Thalaivii: ಕಂಗನಾ ಆಕ್ರೋಶದ ನಂತರ ‘ತಲೈವಿ’ಯ ಪ್ರದರ್ಶನಕ್ಕೆ PVR ಒಪ್ಪಿಗೆ; ಆದರೂ ಬಗೆಹರಿದಿಲ್ಲ ಹಿಂದಿ ಆವೃತ್ತಿಯ ಸಮಸ್ಯೆ

| Updated By: shivaprasad.hs

Updated on: Sep 05, 2021 | 1:09 PM

Kangana Ranaut: ನಟಿ ಕಂಗನಾ ರಣಾವತ್ ಹಾಗೂ ‘ತಲೈವಿ’ ಚಿತ್ರತಂಡದ ಬೇಡಿಕೆಗೆ ಪಿವಿಆರ್ ಸಿನಿಮಾಸ್ ಒಪ್ಪಿಕೊಂಡಿದೆ. ತಮಿಳು ಹಾಗೂ ತೆಲುಗು ಆವೃತ್ತಿಯ ‘ತಲೈವಿ’ ಚಿತ್ರವನ್ನು ಪ್ರದರ್ಶಿಸುವುದಾಗಿ ಒಪ್ಪಿಕೊಂಡಿದ್ದು, ಹಿಂದಿ ಭಾಷೆಯಲ್ಲಿ 2 ವಾರಕ್ಕೆ ಒಟಿಟಿ ಬಿಡುಗಡೆ ಮಾಡುತ್ತಿರುವುದು ನಿರಾಶೆಯಾಗಿದೆ ಎಂದಿದೆ.

Thalaivii: ಕಂಗನಾ ಆಕ್ರೋಶದ ನಂತರ ‘ತಲೈವಿ’ಯ ಪ್ರದರ್ಶನಕ್ಕೆ PVR ಒಪ್ಪಿಗೆ; ಆದರೂ ಬಗೆಹರಿದಿಲ್ಲ ಹಿಂದಿ ಆವೃತ್ತಿಯ ಸಮಸ್ಯೆ
ಕಂಗನಾ, ತಲೈವಿ ಚಿತ್ರದ ಪೋಸ್ಟರ್
Follow us on

ಪಿವಿಆರ್ ಮಲ್ಟಿಫ್ಲೆಕ್ಸ್ ಸಂಸ್ಥೆಯು ‘ತಲೈವಿ’ ಚಿತ್ರವನ್ನು ಪ್ರದರ್ಶಿಸಲು ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ್ 10ರಂದು ಬಿಡುಗಡೆಯಾಗಲಿರುವ ತಲೈವಿ ಚಿತ್ರದ ತಮಿಳು ಹಾಗೂ ತೆಲುಗು ಭಾಷೆಯ ಅವತರಣಿಕೆಗಳನ್ನು ಪಿವಿಆರ್ ಪ್ರದರ್ಶಿಸಲಿದೆ. ಆದರೆ ಹಿಂದಿ ಭಾಷೆಯ ಪ್ರದರ್ಶನದ ಕುರಿತಂತೆ ಇನ್ನೂ ಗೊಂದಲಗಳು ಮುಂದುವರೆದಿವೆ. ನಿನ್ನೆ (ಸೆಪ್ಟೆಂಬರ್ 4) ಕಂಗನಾ ರಣಾವತ್ ಪಿವಿಆರ್ ಹಾಗೂ ಐನಾಕ್ಸ್ ಸಂಸ್ಥೆಗಳು ಒಟಿಟಿ ಹಾಗೂ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯ ಕುರಿತಂತೆ ದ್ವಂದ್ವ ನಿಲುವು ಹೊಂದಿರುವ ವಿರುದ್ಧ ಕಿಡಿಕಾರಿದ್ದರು. ಇದೀಗ ಕಂಗನಾ ಹೊಸ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ಪಿವಿಆರ್ ‘ತಲೈವಿ’ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.

ಪಿವಿಆರ್ ಹೇಳಿದ್ದೇನು?

