
ಭಾರತದ 10ರಲ್ಲಿ 9 ಯುವಕರು ಒಂದೋ ಕ್ರಿಕೆಟರ್ ಆಗಬೇಕು ಅಥವಾ ಸಿನಿಮಾ ನಿರ್ದೇಶಕರಾಗಬೇಕು ಎಂಬ ಕನಸು ಹೊಂದಿರುತ್ತಾರೆ ಎಂಬ ಜೋಕು ಚಾಲ್ತಿಯಲ್ಲಿದೆ. ಇದು ಕೇವಲ ಜೋಕ್ ಅಲ್ಲ. ಸಿನಿಮಾ ಅನ್ನು ಹುಚ್ಚಾಗಿ ಪ್ರೀತಿಸುವ ದೇಶವಾದ ಭಾರತದಲ್ಲಿ ಪ್ರತಿ ಸಿನಿಮಾ ಪ್ರೇಮಿಯೂ ಒಬ್ಬ ಸಿನಿಮಾ ವಿಮರ್ಶಕ. ಹಾಗಾಗಿ ಪ್ರತಿಯೊಬ್ಬನ ಮನಸ್ಸಲ್ಲೂ ಒಂದು ಕತೆ ಇದ್ದೇ ಇರುತ್ತದೆ. ಆದರೆ ಆ ಕತೆಯನ್ನು ಎಲ್ಲಿ ಹೇಳಬೇಕು? ಹೇಗೆ ಹೇಳಬೇಕು ಎಂಬುದು ಗೊತ್ತಿರುವುದಿಲ್ಲವಷ್ಟೆ. ಇಂಥಹವರಿಗಾಗಿ ಪ್ರಸಾರ ಭಾರತಿಯು ಅವಕಾಶವೊಂದನ್ನು ಕಲ್ಪಿಸಿದೆ ಅದುವೇ ‘ಪೇಜ್ ಸೆ ಪಿಚ್ ತಕ್’.
ಕತೆಯನ್ನು ನೇರವಾಗಿ ನಿರ್ಮಾಪಕರು, ಇತರೆ ಸಿನಿಮಾ ತಂತ್ರಜ್ಞರಿಗೆ ಪಿಚ್ ಮಾಡುವ (ಹೇಳುವ) ಅವಕಾಶವನ್ನು ಪ್ರಸಾರ ಭಾರತಿ ಕಲ್ಪಿಸಿದೆ. ಪಣಜಿಯಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇದನ್ನು ಮೊದಲ ಬಾರಿಗೆ ಆರಂಭಿಸಲಾಗಿದೆ. ಕಲಾ ಅಕಾಡೆಮಿಯ ಬ್ಲ್ಯಾಕ್ ಬಾಕ್ಸ್ನಲ್ಲಿ ಈ ‘ಪೇಜ್ ಸೆ ಪಿಚ್ ತಕ್’ ಕಾರ್ಯಕ್ರಮವನ್ನು ಪ್ರಸಾರ ಭಾರತಿ ಅಧ್ಯಕ್ಷ ಪ್ರಸೂನ್ ಜೋಶಿ ಉದ್ಘಾಟಿಸಿದ್ದಾರೆ.
ಹೊಸ ಮತ್ತು ಆಕಾಂಕ್ಷಿ ಭಾರತೀಯ ಚಿತ್ರಕಥೆಗಾರರು ತಮ್ಮ ಕಥೆ ಮತ್ತು ಸ್ಕ್ರಿಪ್ಟ್ಗಳನ್ನು ಅಭಿವೃದ್ಧಿಪಡಿಸಲು ನೆರವಾಗುವುದು ಹಾಗೂ ಆ ಕತೆಯನ್ನು ನಿರ್ಮಾಪಕರ ವರೆಗೆ ತಲುಪಿಸಲು ಸಹಕರಿಸುವುದು ಈ ಯೋಜನೆಯ ಗುರಿ. ಚಲನಚಿತ್ರೋದ್ಯಮದಲ್ಲಿ ಯಾವುದೇ ಪರಿಚಯ ಇಲ್ಲದಿದ್ದರೂ, ಭಾರತದ ವಿವಿಧ ಭಾಷೆಗಳ ಉದಯೋನ್ಮುಖ ಬರಹಗಾರರಿಗೆ ಮಾರ್ಗದರ್ಶನ ಮತ್ತು ಅವಕಾಶಗಳನ್ನು ಇದು ಒದಗಿಸಲಿದೆ.
