AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ಗೆ ಆ್ಯಕ್ಷನ್ ಸಿನಿಮಾ ಆಫರ್ ಕೊಡುತ್ತಲೇ ಇರಲಿಲ್ಲ ನಿರ್ಮಾಪಕರು; ಇದಕ್ಕಿತ್ತು ಕಾರಣ ಏನು?

ನಟ ಶಾರುಖ್ ಖಾನ್ ಅವರಿಗೆ ರೊಮ್ಯಾಂಟಿಕ್ ಸಿನಿಮಾಗಳು ಹೆಚ್ಚು ಹೊಂದುತ್ತವೆ ಎನ್ನುವ ನಂಬಿಕೆ ಅನೇಕರಲ್ಲಿತ್ತು. ಅವರ ಜೊತೆ ಆ್ಯಕ್ಷನ್ ಸಿನಿಮಾ ಮಾಡಿದರೆ ಕೈಸುಟ್ಟುಕೊಳ್ಳಬೇಕಾಗುತ್ತದೆ ಎಂಬ ಭಯ ನಿರ್ಮಾಪಕರಲ್ಲಿತ್ತು. ಈ ಕಾರಣದಿಂದಲೇ ಅವರಿಗೆ ಆ ರೀತಿಯ ಸಿನಿಮಾ ಆಫರ್​ಗಳನ್ನು ನೀಡೋಕೆ ನಿರ್ಮಾಪಕರು ಮುಂದಾಗಲೇ ಇಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಶಾರುಖ್​ಗೆ ಆ್ಯಕ್ಷನ್ ಸಿನಿಮಾ ಆಫರ್ ಕೊಡುತ್ತಲೇ ಇರಲಿಲ್ಲ ನಿರ್ಮಾಪಕರು; ಇದಕ್ಕಿತ್ತು ಕಾರಣ ಏನು?
ಶಾರುಖ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 08, 2023 | 6:00 PM

Share

ಬಾಲಿವುಡ್​ ನಟ ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ (Jawan movie) ಬಾಕ್ಸ್ ಆಫೀಸ್​ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಮೊದಲ ದಿನ ಈ ಚಿತ್ರ ಹಿಂದಿಯಲ್ಲಿ 65 ಕೋಟಿ ರೂಪಾಯಿ ಹಾಗೂ ತೆಲುಗು-ತಮಿಳಿನಲ್ಲಿ 10 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಕಲೆಕ್ಷನ್ 75 ಕೋಟಿ ರೂಪಾಯಿ ಆಗಿದೆ. ಶಾರುಖ್ ಖಾನ್ (Shah Rukh Khan) ಅವರ ಆ್ಯಕ್ಷನ್ ಅವತಾರ ನೋಡಿ ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಆದರೆ, ಈ ಮೊದಲು ಶಾರುಖ್ ಖಾನ್​ಗೆ ಆ್ಯಕ್ಷನ್ ಸಿನಿಮಾ ನೀಡೋಕೆ ನಿರ್ಮಾಪಕರು ಮುಂದೆ ಬರುತ್ತಲೇ ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಶಾರುಖ್ ಖಾನ್ (SRK) ಅವರು ಈ ಮೊದಲು ಸಂದರ್ಶನ ಒಂದರಲ್ಲಿ ವಿವರಿಸಿದ್ದರು.

1992ರಲ್ಲಿ ರಿಲೀಸ್ ಆದ ‘ದೀವಾನಾ’ ಶಾರುಖ್ ಅಭಿನಯದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅವರು ವಿಲನ್ ರೀತಿಯ ಪಾತ್ರ ಮಾಡಿದ್ದರು. 1993ರಲ್ಲಿ ರಿಲೀಸ್ ಆದ ‘ಬಾಜಿಗರ್’ ಚಿತ್ರ ಅವರ ಜನಪ್ರಿಯತೆ ಹೆಚ್ಚಿಸಿತು. ಆ ಬಳಿಕ ತೆರೆಗೆ ಬಂದ ‘ದಿಲ್​ವಾಲೇ ದುಲ್ಹನಿಯಾ ಲೇ ಜಾಯೆಂಗೆ’ (ಡಿಡಿಎಲ್​ಜೆ) ಮೊದಲಾದ ಸಿನಿಮಾಗಳು ಶಾರುಖ್ ಅವರನ್ನು ರೊಮ್ಯಾಂಟಿಕ್ ಹೀರೋ ಆಗಿ ಮಾಡಿತು. ಶಾರುಖ್ ಅವರಿಗೆ ಆ್ಯಕ್ಷನ್ ಸಿನಿಮಾ ಮಾಡಬೇಕು ಎನ್ನುವ ಕನಸಿತ್ತು. ಆದರೆ, ರೊಮ್ಯಾಂಟಿಕ್ ಹೀರೋ ಪಟ್ಟದಿಂದ ಇದು ಸಾಧ್ಯವಾಗಿರಲಿಲ್ಲ.

