಲ್ಚರಲ್ ಕೇಂದ್ರ ನಿರ್ಮಾಣಗೊಂಡು ನಿನ್ನೆಯಷ್ಟೆ ಉದ್ಘಾಟನೆಗೊಂಡಿದೆ. ಇಂದಿನಿಂದ (ಏಪ್ರಿಲ್ 01) ರಿಂದ ಕಲಾ ಪ್ರದರ್ಶನ ಸಹ ಆರಂಭವಾಗಿದ್ದು, ವಿವಿಧ ಪ್ರದರ್ಶನಗಳಿಗೆ ಕಡಿಮೆ ಬೆಲೆಯ ಟಿಕೆಟ್ ನಿಗದಿ ಪಡಿಸಲಾಗಿರುವುದು ವಿಶೇಷ. ಕೇವಲ 150 ರಿಂದ ಟಿಕೆಟ್ ಬೆಲೆ ಆರಂಭವಾಗಿ 500 ಕ್ಕೆ ಮುಕ್ತಾಯವಾಗುತ್ತಿದೆ.
ಕಲ್ಚರಲ್ ಸೆಂಟರ್ನ ಉದ್ಘಾಟನೆ ಕಾರ್ಯಕ್ರಮಕ್ಕೆ ಬಾಲಿವುಡ್ ದಿಗ್ಗಜರಾದ ಸಲ್ಮಾನ್ ಖಾನ್, ಆಮಿರ್ ಖಾನ್ ಅವರ ಕುಟುಂಬ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ಕುಟುಂಬ, ಶಾರುಖ್ ಖಾನ್ ಕುಟುಂಬ, ಹೇಮಾ ಮಾಲಿನಿ, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಆಲಿಯಾ ಭಟ್, ವಿದ್ಯಾ ಬಾಲನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್, ವರುಣ್ ಧವನ್, ದಿಶಾ ಪಠಾನಿ, ಕೃತಿ ಶೆಟ್ಟಿ, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ತುಷಾರ್ ಕಪೂರ್, ರಜನೀಕಾಂತ್, ಕರಣ್ ಜೋಹರ್, ಐಶ್ವರ್ಯಾ ರೈ, ಹನ್ಸಿಕಾ ಮೊಟ್ವಾನಿ ಇನ್ನೂ ಹಲವರು ಭಾಗವಹಿಸಿದ್ದರು.