ಖ್ಯಾತ ನಟಿ ಕತ್ರಿನಾ ಕೈಫ್ ಅವರು ನಟ ವಿಕ್ಕಿ ಕೌಶಲ್ (Vicky Kaushal) ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಹಲವು ತಿಂಗಳ ಕಾಲ ಡೇಟಿಂಗ್ ನಡೆಸಿದ ಈ ಪ್ರೇಮಿಗಳು, ಕಡೆಗೂ ಮದುವೆ ಆಗುವ ನಿರ್ಧಾರಕ್ಕೆ ಬಂದರು. 2021ರ ಡಿಸೆಂಬರ್ನಲ್ಲಿ ಅದ್ದೂರಿಯಾಗಿ ಇವರ ವಿವಾಹ ಸಮಾರಂಭ ನೆರವೇರಿತು. ಕೆಲವೇ ಕೆಲವು ಮಂದಿ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಚ್ಚರಿ ಏನೆಂದರೆ ಮದುವೆಯ ರಾತ್ರಿ ಜೋರು ಗಲಾಟೆ ಕೇಳಿಬರುತ್ತಿತ್ತು. ಅದು ಏನು ಎಂಬುದನ್ನು ಈಗ ಕತ್ರಿನಾ ಕೈಫ್ (Katrina Kaif) ತಿಳಿಸಿದ್ದಾರೆ. ಅವರು ನಟಿಸಿರುವ ‘ಫೋನ್ ಭೂತ್’ (Phone Bhoot) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರಮೋಷನ್ ವೇಳೆ ಮದುವೆಯ ಕೆಲವು ವಿಷಯಗಳ ಬಗ್ಗೆ ಕತ್ರಿನಾ ಕೈಫ್ ಬಾಯಿ ಬಿಟ್ಟಿದ್ದಾರೆ.
ಕತ್ರಿನಾ ಕೈಫ್ ಮದುವೆಯಾದ ರಾತ್ರಿ ಅವರ ಸಹೋದರಿಯರು ಹಾಗೂ ವಿಕ್ಕಿ ಕೌಶಲ್ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮದುವೆ ಮಂಟಪದವರೆಗೂ ಗಲಾಟೆಯ ಸದ್ದು ಕೇಳಿಬರುತ್ತಿತ್ತು. ಹಾಗಂತ ಅಲ್ಲಿ ನಡೆದ ಜಗಳ ತುಂಬ ಗಂಭೀರವಾಗಿರಲಿಲ್ಲ. ಎಲ್ಲರೂ ಜೋರು ಧ್ವನಿಯಲ್ಲಿ ಕೂಗಾಡಿದ್ದು ಕೂಡ ಮದುವೆ ಸಂಪ್ರದಾಯದ ಒಂದು ಭಾಗವಾಗಿತ್ತು ಎಂಬುದು ವಿಶೇಷ.
ಹೌದು, ಉತ್ತರ ಭಾರತದ ಮದುವೆಗಳಲ್ಲಿ ‘ಜೂತಾ ಚುಪಾಯಿ’ ಎಂಬ ಶಾಸ್ತ್ರ ನಡೆಯುತ್ತದೆ. ಇದು ತುಂಬ ತಮಾಷೆಯಾದ ಪ್ರಸಂಗ. ಮದುವೆ ಗಂಡು ಮಂಟಪಕ್ಕೆ ಎಂಟ್ರಿ ನೀಡುವಾಗ ತನ್ನ ಚಪ್ಪಲಿಯನ್ನು ಮಂಟಪದ ಹೊರಗೆ ಬಿಡಬೇಕು. ಮದುವೆ ಹೆಣ್ಣಿನ ಅಕ್ಕ-ತಂಗಿಯರು ಆ ಚಪ್ಪಲಿಯನ್ನು ಕದ್ದು ಯಾರಿಗೂ ಕಾಣದಂತೆ ಮುಚ್ಚಿಡುತ್ತಾರೆ. ಅದನ್ನು ಗಂಡಿನ ಕಡೆಯವರು ಹುಡುಕಬೇಕು. ಒಂದು ವೇಳೆ ಹುಡುಕಲು ವಿಫಲವಾದರೆ ಹೆಣ್ಣಿನ ಕಡೆಯವರಿಗೆ ಮದುವೆ ಗಂಡು ಹಣ ಅಥವಾ ಗಿಫ್ಟ್ ನೀಡಿ ತನ್ನ ಚಪ್ಪಲಿಯನ್ನು ವಾಪಸ್ ಕೊಡುವಂತೆ ಮನವಿ ಮಾಡಿಕೊಳ್ಳಬೇಕು. ಆಗ ಕೊಟ್ಟು-ತೆಗೆದುಕೊಳ್ಳುವ ಚೌಕಾಸಿ ನಡೆಯುತ್ತದೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಮದುವೆಯಲ್ಲೂ ‘ಜೂತಾ ಚುಪಾಯಿ’ ಶಾಸ್ತ್ರ ನಡೆದಿತ್ತು. ವಿಕ್ಕಿ ಕೌಶಲ್ ಅವರ ಚಪ್ಪಲಿ ಹುಡುಕುವ ವಿಚಾರದಲ್ಲಿ ಕತ್ರಿನಾ ಸಹೋದರಿಯರು ಮತ್ತು ವಿಕ್ಕಿ ಕೌಶಲ್ ಸ್ನೇಹಿತರ ನಡುವೆ ಜೋರು ಮಾತಿನ ಚಕಮಕಿ ನಡೆದಿತ್ತು ಎಂಬುದನ್ನು ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಕತ್ರಿನಾ ಬಾಯಿ ಬಿಟ್ಟಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಮದುವೆ ಬಳಿಕವೂ ಕತ್ರಿನಾ ಕೈಫ್ ಅವರು ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ನಟಿಸಿದ ‘ಫೋನ್ ಭೂತ್’ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಯಿತು. ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡುವಲ್ಲಿ ಈ ಸಿನಿಮಾ ವಿಫಲವಾಗಿದೆ. ‘ಟೈಗರ್ 3’, ‘ಮೇರಿ ಕ್ರಿಸ್ಮಸ್’, ‘ಜೀ ಲೇ ಜರಾ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:10 pm, Thu, 10 November 22