ತಲೈವಿ ಚಿತ್ರತಂಡಕ್ಕೆ ಪಿವಿಆರ್ ಕಳುಹಿಸಿರುವ ಸಂದೇಶದಲ್ಲಿ “ತಲೈವಿ ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದೆ. ಹಾಗೆಯೇ ಕಂಗನಾ ಅವರ ಈ ಹಿಂದಿನ ಚಿತ್ರಗಳೂ ಕೂಡ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಗಳಿಕೆಯನ್ನೇ ಮಾಡಿದ್ದು, ಅದರ ಕುರಿತು ನಮಗೆ ಅನುಮಾನಗಳಿಲ್ಲ. ತಮಿಳು ಹಾಗೂ ತೆಲುಗು ಭಾಷೆಯ ತಲೈವಿ ಚಿತ್ರದ ಒಟಿಟಿ ಬಿಡುಗಡೆಗೆ ನಾಲ್ಕು ವಾರಗಳ ಅಂತರವಿಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಹಾಗೂ ಪಿವಿಆರ್ ಸಿನಿಮಾಸ್ ನಲ್ಲಿ ತಲೈವಿಯ ತೆಲುಗು ಹಾಗೂ ತಮಿಳು ಭಾಷೆಯ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತೇವೆ. ಆದರೆ, ಹಿಂದಿ ಭಾಷೆಗೆ ಕೇವಲ ಎರಡು ವಾರಗಳ ಅಂತರವಿಟ್ಟಿರುವುದು ನಿರಾಶೆ ಮೂಡಿಸಿದೆ. ಈ ಕುರಿತು ಕಂಗನಾ ರಣಾವತ್, ವಿಷ್ಣು ಕುಮಾರಿ ಹಾಗೂ ಶೈಲೇಶ್ ಸಿಂಗ್(ನಿರ್ಮಾಪಕರು) ಅವರಿಗೆ ಒಟಿಟಿ ಬಿಡುಗಡೆಯ ಅವಧಿಯನ್ನು ನಾಲ್ಕು ವಾರಕ್ಕೆ ಏರಿಸಬೇಕೆಂದು ಮನವಿ ಮಾಡುತ್ತೇವೆ. ಆಗ ತಲೈವಿ ಚಿತ್ರವನ್ನು ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಬಹುದು” ಎಂದು ಅದು ಸಲಹೆ ನೀಡಿದೆ.

ಇದನ್ನು ಹಂಚಿಕೊಂಡಿರುವ ಕಂಗನಾ, ಪಿವಿಆರ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಮಾತುಕತೆಯ ಮೂಲಕ ಹಿಂದಿ ಆವೃತ್ತಿಯ ಬಿಡುಗಡೆಗೂ ಪರಿಹಾರವನ್ನು ಕಂಡುಕೊಳ್ಳಲು ಎದುರು ನೋಡುತ್ತಿದ್ದೇನೆ. ಆಗ ಎಲ್ಲಾ ಭಾಷೆಯ ಜನರೂ ಚಿತ್ರವನ್ನು ವೀಕ್ಷಿಸಬಹುದಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಕಂಗನಾ ಹಂಚಿಕೊಂಡಿರುವ ಪೋಸ್ಟ್:

ಪ್ರಕರಣವೇನು?
ಕಂಗನಾ ನಟಿಸಿರುವ ‘ತಲೈವಿ’ ಚಿತ್ರ ಸೆಪ್ಟೆಂಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಐನಾಕ್ಸ್ ಮೂವೀಸ್, ಪಿವಿಆರ್ ಸಿನಿಮಾಸ್ ಸೇರಿದಂತೆ ಕೆಲವು ಮಲ್ಟಿಫ್ಲೆಕ್ಸ್​​ಗಳು ತಲೈವಿಯನ್ನು ಪ್ರದರ್ಶಿಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿದ್ದವು. ಕಾರಣ, ವರದಿಗಳ ಪ್ರಕಾರ ತಲೈವಿ ಚಿತ್ರದ ಹಿಂದಿ ಅವತರಣಿಕೆಯು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲು ಬಹಳ ಕಡಿಮೆ ಸಮಯವಿರುವುದರಿಂದ(2 ವಾರ) ಮಲ್ಟಿಫ್ಲೆಕ್ಸ್​ಗಳು ಹಿಂದೆ ಸರಿದಿದಿದ್ದವು. ತಲೈವಿಯ ತಮಿಳು ಅವತರಣಿಕೆಯು 4 ವಾರಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಲ್ಟಿಫ್ಲೆಕ್ಸ್​ಗಳ ಈ ನಿರ್ಧಾರದ ವಿರುದ್ಧ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸ್ತುತ ಪಿವಿಆರ್ ತಮಿಳು ಹಾಗೂ ತೆಲುಗು ಅವತರಣಿಕೆಯ ಬಿಡುಗಡೆಗೆ ಒಪ್ಪಿಕೊಂಡಿದೆ.

ಇದನ್ನೂ ಓದಿ:

‘ಸಲ್ಮಾನ್ ಖಾನ್, ವಿಜಯ್​ ಚಿತ್ರಗಳಿಗೆ ಅನ್ವಯವಾಗದ ನಿಯಮಗಳು ನಮಗೇಕೆ?’; ಐನಾಕ್ಸ್, ಪಿವಿಆರ್ ವಿರುದ್ಧ ಕಂಗನಾ ಕಿಡಿ

‘ಅನುಭವ ಪಡೆಯೋಕೆ ಬಂದಿದೀನಿ’; ಶಮಿತಾ ಶೆಟ್ಟಿ ಎದುರು ಸತ್ಯ ಒಪ್ಪಿಕೊಂಡ ರಾಕೇಶ್​ ಬಾಪಟ್​

(PVR agrees to screen Tamil and Telugu version of Thalaivii)