Raveena Tandon: ಹುಲಿಗೆ ತೊಂದರೆ ನೀಡಿದ ರವೀನಾ ಟಂಡನ್​? ವಿಡಿಯೋ ವೈರಲ್​ ಬಳಿಕ ತನಿಖೆಗೆ ಆದೇಶ

Raveena Tandon | Tiger Viral Video: ರವೀನಾ ಟಂಡನ್ ಅವರ ವರ್ತನೆಯಿಂದ ಹುಲಿಗೆ ಕಿರಿಕಿರಿ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದ್ದು, ಅರಣ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

Raveena Tandon: ಹುಲಿಗೆ ತೊಂದರೆ ನೀಡಿದ ರವೀನಾ ಟಂಡನ್​? ವಿಡಿಯೋ ವೈರಲ್​ ಬಳಿಕ ತನಿಖೆಗೆ ಆದೇಶ
ರವೀನಾ ಟಂಡನ್, ಹುಲಿ ಸಫಾರಿ ವೈರಲ್ ವಿಡಿಯೋ
Edited By:

Updated on: Nov 30, 2022 | 8:49 AM

ನಟಿ ರವೀನಾ ಟಂಡನ್​ (Raveena Tandon) ಅವರು ಅನಗತ್ಯವಾಗಿ ಒಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅವರಿಗೆ ಪ್ರಾಣಿಗಳ ಬಗ್ಗೆ ಆಸಕ್ತಿ ಇದೆ. ಹಾಗಾಗಿ ಇತ್ತೀಚೆಗೆ ಅವರು ಹುಲಿ ನೋಡಲು ಸಫಾರಿಗೆ (Tiger Safari) ತೆರಳಿದ್ದರು. ಈ ವೇಳೆ ಅವರು ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ. ಹುಲಿಯ ತೀರಾ ಸಮೀಪಕ್ಕೆ ಹೋಗಿ ಫೋಟೋ ತೆಗೆಯಲು ರವೀನಾ ಟಂಡನ್​ ಪ್ರಯತ್ನಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅದನ್ನು ಗಮನಿಸಿದ ಬಳಿಕ ಅರಣ್ಯಾಧಿಕಾರಿಗಳು (Forest Department Officials) ತನಿಖೆಗೆ ಆದೇಶಿಸಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿ ನಡೆದುಕೊಂಡಿದ್ದಕ್ಕಾಗಿ ರವೀನಾ ಟಂಡನ್​ ಅವರಿಗೆ ಸಂಕಷ್ಟ ಎದುರಾಗಿದೆ. ಅವರನ್ನು ಸಫಾರಿಗೆ ಕರೆದುಕೊಂಡ ಹೋದ ಸಿಬ್ಬಂದಿ ಕೂಡ ವಿಚಾರಣೆಗೆ ಒಳಪಡಬೇಕಿದೆ.

ಚಿತ್ರರಂಗದಲ್ಲಿ ರವೀನಾ ಟಂಡನ್​ ಬ್ಯುಸಿ ಆಗಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ರಮಿಕಾ ಸೇನ್​ ಎಂಬ ಪಾತ್ರ ಮಾಡಿದ ಬಳಿಕ ಅವರ ಚಾರ್ಮ್​ ಇನ್ನಷ್ಟು ಹೆಚ್ಚಿತು. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಹುಲಿ ನೋಡಲು ತೆರಳಿದ್ದಾರೆ. ಇಂಥ ಪ್ರದೇಶಗಳಲ್ಲಿ ಜಬಾವ್ದಾರಿಯಿಂದ ನಡೆದುಕೊಳ್ಳಬೇಕು. ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆದರೆ ಫೋಟೋ ತೆಗೆಯುವ ಭರದಲ್ಲಿ ರವೀನಾ ಟಂಡನ್​ ಅವರು ತಮ್ಮ ವಾಹನವನ್ನು ಹುಲಿಯ ಸಮೀಪಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ
ಅಕ್ಷಯ್ ಕುಮಾರ್ ಜತೆ ನಡೆದಿತ್ತು ರವೀನಾ ಟಂಡನ್ ನಿಶ್ಚಿತಾರ್ಥ; ನಂತರ ಏನಾಯ್ತು?
ಹೇಗಿದ್ದಾರೆ ನೋಡಿ ರವೀನಾ ಟಂಡನ್ ಮಗಳು; ನೀವು ಸಹೋದರಿಯರಂತೆ ಕಾಣುತ್ತಿದ್ದೀರಿ ಎಂದ ಫ್ಯಾನ್ಸ್
ಶ್ವೇತವರ್ಣದ ಉಡುಗೆ ಧರಿಸಿ ಅಭಿಮಾನಿಗಳನ್ನು ಸೆಳೆದುಕೊಂಡ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​
‘ಕೆಜಿಎಫ್​ 2’ನಲ್ಲಿ ರವೀನಾ ಟಂಡನ್​ ಕಂಡು ಥಿಯೇಟರ್​ ಪರದೆಗೆ ದುಡ್ಡು ಎಸೆದ ಫ್ಯಾನ್ಸ್​; ವಿಡಿಯೋ ಹಂಚಿಕೊಂಡ ನಟಿ

ಹುಲಿ ಕಾಣಲು ಸಿಗುವುದು ಅಪರೂಪ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ರವೀನಾ ಟಂಡನ್​ ಅವರು ಕ್ಯಾಮೆರಾ ಹಿಡಿದುಕೊಂಡು ಫೋಟೋ ಮತ್ತು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಈ ವೇಳೆ ಹುಲಿಯ ಅತೀ ಸಮೀಪಕ್ಕೆ ಅವರ ಜೀಪ್​ ಹೋಗಿರುವುದು ತಿಳಿದುಬಂದಿದೆ. ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ರವೀನಾ ಟಂಡನ್​ ಅವರು ಹಂಚಿಕೊಂಡಿದ್ದಾರೆ. ಅದು ವೈರಲ್​ ಆದ ಬಳಿಕ ಮೇಲಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ ಎಂದು ವರದಿ ಆಗಿದೆ. ನವೆಂಬರ್​ 22ರಂದು ರವೀನಾ ಟಂಡನ್​ ಅವರು ಸಫಾರಿಗೆ ತೆರಳಿದ್ದರು. ಅವರ ಜೊತೆ ಇದ್ದ ವಾಹನ ಚಾಲಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧವೂ ತನಿಖೆ ನಡೆಯಲಿದೆ.

ರವೀನಾ ಟಂಡನ್​ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ ಸಫಾರಿ ವೇಳೆ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಸಫಾರಿಗೆ ನಿಗದಿ ಪಡಿಸಿದ ಜಾಗದಲ್ಲೇ ವಾಹನ ಇತ್ತು. ಆದರೆ ಹುಲಿಯೇ ಸಮೀಪ ಬಂದಿದೆ ಎಂದು ಕೂಡ ಹೇಳಲಾಗುತ್ತಿದೆ. ತನಿಖೆ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:49 am, Wed, 30 November 22