ಬಾಲಿವುಡ್ (Bollywood) ಜನಪ್ರಿಯ ನಟ ಹಾಗೂ ಸಂಸದರೂ ಆಗಿರುವ ಸನ್ನಿ ಡಿಯೋಲ್ ಕಳೆದ ಕೆಲ ವರ್ಷಗಳಿಂದಲೂ ಹಿಟ್ ಸಿನಿಮಾ ಇಲ್ಲದೆ ತತ್ತರಿಸಿದ್ದರು. ಆದರೆ ಕಳೆದ ವರ್ಷ ‘ಗದರ್ 2’ ಸಿನಿಮಾ ಮೂಲಕ ದೊಡ್ಡ ಹಿಟ್ ನೀಡಿದ್ದಾರೆ. ಆ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ‘ಗದರ್ 2’ ಸಿನಿಮಾ ಹಿಟ್ ಆದ ಬೆನ್ನಲ್ಲೆ ಮತ್ತಷ್ಟು ಸಿನಿಮಾ ಅವಕಾಶಗಳನ್ನು ಸಹ ಬಾಚಿಕೊಂಡಿದ್ದಾರೆ. ಆದರೆ ಇದೀಗ ನಿರ್ಮಾಪಕರೊಬ್ಬರು ಸನ್ನಿ ಡಿಯೋಲ್ ವಿರುದ್ಧ ವಂಚನೆ, ಬೆದರಿಕೆ ಆರೋಪಗಳನ್ನು ಮಾಡಿದ್ದಾರೆ.
ಸುಂಧವನ್ ಎಂಟರ್ಟೈನ್ಮೆಂಟ್ ನ ಸೌರವ್ ಗುಪ್ತಾ, ಇತ್ತೀಚೆಗೆ ಸುದ್ದಿಗೋಷ್ಠಿಯೊಂದನ್ನು ನಡೆಸಿ ನಟ, ಸಂಸದ ಸನ್ನಿ ಡಿಯೋಲ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಸನ್ನಿ ಡಿಯೋಲ್ ತಮ್ಮಿಂದ ಹಣ ಪಡೆದು ವಂಚನೆ ಮಾಡಿದ್ದಾರೆ. ದಾಖಲೆಗಳನ್ನು ತಿದ್ದಿ ಫೋರ್ಜರಿ ಮಾಡಿದ್ದಾರೆ ಹಾಗೂ ಹಣ ಮರಳಿ ಕೇಳಿದಾಗ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಸೌರವ್ ಗುಪ್ತಾ ಹೇಳಿರುವಂತೆ, ಸನ್ನಿ ಡಿಯೋಲ್ ಜೊತೆಗೆ ಸಿನಿಮಾ ಮಾಡಲೆಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಒಪ್ಪಂದದ ಪ್ರಕಾರ ನಾಲ್ಕು ಕೋಟಿ ಹಣವನ್ನು ಸಂಭಾವನೆಯಾಗಿ ಸನ್ನಿ ಡಿಯೋಲ್ಗೆ ನೀಡಬೇಕಿತ್ತು, ಅಲ್ಲದೆ ಸಿನಿಮಾ ಲಾಭ ಮಾಡಿದರೆ ಒಂದು ಕೋಟಿ ಹೆಚ್ಚುವರಿ ಹಣ ನೀಡಬೇಕಿತ್ತು. ಒಪ್ಪಂದದಂತೆ ಒಂದು ಕೋಟಿ ರೂಪಾಯಿ ಹಣವನ್ನು ಸನ್ನಿಗೆ ಸೌರವ್ ನೀಡಿದ್ದಾರೆ. ಆದರೆ ಸನ್ನಿ, ಸೌರವ್ ಜೊತೆಗೆ ಸಿನಿಮಾ ಮಾಡಿಲ್ಲ, ಬದಲಿಗೆ ಅವರಿಂದ ಹೆಚ್ಚು-ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ:ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್ ನ್ಯೂಸ್
ಸೌರವ್ ಹೇಳಿರುವಂತೆ, 2014 ರಲ್ಲಿ ಒಪ್ಪಂದವಾಗಿ ನಾನು ಒಂದು ಕೋಟಿ ಅಡ್ವಾನ್ಸ್ ಕೊಟ್ಟಿದ್ದೆ. ಆದರೆ ಅವರು ನನ್ನ ಸಿನಿಮಾ ಪ್ರಾರಂಭ ಮಾಡುವ ಬದಲಿಗೆ ‘ಪೋಸ್ಟರ್ ಬಾಯ್ಸ್’ ಸಿನಿಮಾದ ಶೂಟಿಂಗ್ಗೆ ತೆರಳಿದರು. ಆ ಬಳಿಕ ನನ್ನಿಂದ ಹಲವು ಬಾರಿ ಹಣವನ್ನು ಪಡೆದುಕೊಂಡರು. ಇತರೆ ನಿರ್ದೇಶಕರಿಗೆ ನನ್ನಿಂದ ಹಣ ಕೊಡಿಸಿದರು. ಫಿಲ್ಮಿಸ್ತಾನ್ ಸ್ಟುಡಿಯೋ ಬುಕ್ ಮಾಡಿಸಿದರು. ಒಬ್ಬ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ಗೆ ಹಣ ಕೊಡಿಸಿದರು. ಈವರೆಗೆ ನನ್ನ ಖಾತೆಯಿಂದ 2.55 ಕೋಟಿ ರೂಪಾಯಿ ಹಣವನ್ನು ಸನ್ನಿ ಡಿಯೋಲ್ ಪಡೆದುಕೊಂಡಿದ್ದಾರೆ. ಆದರೆ ಈ ವರೆಗೆ ಸಿನಿಮಾ ಮಾಡಿಕೊಟ್ಟಿಲ್ಲ’ ಎಂದಿದ್ದಾರೆ.
ಇದು ಮಾತ್ರವೇ ಅಲ್ಲದೆ 2023ರಲ್ಲಿ ಮತ್ತೊಮ್ಮೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದಾಗ ಒಪ್ಪಂದವೊಂದನ್ನು ನನಗೆ ಕೊಟ್ಟರು, ಆ ಒಪ್ಪಂದದ ದಾಖಲೆಯಲ್ಲಿ ಅವರ ಸಂಭಾವನೆ ಮೊತ್ತ ಹಾಗೂ ಲಾಭ ಹಂಚಿಕೆ ಮೊತ್ತ ಎರಡೂ ಏರಿಕೆಯಾಗಿತ್ತು. ಆ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಬೆದರಿಕೆ ಸಹ ಹಾಕಿದರು ಎಂದು ಸೌರವ್ ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸನ್ನಿ ಡಿಯೋಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