ನಟ ಶಾರುಖ್ ಖಾನ್ (Shah Rukh Khan) ಅವರ ‘ಪಠಾಣ್’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಇದರ ಟೀಸರ್ ಮೂಡಿಬಂದಿದೆ. ಇಂದು (ನ.2) ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಪಠಾಣ್’ (Pathaan) ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿನ ಸಾಹಸ ದೃಶ್ಯಗಳನ್ನು ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಈ ಸಿನಿಮಾ ತುಂಬ ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಈ ಟೀಸರ್ (Pathaan Teaser) ಸಾಕ್ಷಿ ಒದಗಿಸುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ‘ಪಠಾಣ್’ ಚಿತ್ರದಿಂದ ಶಾರುಖ್ ಖಾನ್ ಅವರು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡುವುದು ಖಚಿತವಾಗಿದೆ.
‘ಪಠಾಣ್’ ಟೀಸರ್ಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ‘ಬ್ಯಾಂಗ್ ಬ್ಯಾಂಗ್’, ‘ವಾರ್’ ಮುಂತಾದ ಆ್ಯಕ್ಷನ್ ಸಿನಿಮಾಗಳನ್ನು ನೀಡಿದ ಖ್ಯಾತಿ ಸಿದ್ದಾರ್ಥ್ ಆನಂದ್ ಅವರಿಗೆ ಇದೆ. ಈ ಬಾರಿ ಅವರು ‘ಪಠಾಣ್’ ಚಿತ್ರದ ಮೂಲಕ ಇನ್ನೊಂದು ಹಂತ ಮೇಲೇರಿದ್ದಾರೆ. ಈ ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳು ಚಿತ್ರಮಂದಿರದಲ್ಲಿ ಅಭಿಮಾನಿಗಳಿಗೆ ಹೊಸ ಅನುಭವ ನೀಡುವುದು ಗ್ಯಾರಂಟಿ ಎಂದು ಎಲ್ಲರೂ ಕಮೆಂಟ್ ಮಾಡುತ್ತಿದ್ದಾರೆ.
ಶಾರುಖ್ ಖಾನ್ ಅವರಿಗೆ ‘ಪಠಾಣ್’ ಚಿತ್ರದ ಗೆಲುವು ತುಂಬ ಮುಖ್ಯವಾಗಲಿದೆ. 2018ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ‘ಜೀರೋ’ ನಂತರ ಅವರ ಯಾವುದೇ ಹೊಸ ಚಿತ್ರ ಈವರೆಗೆ ತೆರೆಕಂಡಿಲ್ಲ. ‘ಪಠಾಣ್’ ಚಿತ್ರ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾಗಾಗಿ ಶಾರುಖ್ ಅವರು ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ. ಸಿಕ್ಸ್ ಪ್ಯಾಕ್ಸ್ ಗೆಟಪ್ನಲ್ಲಿ ಫೈಟ್ ಮಾಡಿದ್ದಾರೆ. ಆ್ಯಕ್ಷನ್ ಝಲಕ್ ಹೇಗಿರಲಿದೆ ಎಂಬುದು ಈ ಟೀಸರ್ ನೋಡಿದರೆ ತಿಳಿಯುತ್ತದೆ.
Apni kursi ki peti baandh lijiye…#PathaanTeaser OUT NOW! Celebrate #Pathaan with #YRF50 only at a big screen near you on 25th January, 2023. Releasing in Hindi, Tamil and Telugu. @deepikapadukone | @TheJohnAbraham | #SiddharthAnand | @yrf pic.twitter.com/eZ0TojKGga
— Shah Rukh Khan (@iamsrk) November 2, 2022
‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಅವರ ಪಾತ್ರಗಳು ಕೂಡ ಹೈಲೈಟ್ ಆಗಿವೆ. ಸಿನಿಮಾದಲ್ಲಿ ಜಾನ್ ಅಬ್ರಹಾಂ ಮತ್ತು ಶಾರುಖ್ ಖಾನ್ ನಡುವಿನ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.
ಶಾರುಖ್ ಖಾನ್ ಅವರ 57ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಆ ಸಂಭ್ರಮವನ್ನು ಹೆಚ್ಚು ಮಾಡಲು ‘ಪಠಾಣ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಾರುಖ್ ಮನೆ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ನೆಚ್ಚಿನ ನಟನಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.