ನಾಲ್ಕು ತಲೆಮಾರಿಗಳಿಂದ ಬಾಲಿವುಡ್ ಆಳುತ್ತಿದೆ ಕಪೂರ್ ಕುಟುಂಬ; ಇವರು ನೀಡಿದ ಕೊಡುಗೆ ಅಪಾರ
Kapoor‘s Family: ಕಪೂರ್ ಕುಟುಂಬವು ಬಾಲಿವುಡ್‌ನಲ್ಲಿ ಒಂದು ಶತಮಾನದಿಂದ ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್‌ನಿಂದ ಹಿಡಿದು ರಣಬೀರ್ ಕಪೂರ್ ವರೆಗೆ ಅನೇಕ ಪ್ರತಿಭಾವಂತ ನಟರು ಈ ಕುಟುಂಬದಿಂದ ಹೊರಹೊಮ್ಮಿದ್ದಾರೆ. ರಾಜ್ ಕಪೂರ್ ಅವರನ್ನು ಭಾರತೀಯ ಚಿತ್ರರಂಗದ ಶೋಮ್ಯಾನ್ ಎಂದು ಕರೆಯಲಾಗುತ್ತಿತ್ತು. ಈ ಕುಟುಂಬದ ಸಾಧನೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ದಾಖಲಾಗಿದೆ.
ರಾಜ್ ಕಪೂರ್ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. 1924ರ ಡಿಸೆಂಬರ್ 14ರಂದು ರಾಜ್ ಕಪೂರ್ ಜನಿಸಿದರು. ಅವರ 100ನೇ ವರ್ಷದ ಜನ್ಮದಿನವನ್ನು ಕಪೂರ್ ಕುಟುಂಬ ಅದ್ದೂರಿಯಾಗಿ ಆಚರಿಸಲು ರೆಡಿ ಆಗಿದೆ. ಕಪೂರ್ ಕುಟುಂಬದವರು ಡಿಸೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬಂದಿದೆ. ಈ ಕುಟುಂಬ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇವರ ಕುಟುಂಬದ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.
ಪೃಥ್ವಿರಾಜ್ ಕಪೂರ್ ಬಗ್ಗೆ
ಪೃಥ್ವಿ ರಾಜ್ ಕಪೂರ್ ಜನಿಸಿದ್ದು 1906ರಲ್ಲಿ. ಇವರು 1927ರಲ್ಲಿ ಬಾಲಿವುಡ್ ಪ್ರಶವೇಶಿಸಿದರು. ಅವರು ಸಾಯುವವರೆಗೂ (1976) ಕಲಾ ಸೇವೆ ಮಾಡುತ್ತಲೇ ಇದ್ದರು. ಅವರು ರಾಮ್ಸರ್ಣಿ ಮೆಹ್ರಾ ಅವರನ್ನು 1923ರಲ್ಲಿ ವಿವಾಹ ಆಗಿದ್ದರು. ಪೃಥ್ವಿರಾಜ್ ಕಪೂರ್ ಅವರಿಗೆ ಮೂವರು ಗಂಡು ಮಕ್ಕಳಿದ್ದರು. ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್. ಈ ಮೂವರು ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದರು. ಕಪೂರ್ ಕುಟುಂಬ ಹಿಂದಿ ಚಿತ್ರರಂಗಕ್ಕೆ ಅನೇಕ ನಟರನ್ನು ನೀಡಿದೆ. ಈ ಕುಟುಂಬದ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿಯೂ ದಾಖಲಾಗಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ರಾಜ್ ಕಪೂರ್ ಹಿನ್ನೆಲೆ
ಬಾಲಿವುಡ್ ನಟ ರಾಜ್ ಕಪೂರ್ ಅವರು 14 ಡಿಸೆಂಬರ್ 1924ರಂದು ಪೇಶಾವರದಲ್ಲಿ ಪೃಥ್ವಿರಾಜ್ ಕಪೂರ್ ಅವರಿಗೆ ಜನಿಸಿದರು. ಭಾರತೀಯ ಚಿತ್ರರಂಗವನ್ನು ವಿದೇಶಕ್ಕೆ ಕೊಂಡೊಯ್ದ ನಟರಲ್ಲಿ ರಾಜ್ ಕಪೂರ್ ಹೆಸರು ಇದೆ. ಅವರು ನಟ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರೂ ಆಗಿದ್ದರು. ರಾಜ್ ಕಪೂರ್ ಅವರ ಚಿತ್ರಗಳನ್ನು ಪ್ರೇಕ್ಷಕರು ಸಾಕಷ್ಟು ಇಷ್ಟಪಟ್ಟರು. ಅವರನ್ನು ಭಾರತೀಯ ಚಿತ್ರರಂಗದ ಶೋಮ್ಯಾನ್ ಎಂದು ಕರೆಯಲಾಗುತ್ತಿತ್ತು. ಆರ್ಕೆ ಫಿಲ್ಮ್ಸ್ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಕೂಡ ತೆರೆದು ಕ್ಲಾಸಿಕ್ ಚಿತ್ರಗಳನ್ನು ನಿರ್ಮಾಣ ಮಾಡಿದರು.