ಇದನ್ನೂ ಓದಿ:‘ಲಕ್ಷ್ಮಿಪುತ್ರ’ ಸಿನಿಮಾದ ಬಗ್ಗೆ ನಟಿ ವಂದಿತಾ ಮಾತು: ವಿಡಿಯೋ
ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತನಾಡಿದ ಜೋಶಿ, ಭಾರತದ ವಿವಿಧ ಭಾಗಗಳಿಂದ ವಿಶಿಷ್ಟ ಕಥೆಗಳನ್ನು ಹೊರತರುವ ಅಗತ್ಯವನ್ನು ಒತ್ತಿ ಹೇಳಿದರು. 2026ರ ಗೋವಾ ಸಿನಿಮೋತ್ಸವದ ಧ್ಯೇಯವಾಕ್ಯ ‘ಸ್ಟೋರೀಸ್ ವಿದೌಟ್ ಬಾರ್ಡರ್ಸ್’ (ಗಡಿಯಿಲ್ಲದ ಕಥೆಗಳು) ಗೆ ಅನುಗುಣವಾಗಿ, ಭಾರತೀಯ ಕಥೆಗಳನ್ನು ದೇಶ-ವಿದೇಶಗಳ ವಿಶಾಲ ಪ್ರೇಕ್ಷಕರ ಬಳಿಗೆ ಕೊಂಡೊಯ್ಯುವುದು ಇದರ ಉದ್ದೇಶ’ ಎಂದಿದ್ದಾರೆ.
‘ಪೇಜ್ ಸೆ ಪಿಚ್ ತಕ್’ ಕಾರ್ಯಕ್ರಮದಲ್ಲಿ ಈಗಾಗಲೇ 30 ಚಿತ್ರಕತೆಗಳನ್ನು ಜ್ಯೂರಿಗಳು ಆಯ್ಕೆ ಮಾಡಿದ್ದು, ಆ 30 ಕತೆ ಅಥವಾ ಚಿತ್ರಕತೆಗಳು ಗೋವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ಮಾಪಕರು ಮತ್ತು ಇತರೆ ಕೆಲವು ಪ್ರಮುಖ ಸಿನಿಮಾ ಸಂಬಂಧಿ ತಂತ್ರಜ್ಞರ ಮುಂದೆ ಪ್ರೆಸೆಂಟ್ ಮಾಡಲಾಗುತ್ತದೆ. ಆ ಚಿತ್ರಕತೆ ಬರಹಗಾರರಿಗೆ ಅಗತ್ಯ ಮಾರ್ಗದರ್ಶನ, ತರಬೇತಿಗಳನ್ನು ನೀಡಿ ಸಿನಿಮಾ, ಡಾಕ್ಯುಮೆಂಟರಿ, ಕಿರು ಚಿತ್ರಗಳನ್ನು ಮಾಡಲು ಪ್ರೇರಿಪಿಸಲಾಗುತ್ತದೆ ಹಾಗೂ ಅಗತ್ಯ ನೆರವು ಸಹ ಒದಗಿಸಲಾಗುತ್ತದೆ.
ಪ್ರತಿ ವರ್ಷವೂ ಈ ಕಾರ್ಯಕ್ರಮ ಪ್ರಸಾರ ಭಾರತಿ ಅಡಿಯಲ್ಲಿ ನಡೆಯಲಿದೆ. ದೇಶದ ಯಾವುದೇ ಮೂಲೆಯವರು ಚಿತ್ರಕತೆಗಳನ್ನು ‘ಪೇಜ್ ಟು ಪಿಚ್ ತಕ್’ಗೆ ಕಳಿಸಬಹುದಾಗಿರುತ್ತದೆ.
ಇನ್ನು 57ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ (ಗೋವಾ ಚಲನಚಿತ್ರೋತ್ಸವ) ನವೆಂಬರ್ 20 ಕ್ಕೆ ಪ್ರಾರಂಭ ಆಗಿದ್ದು ನವೆಂಬರ್ 28ರವರೆಗೆ ನಡೆಯಲಿದೆ. ಆಶುತೋಷ್ ಗೋವಾರಿಕರ್ ಈ ಉತ್ಸವದ ನಿರ್ದೇಶಕರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Sat, 21 November 26