‘ನನ್ನದೇ ಬಿಕಿನಿ ಹಿಡಿದುಕೊಂಡು ಮನೆಗೆ ನುಗ್ಗಿದ್ದ’: ಮದುವೆ ಆಗುವವರೆಗೆ ತೊಂದರೆ ಕೊಟ್ಟ ಅಭಿಮಾನಿಯ ನೆನೆದ ಪೂಜಾ
Pooja Bedi: ಒಂದು ಕಾಲದ ಸಖತ್ ಬೋಲ್ಡ್ ನಟಿ ಪೂಜಾ ಬೇಡಿ ಹುಚ್ಚು ಅಭಿಮಾನಿಯೊಬ್ಬ, ತಮ್ಮದೇ ಬಿಕಿನಿಯನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದ ಘಟನೆ ನೆನಪು ಮಾಡಿಕೊಂಡಿದ್ದಾರೆ.
ನಟಿ ಪೂಜಾ ಬೇಡಿ (Pooja Bedi) ಒಂದು ಕಾಲದ ಹಾಟ್ ನಟಿ. 1991ರಲ್ಲಿ ಬಾಲಿವುಡ್ಗೆ (Bollywood) ಪದಾರ್ಪಣೆ ಮಾಡಿದ ಪೂಜಾ ಆಗಿನ ಕಾಲಕ್ಕೆ ಸಖತ್ ಬಿಂದಾಸ್ ನಟಿ. ಬಿಕಿನಿ, ಹಸಿ-ಬಿಸಿ ದೃಶ್ಯಗಳಲ್ಲಿ ನಟನೆ, ಐಟಂ ಹಾಡುಗಳು, ಚುಂಬನದ ದೃಶ್ಯಗಳಲ್ಲಿ ಚಳಿ ಬಿಟ್ಟು ನಟಿಸುತ್ತಿದ್ದರು. ಮಾತ್ರವಲ್ಲ ನಿಜ ಜೀವನದಲ್ಲೂ ಸಖತ್ ಬಿಂದಾಸ್ ಆಗಿದ್ದ ಪೂಜಾಗೆ ದೊಡ್ಡ ಅಭಿಮಾನಿ ವರ್ಗವೂ ಆಗಿನ ಸಮಯಕ್ಕೆ ಇತ್ತು. ಈಗ ಪೂಜಾರ ಮಗಳು ಆಲಿಯಾ ಎಫ್ (Aliya F) ನಟಿಯಾಗಿದ್ದಾರೆ. ಇತ್ತೀಚೆಗೆ ಕಪಿಲ್ ಶರ್ಮಾ ಶೋಗೆ ಮಗಳೊಟ್ಟಿಗೆ ಬಂದಿದ್ದ ಪೂಜಾ ಬೇಡಿ, ಅಭಿಮಾನಿಯೊಬ್ಬ ನೀಡಿದ ಕಾಟದ ಬಗ್ಗೆ ಮಾತನಾಡಿದ್ದಾರೆ.
ಅನೈಸ್ ಹೆಸರಿನ ಯುವಕನೊಬ್ಬ ಪೂಜಾ ಬೇಡಿಯ ಅಪ್ಪಟ ಅಭಿಮಾನಿಯಾಗಿದ್ದನಂತೆ. ದಿನಕ್ಕೆ 1000 ಬಾರಿ ಲ್ಯಾಂಡ್ಲೈನ್ಗೆ ಕರೆ ಮಾಡುತ್ತಿದ್ದನಂತೆ. ನೂರಾರು ಪತ್ರಗಳನ್ನು ಪೂಜಾಗೆ ಬರೆದಿದ್ದನಂತೆ ಅದೂ ರಕ್ತದಲ್ಲಿ. ಒಮ್ಮೆಯಂತೂ ಆತ ಪೂಜಾರ ಮನೆಗೆ ನುಗ್ಗಿಬಿಟ್ಟಿದ್ದನಂತೆ ಅದೂ ತಮ್ಮದೇ ಬಿಕಿನಿಯೊಂದನ್ನು ಹಿಡಿದುಕೊಂಡು! ಇದನ್ನು ಕಂಡ ಪೂಜಾಗೆ ಆಶ್ಚರ್ಯವಾಗಿದೆ.
ಪೂಜಾ ಬೇಡಿ ಲುಟೇರ ಸಿನಿಮಾದಲ್ಲಿ ಧರಿಸಿದ್ದ ಬಿಕಿನಿಯನ್ನು ಹರಾಜು ಹಾಕಲಾಗಿತ್ತಂತೆ ಹರಾಜಿನಲ್ಲಿ ಪೂಜಾರ ಬಿಕಿನಿಯನ್ನು ಯುವಕ ಅನೀಸ್ ಖರೀದಿಸಿ ಅದೇ ಬಿಕಿನಿಯನ್ನು ಹಿಡಿದುಕೊಂಡು ಪೂಜಾರ ಮನೆಗೆ ನುಗ್ಗಿದ್ದನಂತೆ. ಅಂದು ಆತನನ್ನು ಕುಳ್ಳಿರಿಸಿಕೊಂಡು ಆತನಿಗೆ ಬುದ್ಧಿವಾದ ಹೇಳುವ ಪ್ರಯತ್ನವನ್ನು ಪೂಜಾ ಮಾಡಿದ್ದಾರೆ ಆದರೆ ಪ್ರಯತ್ನ ವ್ಯರ್ಥವಾಯಿತಂತೆ. ಬಿಕಿನಿಯನ್ನು ಖರೀದಿಸಿದ್ದೇಕೆಂದು ಕೇಳಿದರೆ, ನಿನ್ನನ್ನು ತಬ್ಬಿಕೊಳ್ಳಲು ಆಗುತ್ತಿಲ್ಲವಲ್ಲ, ನಿನ್ನ ಬಿಕಿನಿಯನ್ನಾದರೂ ತಬ್ಬಿಕೊಳ್ಳಲು ಖರೀದಿಸಿದೆ ಎಂದಿದ್ದನಂತೆ ಆ ಅಭಿಮಾನಿ.
