ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಅನೌನ್ಸ್ ಆದ ಸಮಯದಿಂದಲೂ ನಿರೀಕ್ಷೆ ಹುಟ್ಟುಹಾಕಿತ್ತು. ಇಂದು (ಮಾ.11) ಚಿತ್ರವು ದೇಶಾದ್ಯಂತ ರಿಲೀಸ್ ಆಗಿದೆ. ಜೀ ಸ್ಟುಡಿಯೋಸ್ ಹಾಗೂ ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಘಟನೆಗಳನ್ನು ಕಟ್ಟಿಕೊಟ್ಟ ಬಗೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದುವರೆಗೆ ಹೊರ ಜಗತ್ತಿಗೆ ಕಾಣಿಸದ ಕಾಶ್ಮೀರಿ ಪಂಡಿತರ ಕಷ್ಟಗಳನ್ನು ಕಟ್ಟಿಕೊಡಲಾಗಿದೆ ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕನ್ನಡ ನೆಲದ ನಟ ಪ್ರಕಾಶ್ ಬೆಳವಾಡಿ ಕೂಡ ಚಿತ್ರದ ಭಾಗವಾಗಿದ್ದಾರೆ. ಅವರು ಮೊದಲು ಪತ್ರಕರ್ತರಾಗಿದ್ದವರು. ಹೊಸ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದು, ಕಾಶ್ಮೀರಿ ಪಂಡಿತರ ಮೂಲ ಸಮಸ್ಯೆಗಳ ಬಗ್ಗೆ ವರದಿ ಮಾಡದ ಸಮಾಜದ ಭಾಗವಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಅಲ್ಲದೇ ‘ದಿ ಕಾಶ್ಮೀರ್ ಫೈಲ್ಸ್’ ಅದರ ಬಗ್ಗೆ ಬೆಳಕು ಚೆಲ್ಲಿದ್ದು, ನೈಜ ಸಂಗತಿಗಳನ್ನು ತಿಳಿಸಲು ಸಹಾಯ ಮಾಡಿದೆ ಎಂದಿದ್ದಾರೆ. ಚಿತ್ರದ ರಿಲೀಸ್ಗೂ ಮುನ್ನ ಪ್ರಕಾಶ್ ಬೆಳವಾಡಿ ವಿಡಿಯೋ ಸಂದೇಶದಲ್ಲಿ ಮಾತನಾಡಿದ್ದು, ಅವರ ಮಾತುಗಳು ಇಲ್ಲಿವೆ.
ಪ್ರಕಾಶ್ ಬೆಳವಾಡಿ ಹಂಚಿಕೊಂಡ ವಿಡಿಯೋದಲ್ಲೇನಿದೆ?
“ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಭಾಗವಾಗಿರುವುದಕ್ಕೆ ಬಹಳ ಖುಷಿಯಾಗಿದೆ” ಎಂದು ಮಾತು ಆರಂಭಿಸಿರುವ ಪ್ರಕಾಶ್ ಬೆಳವಾಡಿ ಚಿತ್ರದ ಸ್ಕ್ರಿಪ್ಟ್ ಮೊದಲ ಬಾರಿಗೆ ಓದಿದ್ದರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. “ಚಿತ್ರದ ಸ್ಕ್ರಿಪ್ಟ್ ಅನ್ನು ಮೊದಲ ಬಾರಿಗೆ ಓದಲು ವಿವೇಕ್ ಅಗ್ನಿಹೋತ್ರಿ ಕಳುಹಿಸಿದ್ದರು. ಅದನ್ನು ಓದಿ ನನಗೆ ಶಾಕ್ ಆಯಿತು. ಕಾರಣ, ಅದುವರೆಗೆ ನನಗೆ ಜಮ್ಮು ಕಾಶ್ಮೀರದಲ್ಲಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಮತ್ತು ವಲಸೆಯ ಬಗ್ಗೆ ವಿವರಗಳು ತಿಳಿದಿರಲಿಲ್ಲ. ಇದನ್ನು ಓದಿ ಅಪರಾಧಿ ಮನೋಭಾವ ಕಾಡಿತು. ಕಾರಣ, 1990ರ ಕಾಶ್ಮೀರಿ ಘಟನೆ ನಡೆಯುವಾಗ ನಾನು ಪತ್ರಕರ್ತನಾಗಿದ್ದೆ’’ ಎಂದು ಹೇಳಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು, ‘‘ನನಗೆ ಕಾಶ್ಮೀರಿ ಪಂಡಿತರ ಕ್ಷಮೆಯನ್ನು ಕೇಳಬೇಕು ಎನ್ನಿಸಿದೆ. ಕಾರಣ, ಇಷ್ಟೊಂದು ಭೀಕರ ದುರಂತವನ್ನು ಜನರೆದುರು ಇದುವರೆಗೆ ಹೇಳದ ಸಮಾಜದ ಭಾಗವಾಗಿ ನಾನೂ ಇದ್ದೆ’’ ಎಂದಿದ್ದಾರೆ. ಇದುವರೆಗೆ ಹೇಳದ ಕತೆಯನ್ನು ತೆರೆಯ ಮೇಲೆ ತಂದ ನಿರ್ದೇಶಕರಿಗೆ ಅಭಿನಂದನೆ ಹೇಳಿರುವ ಪ್ರಕಾಶ್ ಬೆಳವಾಡಿ, ‘‘ಈ ಕೆಲಸವನ್ನು ಮಾಡುವ ಆಸಕ್ತಿ ಹಾಗೂ ಧೈರ್ಯ ತೋರಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಿಗೆ ಅಭಿನಂದನೆಗಳು. ಪ್ರತಿ ಭಾರತೀಯರು ಈ ಚಿತ್ರವನ್ನು ನೋಡಬೇಕು. ನಮ್ಮದೇ ನೆಲದಲ್ಲಿ ನಡೆದ ಕತೆಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕಾಶ್ಮೀರಿ ಪಂಡಿತರಿಗೆ ನ್ಯಾಯ ದೊರೆಯಬೇಕು’’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕಾಶ್ ಬೆಳವಾಡಿ ಮಾತನಾಡಿರುವ ವಿಡಿಯೋ ಇಲ್ಲಿದೆ:
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರಮರ್ತಿ, ಪಲ್ಲವಿ ಜೋಶಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ವಿವಾದದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಆ ಒಂದು ದೃಶ್ಯ ತೋರಿಸದಿರಲು ಕೋರ್ಟ್ ಸೂಚನೆ