ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಇಂದು (ಫೆಬ್ರವರಿ 6) ನಿಧನ ಹೊಂದಿರುವ ವಿಚಾರ ಇಡೀ ದೇಶಕ್ಕೆ ದುಃಖ ತಂದಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಅವರು ನಿಧನ ಹೊಂದಿದ್ದಾರೆ. ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ‘ಪ್ರಭು ಕುಂಜ್’ಗೆ ಕೊಂಡೊಯ್ಯಲಾಗಿದೆ. ಇಂದು ಸಂಜೆ 6.30ಕ್ಕೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೂಡ ಭಾಗವಹಿಸಲಿದ್ದಾರೆ.
‘ಲತಾ ಅವರು ಸ್ವರ್ಗಕ್ಕೆ ತೆರಳಿದ್ದಾರೆ. ಅವರ ಜತೆ ಒಳ್ಳೆಯ ಬಾಂಧವ್ಯ ಇತ್ತು ಎಂದು ನನ್ನಂತ ಹಲವು ಜನರು ಹೆಮ್ಮಿಯಿಂದ ಹೇಳಿಕೊಳ್ಳಬಹುದು. ನೀವು ಎಲ್ಲೇ ತೆರಳಿದರು ಅವರ ಪ್ರೀತಿಪಾತ್ರರು ಸಿಗುತ್ತಾರೆ. ಅವರ ಮಧುರ ಕಂಠ ನಮ್ಮ ಜತೆ ಸದಾ ಇರುತ್ತದೆ. ನನ್ನ ಭಾರ ಹೃದಯದಿಂದ ಅವರಿಗೆ ಅಂತಿಮ ನಮನ ಸೂಚಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ. ಇಂದು ಮೋದಿ ಕೂಡ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದು, ಈ ಮೂಲಕ ಖ್ಯಾತ ಗಾಯಕಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.
ಚಿತ್ರರಂಗದ ಕಂಬನಿ:
ಚಿತ್ರರಂಗ ಸೇರಿ ಬಹುತೇಕ ಎಲ್ಲಾ ಕ್ಷೇತ್ರದವರು ಲತಾ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್ವುಡ್ನ ದಿಗ್ಗಜರು ಲತಾ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಕೆಲವರು ಲತಾ ಕಂಠದಲ್ಲಿ ಮೂಡಿಬಂದ ಹಾಡಿನಲ್ಲಿ ತಮ್ಮಿಷ್ಟದ ಸಾಂಗ್ ಯಾವುದು ಎನ್ನುವ ಬಗ್ಗೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಸ್ಯಾಂಡಲ್ವುಡ್ ನಟರು, ನಿರ್ದೇಶಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೇಗೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶಿವಣ್ಣ ಕಂಬನಿ
ನಟ ಶಿವರಾಜ್ಕುಮಾರ್ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಲತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಲತಾ ಅವರ ಫೋಟೋ ಪೋಸ್ಟ್ ಮಾಡಿ, ‘ನನ್ನ ಅತ್ಯಂತ ನೆಚ್ಚಿನ ಧ್ವನಿ. ಸಂಗೀತದ ಮೂಲಕ ಹಲವು ಭಾವನೆಗಳನ್ನು ಅನುಭವಿಸುವಂತೆ ಮಾಡಿದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ರಮೇಶ್ ಅರವಿಂದ್
ಖ್ಯಾತ ನಟ ರಮೇಶ್ ಅರವಿಂದ್ ಅವರಿಗೂ ಲತಾ ನಿಧನದ ಸುದ್ದಿ ದುಃಖ ತಂದಿದೆ. ಲತಾ ಅವರ ಫೋಟೋ ಪೋಸ್ಟ್ ಮಾಡಿರುವ ರಮೇಶ್ ಅರವಿಂದ್ ಅವರು, ‘ವಿದಾಯ, ಸಂಗೀತದ ಸ್ವರಗಳು ಸ ರಿ ಗ ಮ ಪ ಲ ತಾ ಎಂಬಂತೆ ನಮಗೆ ಭಾಸವಾಗುವಂತೆ ಮಾಡಿದಿರಿ’ ಎಂದು ಬರೆದುಕೊಂಡಿದ್ದಾರೆ.
‘ಲತಾ ಮಂಗೇಶ್ಕರ್ ಅವರ ಆ ಹಾಡು ಕೇಳಿದ್ರೆ ಈಗಲೂ ಕಣ್ಣೀರು ಬರುತ್ತೆ’: ಬಸವರಾಜ ಬೊಮ್ಮಾಯಿ