‘ಬೇರೆಯವರ ಚಿತ್ರದಲ್ಲಿ ನಾನು 2ನೇ ಹೀರೋ ಆಗಲ್ಲ’; ಖಡಕ್ ಉತ್ತರ ಕೊಟ್ಟ ಅಲ್ಲು ಅರ್ಜುನ್
Allu Arjun: ಹಿಂದಿ ಸಿನಿಮಾ ಆಫರ್ ಎಂದಮಾತ್ರಕ್ಕೆ ತಾವು ಸೆಕೆಂಡ್ ಹೀರೋ ಆಗುವುದಿಲ್ಲ ಎಂಬುದನ್ನು ಅಲ್ಲು ಅರ್ಜುನ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಅವರು ಖಡಕ್ ಆಗಿ ತಿಳಿಸಿದ್ದಾರೆ.
ನಟ ಅಲ್ಲು ಅರ್ಜುನ್ (Allu Arjun) ಅವರು ದಕ್ಷಿಣ ಭಾರತದಲ್ಲಿ ತಮ್ಮದೇ ಚಾರ್ಮ್ ಸೃಷ್ಟಿಸಿದ್ದಾರೆ. ಅವರ ಸಿನಿಮಾಗಳು (Allu Arjun Movies) ಹಿಂದಿಗೂ ಡಬ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಆದರೆ ಈವರೆಗೂ ಅವರು ನೇರವಾಗಿ ಯಾವುದೇ ಬಾಲಿವುಡ್ ಸಿನಿಮಾದಲ್ಲಿ ನಟಿಸಿಲ್ಲ. ಇತ್ತೀಚೆಗೆ ತೆರೆಕಂಡ ಅವರ ‘ಪುಷ್ಪ’ (Pushpa Movie) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಮಾಯಿ ಮಾಡಿದೆ. ಈ ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಕೂಡ ಈವರೆಗೆ 56 ಕೋಟಿ ರೂಪಾಯಿ ಗಳಿಸಿದೆ. ಹಾಗಾಗಿ ಅಲ್ಲು ಅರ್ಜುನ್ ಅವರು ಡಬ್ಬಿಂಗ್ ಬದಲು ನೇರವಾಗಿ ಬಾಲಿವುಡ್ (Bollywood ) ಸಿನಿಮಾ ಮಾಡೋದು ಯಾವಾಗ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ಅವರು, ತಮ್ಮ ಆದ್ಯತೆ ಏನು ಎಂಬುದನ್ನು ವಿವರಿಸಿದ್ದಾರೆ.
ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರ ಸಿನಿಮಾದಲ್ಲಿ ಪರಭಾಷೆಯ ಸ್ಟಾರ್ ಕಲಾವಿದರು ವಿಲನ್ ಅಥವಾ ಇನ್ನಿತರ ಪೋಷಕ ಪಾತ್ರಗಳನ್ನು ಮಾಡಿದ್ದುಂಟು. ‘ಪುಷ್ಪ’ ಸಿನಿಮಾದಲ್ಲಿ ಡಾಲಿ ಧನಂಜಯ, ಫಹಾದ್ ಫಾಸಿಲ್ ಅವರಂತಹ ಸ್ಟಾರ್ ನಟರು ವಿಲನ್ ಆಗಿ ಅಭಿನಯಿಸಿದ್ದಾರೆ. ಆದರೆ ಇಂಥ ಪಾತ್ರಗಳನ್ನು ಅಲ್ಲು ಅರ್ಜುನ್ ಯಾವುದೇ ಕಾರಣಕ್ಕೂ ಮಾಡುವುದಿಲ್ಲವಂತೆ!
ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಬಾಲಿವುಡ್ನಿಂದ ಒಂದು ಆಫರ್ ಬಂದಿದೆ. ಆದರೆ ಅದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಎಗ್ಸೈಟಿಂಗ್ ಎನಿಸುತ್ತಿಲ್ಲ. ಸದ್ಯದಲ್ಲೇ ನಾನು ಬಾಲಿವುಡ್ ಸಿನಿಮಾ ಮಾಡಬಹುದು. ಬೇರೆ ಇಂಡಸ್ಟ್ರಿಗೆ ಹೋಗುವಂತಹ ರಿಸ್ಕ್ ತೆಗೆದುಕೊಳ್ಳಲೇಬೇಕು’ ಎಂದು ಹೇಳಿರುವ ಅಲ್ಲು ಅರ್ಜುನ್ ಅವರು, ತಾವು ಸೆಕೆಂಡ್ ಹೀರೋ ಆಗಿ ನಟಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಹಿಂದಿ ಸಿನಿಮಾ ಆಫರ್ ಎಂದಮಾತ್ರಕ್ಕೆ ತಾವು ಸೆಕೆಂಡ್ ಹೀರೋ ಆಗುವುದಿಲ್ಲ ಎಂಬುದನ್ನು ಅಲ್ಲು ಅರ್ಜುನ್ ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಸಿನಿಮಾಗಳಲ್ಲಿ ನಾವು ಹೀರೋ ಆಗಿದ್ದಾಗ, ನಮ್ಮ ಬಳಿ ಬರುವ ಎಲ್ಲರೂ ಕೂಡ ಹೀರೋ ಪಾತ್ರವನ್ನೇ ಆಫರ್ ಮಾಡುತ್ತಾರೆ. ಹೀರೋ ಪಾತ್ರ ಬಿಟ್ಟು ಬೇರೆ ಯಾವುದರಲ್ಲೂ ನನಗೆ ಆಸಕ್ತಿ ಇಲ್ಲ. ದೊಡ್ಡ ಸ್ಟಾರ್ ನಟನ ಬಳಿ ಬಂದು ಸೆಕೆಂಡ್ ಹೀರೋ ಪಾತ್ರ ಮಾಡಿ ಅಂತ ಯಾರೂ ಕೇಳುವುದಿಲ್ಲ. ಹಾಗೆ ಕೇಳಿದರೆ ಸಿನಿಮಾಗೆ ತೊಂದರೆ ಆಗುತ್ತದೆ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಈ ಮೂಲಕ ತಮ್ಮ ನಿಲುವು ಏನು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ವಿಶ್ವಾದ್ಯಂತ ‘ಪುಷ್ಪ’ ಸಿನಿಮಾ 300 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರದ ಮೂಲಕ ರಶ್ಮಿಕಾ ವೃತ್ತಿ ಜೀವನಕ್ಕೂ ಬಿಗ್ ಬ್ರೇಕ್ ಸಿಕ್ಕಿದೆ.
ಇದನ್ನೂ ಓದಿ:
ರಾಯಚೂರು: ಅಲ್ಲು ಅರ್ಜುನ್ ಕಟೌಟ್ಗೆ ನಿಂಬೆ ಹಣ್ಣಿನ ಹಾರದ ಜತೆ ಟಗರಿನ ತಲೆ ಪೋಣಿಸಿದ ಅಭಿಮಾನಿಗಳು
ಹೊಸ ವರ್ಷದಂದು ಗಲ್ಲಾ ಪೆಟ್ಟಿಗೆಯಲ್ಲಿ ಭರಪೂರ ಬೆಳೆ ತೆಗೆದ ‘ಪುಷ್ಪ’, ‘83’; ಚಿತ್ರಗಳ ಒಟ್ಟಾರೆ ಕಲೆಕ್ಷನ್ ಎಷ್ಟು?