ಶೂಟಿಂಗ್ಗೆ ಹೋದಲ್ಲೆಲ್ಲ ಬರುವುದು, ಮನೆಗೆ ನುಗ್ಗಲು ಯತ್ನಿಸುವುದು ಸತತವಾಗಿ ಲ್ಯಾಂಡ್ಲೈನ್ಗೆ ಕರೆ ಮಾಡುವುದು, ಮನೆ ಮುಂದೆ ರಸ್ತೆಯ ಮೇಲೆ ಹೆಸರು ಬರೆಯುವುದು ಹೀಗೆ ಚಿತ್ರ ವಿಚಿತ್ರ ರೀತಿಯಲ್ಲಿ ಪೂಜಾರ ಗಮನ ಸೆಳೆಯಲು ಯತ್ನಿಸುತ್ತಿದ್ದನಂತೆ. ”ನನ್ನ ಮದುವೆ ಫರ್ಹಾನ್ ಜೊತೆ ಆಗುವವರೆಗೆ ಆ ಅಭಿಮಾನಿ ಕಾಟ ಕೊಟ್ಟಿದ್ದ” ಎಂದಿದ್ದಾರೆ ಪೂಜಾ ಬೇಡಿ.
ಇದನ್ನೂ ಓದಿ:Pooja Bedi: ಕೊರೊನಾ ಲಸಿಕೆ ವಿರುದ್ಧ ಮಾತಾಡುತ್ತಿದ್ದ ಪೂಜಾ ಬೇಡಿಗೆ ಈಗ ಕೊವಿಡ್ ಪಾಸಿಟಿವ್; ಮುಂದೇನು ಕಥೆ?
ನಟರಾದ ಕಬೀರ್ ಬೇಡಿ ಹಾಗೂ ಪ್ರೋತಿಮಾ ಬೇಡಿಯ ಪುತ್ರಿ ಪೂಜಾ ಬೇಡಿ, 1991ರಲ್ಲಿ ವಿಷಕನ್ಯಾ ಸಿನಿಮಾದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಪೂಜಾ ಕಾಣಿಸಿಕೊಂಡರು. 1994 ರಲ್ಲಿ ಫರ್ಹಾನ್ ಫರ್ನೀಚರ್ವಾಲಾ ಎಂಬುವರೊಡನೆ ವಿವಾಹವಾದ ಪೂಜಾಗೆ ಆಲಿಯಾ ಫರ್ನಿಚರ್ವಾಲಾ ಮಗಳು ಜನಿಸಿದರು. 2003 ರಲ್ಲಿ ಪೂಜಾ ಹಾಗೂ ಫರ್ಹಾನ್ ದೂರಾದರು. ಬಳಿಕ 2019 ರಲ್ಲಿ ಮಾಣಿಕ್ ಕಂಟ್ರ್ಯಾಕ್ಟರ್ ಜೊತೆ ಲಿವಿನ್ ರಿಲೇಶನ್ಶಿಪ್ನಲ್ಲಿ ಪೂಜಾ ಇದ್ದಾರೆ. ನಟನೆಯ ಆರಂಭಿಕ ವರ್ಷಗಳಲ್ಲಿ ತಮ್ಮ ಬೋಲ್ಡ್ ಪಾತ್ರಗಳಿಂದ ಪೂಜಾ ಸಖತ್ ಸುದ್ದಿಯಾಗಿದ್ದರು, ಕಾಮಸೂತ್ರ ಕಾಂಡೋಮ್ ಜಾಹೀರಾತಂತೂ ಬಹಳ ಜನಪ್ರಿಯವಾಗಿತ್ತು ಜೊತೆಗೆ ವಿವಾದಕ್ಕೂ ಕಾರಣವಾಗಿತ್ತು. ಸಿನಿಮಾಗಳ ಹೊರತಾಗಿ ಬಿಗ್ಬಾಸ್, ಝಲಕ್ ದಿಕ್ಲಾಜಾ, ಫಿಯರ್ ಫ್ಯಾಕ್ಟರ್, ಬಿಗ್ ಬ್ರದರ್ ರಿಯಾಲಿಟಿ ಶೋಗಳಲ್ಲಿಯೂ ಪೂಜಾ ಕಾಣಿಸಿಕೊಂಡಿದ್ದಾರೆ. ಪೂಜಾರ ಪುತ್ರಿ ಆಲಿಯಾ ಫರ್ನೀಚರ್ವಾಲಾ ಬಾಲಿವುಡ್ಗೆ ಕಾಲಿಟ್ಟಿದ್ದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Tue, 30 May 23