ರಾಜ್ ಕಪೂರ್ ಅವರಿಗೆ ಐವರು ಮಕ್ಕಳು. ಅವರೇ ರಿಷಿ ಕಪೂರ್, ರಣಧೀರ್ ಕಪೂರ್, ರಾಜೀವ್ ಕಪೂರ್, ರೀಮಾ ಕಪೂರ್ ಹಾಗೂ ರೀತು ನಂದ. ರಿಷಿ ಕಪೂರ್ ಹಾಗೂ ರಣಧೀರ್ ಕಪೂರ್ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದರು. ರಿಷಿ ಕಪೂರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಿಷಿ ಅವರ ಪುತ್ರ ರಣಬೀರ್ ಕಪೂರ್ ಕೂಡ ಬಾಲಿವುಡ್‌ನಲ್ಲಿ ಹೆಸರು ಮಾಡಿದ್ದಾರೆ. ಅವರ ಪತ್ನಿ ಆಲಿಯಾ ಭಟ್ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಈಗ ರಣಬೀರ್-ಆಲಿಯಾಗೆ ರಹಾ ಹೆಸರಿನ ಮಗಳಿದ್ದಾಳೆ. ಮುಂದೆ ಅವಳು ಕೂಡ ಚಿತ್ರರಂಗಕ್ಕೆ ಕಾಲಿಡಬಹುದು.
ಇದನ್ನೂ ಓದಿ: ನರೇಂದ್ರ ಮೋದಿಯ ಭೇಟಿಯಾದ ಕಪೂರ್ ಕುಟುಂಬ, ಕೊಟ್ಟರು ವಿಶೇಷ ಉಡುಗೊರೆ
ಕಪೂರ್ ಕುಟುಂಬವು 1927ರಿಂದ ಬಾಲಿವುಡ್‌ನಲ್ಲಿ ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್‌ನಿಂದ ಹಿಡಿದು ಕರೀನಾ, ಕರಿಷ್ಮಾ, ರಣಬೀರ್ ಸೇರಿ ಈ ಕುಟುಂಬದ ಸದಸ್ಯರು ನಟನಾ ಜಗತ್ತಿನಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಕರೀನಾ ಹಿನ್ನೆಲೆ
ರಣಧೀರ್ ಅವರು ಬಬಿತಾ ಅವರನ್ನು ವಿವಾಹವಾದರು. ಈ ದಂಪತಿಗೆ ಕರಿಷ್ಮಾ ಮತ್ತು ಕರೀನಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳು. ಕರಿಷ್ಮಾ ಚಿತ್ರರಂಗದಿಂದ ಹಿಂದೆ ಸರಿದಿದ್ದಾರೆ. ಕರೀನಾ ಈಗಲೂ ಹೆಸರು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:44 pm, Thu, 12 December 24