ಶಾರುಖ್ ಖಾನ್ ಅವರಿಗೆ ರೊಮ್ಯಾಂಟಿಕ್ ಸಿನಿಮಾಗಳು ಹೆಚ್ಚು ಹೊಂದುತ್ತವೆ ಎನ್ನುವ ನಂಬಿಕೆ ಅನೇಕರಲ್ಲಿತ್ತು. ಅವರನ್ನು ಆ್ಯಕ್ಷನ್ ಹೀರೋ ಮಾಡಿ ಕೈಸುಟ್ಟಿಕೊಂಡರೆ ಎಂಬ ಭಯ ನಿರ್ಮಾಪಕರಲ್ಲಿತ್ತು. ಈ ಕಾರಣದಿಂದಲೇ ಅವರಿಗೆ ಆ ರೀತಿಯ ಸಿನಿಮಾ ಆಫರ್​ಗಳನ್ನು ನೀಡೋಕೆ ನಿರ್ಮಾಪಕರು ಮುಂದಾಗಲೇ ಇಲ್ಲ. ನಿರ್ದೇಶಕರು ಕೂಡ ಆ ರೀತಿಯ ಕಥೆ ಮಾಡಿಕೊಂಡು ಶಾರುಖ್ ಖಾನ್ ಬಳಿ ಹೋಗಲಿಲ್ಲ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಜವಾನ್​’ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ಮಿಂಚಿದ ಕಲಾವಿದರು

‘ನಾನು ಆ್ಯಕ್ಷನ್ ಸಿನಿಮಾ ಮಾಡಿಲ್ಲ. ನಾನು ಲವ್​ ಸ್ಟೋರಿಗಳನ್ನು ಮಾಡಿದ್ದೇನೆ, ಸೋಶಿಯಲ್ ಡ್ರಾಮಾ, ವಿಲನ್ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಆ್ಯಕ್ಷನ್ ಚಿತ್ರಗಳನ್ನು ಯಾರೂ ನೀಡುತ್ತಿಲ್ಲ. ಮಿಷನ್ ಇಂಪಾಸಿಬಲ್ ರೀತಿಯ ಸಿನಿಮಾಗಳನ್ನು ಮಾಡಬೇಕು ಎಂಬುದು ನನ್ನ ಆಸೆ’ ಎಂದು ಶಾರುಖ್ ಖಾನ್ ಹಲವು ವರ್ಷಗಳ ಹಿಂದೆ ಹೇಳಿದ್ದರು.

ಆ್ಯಕ್ಷನ್ ಮೆರೆದ ಶಾರುಖ್ ಖಾನ್

ಶಾರುಖ್ ಖಾನ್ ಅಭಿಮಾನಿಗಳಿಗೆ ಈ ವರ್ಷ ಬಹಳವೇ ವಿಶೇಷ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಅವರ ನಟನೆಯ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಚಿತ್ರದಿಂದ ಶಾರುಖ್ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಿದರು. ಈ ಚಿತ್ರ ಹಿಂದಿ ಬಾಕ್ಸ್ ಆಫೀಸ್​ನಲ್ಲಿ 540 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದಾದ ಬಳಿಕ ಅವರ ನಟನೆಯ ‘ಜವಾನ್’ ಸಿನಿಮಾ ರಿಲೀಸ್ ಆಯಿತು. ಈ ಎರಡೂ ಚಿತ್ರಗಳಲ್ಲಿ ಶಾರುಖ್ ಖಾನ್ ಅವರು ಆ್ಯಕ್ಷನ್ ಮಾಡಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದ ಜಯಭೇರಿಯ ಹಿಂದಿರುವ ಮೋಡಿಗಾರ ಅಟ್ಲಿ

‘ಜವಾನ್’ ಸಿನಿಮಾ ಮೊದಲ ದಿನದ ಕಲೆಕ್ಷನ್ ನೋಡಿದರೆ ಈ ಚಿತ್ರ ಮತ್ತಷ್ಟು ದಾಖಲೆ ಮಾಡುವ ಸೂಚನೆ ಸಿಕ್ಕಿದೆ. ಸದ್ಯದಲ್ಲೇ ಗಣೇಶ ಚತುರ್ಥಿ ಹಬ್ಬ ಬರುತ್ತಿದ್ದು, ಇದು ಕೂಡ ಚಿತ್ರದ ಗಳಿಕೆಗೆ ಸಹಕಾರಿ ಆಗಲಿದೆ. ಶಾರುಖ್ ಖಾನ್ ಮುಂದಿನ ದಿನಗಳಲ್ಲಿ ಮತ್ತಷ್ಟು ಆ್ಯಕ್ಷನ್ ಸಿನಿಮಾ ಒಪ್ಪಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ‘ಜವಾನ್’ ಚಿತ್ರಕ್ಕೆ ಅಟ್ಲಿ ನಿರ್ದೇಶನ ಇದೆ. ನಯನತಾರಾ, ವಿಜಯ್ ಸೇತುಪತಿ ಮೊದಲಾದವರು ನಟಿಸಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.