ಶಾರುಖ್ ಖಾನ್‌ಗೆ ಇರುವ ಒಂದೇ ಒಂದು ಲೋಪ ಏನೆಂದು ಬಹಿರಂಗಪಡಿಸಿದ ಪಲಾಶ್ ಸೇನ್
ನಟ ಶಾರುಖ್ ಖಾನ್ ಅವರು ಶಾಲಾ ದಿನಗಳಿಂದಲೂ ಬಹಳ ಚುರುಕಿನ ವ್ಯಕ್ತಿ ಆಗಿದ್ದರು. ಆದರೆ ಅವರಲ್ಲೂ ಒಂದು ಲೋಪ ಇತ್ತು. ಅದೇನು ಎಂಬುದನ್ನು ಗಾಯಕ ಪಲಾಶ್ ಸೇನ್ ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಮತ್ತು ಪಲಾಶ್ ನಡುವೆ ಉತ್ತಮ ಸ್ನೇಹವಿದೆ.

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಆಕರ್ಷಕ ವ್ಯಕ್ತಿತ್ವ ಹಾಗೂ ನಟನೆಯ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತದೆ. ಆದರೆ ಶಾರುಖ್ ಅವರಲ್ಲೂ ಒಂದು ಲೋಪವಿದೆ. ಆ ಬಗ್ಗೆ ಶಾಲಾ ದಿನಗಳ ಸೀನಿಯರ್ ಗೆಳೆಯ, ಪ್ರಸಿದ್ಧ ಯುಫೋರಿಯಾ ಬ್ಯಾಂಡ್‌ನ ಗಾಯಕ ಪಲಾಶ್ ಸೇನ್ ಅವರು ಮಾತಾಡಿದ್ದಾರೆ. ಒಂದು ಘಟನೆಯನ್ನು ಅವರು ಮೆಲಕು ಹಾಕಿದ್ದಾರೆ. ಶಾರುಖ್ ಖಾನ್ ಅವರಲ್ಲಿರುವ ಒಂದೇ ಒಂದು ಲೋಪವನ್ನು ಅವರು ಬಹಿರಂಗಪಡಿಸಿದ್ದಾರೆ. ‘ಕಡಕ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪಲಾಶ್ ಸೇನ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
‘ನಾವೆಲ್ಲರೂ ಆಕರ್ಷಕವಾಗಿರುವುದು ಹೇಗೆ ಎಂಬುದನ್ನು ಶಾರುಖ್ ಖಾನ್ ಅವರಿಂದ ಕಲಿಯಬೇಕು. ಅವರು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಾಲೆಯ ಶಿಕ್ಷಕರಿಗೂ ನೆಚ್ಚಿನ ವಿದ್ಯಾರ್ಥಿಯಾಗಿದ್ದರು. ಶಿಕ್ಷಕರು ಶಾರುಖ್ ಅವರನ್ನು ಇಷ್ಟಪಟ್ಟಷ್ಟು ಬೇರೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ. ಅವರು ನನಗಿಂತ ಜೂನಿಯರ್ ಆಗಿದ್ದರೂ ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೆವು. ಅವರಂತಹ ಆಕರ್ಷಕ, ಮಹತ್ವಾಕಾಂಕ್ಷೆಯ ಮತ್ತು ಪ್ರತಿಭಾವಂತ ವ್ಯಕ್ತಿಯನ್ನು ನಾನು ಎಂದೂ ನೋಡಿರಲಿಲ್ಲ’ ಎಂದು ಪಲಾಶ್ ಸೇನ್ ನೆನಪಿಸಿಕೊಂಡಿದ್ದಾರೆ.
ಶಾರುಖ್ ಖಾನ್‌ಗೆ ಹಾಡಲು ಬರುತ್ತಿರಲಿಲ್ಲ:
ಶಾರುಖ್ ಎಲ್ಲಾ ರಂಗಗಳಲ್ಲೂ ಆಲ್ ರೌಂಡರ್ ಆಗಿದ್ದರೂ, ಅವರಲ್ಲಿದ್ದ ಏಕೈಕ ಲೋಪ ಎಂದರೆ ಅವರಿಗೆ ಹಾಡಲು ಬರುತ್ತಿರಲಿಲ್ಲ ಎಂದು ಪಲಾಶ್ ಸೇನ್ ನಗುತ್ತಾ ಹೇಳಿದ್ದಾರೆ. ‘ಶಾಲಾ ನಾಟಕಗಳ ಸಮಯದಲ್ಲಿ ಶಾರುಖ್ ಖಾನ್ ಅಭಿನಯಿಸುತ್ತಿದ್ದರೆ, ಹಿನ್ನೆಲೆಯಲ್ಲಿ ನಾನು ಅವರಿಗಾಗಿ ಹಾಡುತ್ತಿದ್ದೆ. ಶಾರುಖ್ ಅವರಿಗೆ ಮೊದಲ ಹಿನ್ನೆಲೆ ಗಾಯಕ ನಾನೇ. ಸೋನು ನಿಗಮ್ ಅವರಿಗಿಂತ ಮೊದಲೇ ನಾನು ಶಾರುಖ್‌ಗೆ ಹಾಡಿದ್ದೆ’ ಎಂದು ಪಲಾಶ್ ತಮಾಷೆಯಾಗಿ ಹೇಳಿದ್ದಾರೆ.
ಪಲಾಶ್ ಸೇನ್ ಸಂದರ್ಶನ:
ದೆಹಲಿಯ ಸೆಂಟ್ ಕೊಲಂಬಸ್ ಶಾಲೆಯಲ್ಲಿ ಶಾರುಖ್ ಮತ್ತು ಪಲಾಶ್ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ‘ಶಾಲೆಯ ನಂತರ ನಾವು ಅಪರೂಪಕ್ಕೆ ಭೇಟಿಯಾಗುತ್ತಿದ್ದರೂ, ಅವರ ಸಾಧನೆಯನ್ನು ಕಂಡು ನನಗೆ ಎಂದಿಗೂ ಹೆಮ್ಮೆಯಾಗುತ್ತದೆ’ ಎಂದು ಪಲಾಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 50 ಕೋಟಿ ರೂಪಾಯಿಗೆ ‘ಕಿಂಗ್’ ಆಡಿಯೋ ರೈಟ್ಸ್ ಮಾರಾಟ? ಶಾರುಖ್ ಖಾನ್ ಹೊಸ ದಾಖಲೆ
‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಬ್ಯುಸಿ:
ಸದ್ಯ ಶಾರುಖ್ ಖಾನ್ ಅವರು ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಸುಹಾನಾ ಖಾನ್, ರಾಘವ್ ಜುಯಲ್, ಅರ್ಷದ್ ವಾರ್ಸಿ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಡಿಸೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




