6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ

| Updated By: ಮದನ್​ ಕುಮಾರ್​

Updated on: Dec 25, 2021 | 12:59 PM

Taimur Ali Khan: ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಅವರು ತಮ್ಮ ಮಗ ತೈಮೂರ್​ ಅಲಿ ಖಾನ್​ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತ ಇರುತ್ತಾರೆ. ಈಗ ಶಾಲೆಯೊಂದರ ಪರೀಕ್ಷೆಯಲ್ಲೂ ತೈಮೂರ್​ ಬಗ್ಗೆ ಪ್ರಶ್ನೆ ಕೇಳಲಾಗಿದೆ.

6ನೇ ಕ್ಲಾಸ್​ ಪರೀಕ್ಷೆಯಲ್ಲಿ ಸೈಫ್​-ಕರೀನಾ ಪುತ್ರನ ಬಗ್ಗೆ ಪ್ರಶ್ನೆ! ಇಲ್ಲಿದೆ ಪ್ರಶ್ನೆ ಪತ್ರಿಕೆಯ ವೈರಲ್​ ಫೋಟೋ
ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ತೈಮೂರ್ ಅಲಿ ಖಾನ್, ವೈರಲ್​ ಪ್ರಶ್ನೆ ಪತ್ರಿಕೆ
Follow us on

ಮಕ್ಕಳು ಅಗತ್ಯಕ್ಕಿಂತ ಹೆಚ್ಚಿನ ಸಮಯ ಟಿವಿ ನೋಡುತ್ತಿದ್ದರೆ ಪೋಷಕರು ಗದರುತ್ತಾರೆ. ‘ಪರೀಕ್ಷೆಯಲ್ಲಿ ಸಿನಿಮಾದವರ ಬಗ್ಗೆ ಪ್ರಶ್ನೆ ಕೇಳಲ್ಲ, ಟಿವಿ ನೋಡೋದು ಬಿಟ್ಟು ಓದಿಕೋ ಹೋಗು’ ಎಂದು ಬಯ್ಯುವುದು ಎಲ್ಲರ ಮನೆಯ ಸಾಮಾನ್ಯ ಸಂಗತಿ. ಆದರೆ ಇನ್ಮುಂದೆ ಪೋಷಕರು ಆ ರೀತಿ ಬೈಯ್ದರೆ ಮಕ್ಕಳು ತುಂಟತನದಿಂದ ತಿರುಗೇಟು ಕೊಡಬಹುದು. ‘ಹೌದು, ಪರೀಕ್ಷೆಯಲ್ಲಿ ಸಿನಿಮಾದವರ ಬಗ್ಗೆ ಪ್ರಶ್ನೆ ಕೇಳ್ತಾರೆ’ ಎಂದು ಗಟ್ಟಿಯಾಗಿ ಹೇಳಬಹುದು. ಅಂಥದ್ದೊಂದು ವಿಲಕ್ಷಣ ಘಟನೆ ನಡೆದಿದೆ. ಸೈಫ್​ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್​ ಖಾನ್​ (Kareena Kapoor Khan) ಪುತ್ರ ತೈಮೂರ್​ ಅಲಿ ಖಾನ್​ (Taimur Ali Khan) ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ! ಆ ಪ್ರಶ್ನೆ ಪತ್ರಿಕೆ ಕೂಡ ಈಗ ವೈರಲ್​ ಆಗಿದೆ.

ಕರೀನಾ ಕಪೂರ್​ ಖಾನ್​ ಮತ್ತು ಸೈಫ್​ ಅಲಿ ಖಾನ್​ ದಂಪತಿಯ ಮೊದಲ ಪುತ್ರ ತೈಮೂರ್​ ಅಲಿ ಖಾನ್​ ಹೆಚ್ಚು ಫೇಮಸ್​ ಆಗಿದ್ದಾನೆ ಎಂಬುದು ನಿಜ. ಆತನ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತವೆ. ಸೈಫ್​-ಕರೀನಾ ದಂಪತಿ ತಮ್ಮ ಮಗನ ಬಗ್ಗೆ ಆಗಾಗ ಅಪ್​ಡೇಟ್​ ನೀಡುತ್ತ ಇರುತ್ತಾರೆ. ಈಗ ಶಾಲೆಯೊಂದರ ಪರೀಕ್ಷೆಯಲ್ಲೂ ತೈಮೂರ್​ ಅಲಿ ಖಾನ್​ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಅದು ಮಧ್ಯ ಪ್ರದೇಶದ ಖಾಸಗಿ ಶಾಲೆ. ಅಲ್ಲಿನ 6ನೇ ತರಗತಿ ಮಕ್ಕಳಿಗೆ ‘ಪ್ರಚಲಿತ ಘಟನೆಗಳು’ ವಿಷಯದ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಕೇಳಲಾದ ಪ್ರಶ್ನೆ ಈ ರೀತಿ ಇದೆ. ‘ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್ ಖಾನ್​ ಪುತ್ರನ ಪೂರ್ತಿ ಹೆಸರು ಬರೆಯಿರಿ’! ಈ ಪ್ರಶ್ನೆ ಪ್ರತಿಕೆಯ ಫೋಟೋ ಈಗ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ. ಮಕ್ಕಳಿಗೆ ಈ ರೀತಿ ಪ್ರಶ್ನೆ ಕೇಳಿರುವ ಶಾಲೆಯ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಿದ ಪೋಷಕರು ಈಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಇಂಥ ಪ್ರಶ್ನೆಗಳನ್ನು ಕೇಳಿದ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. ಈ ಕುರಿತಂತೆ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದೆ. ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಕೇಳಿದ್ದು ಆಕಸ್ಮಿಕವೋ, ಕಣ್ತಪ್ಪಿನಿಂದಲೋ ಅಥವಾ ಉದ್ದೇಶಪೂರಿತವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈ ಘಟನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:

ಸೈಫ್​ ಪುತ್ರ ತೈಮೂರ್​ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್​; ಯಾರಿದು?

ಯಶ್​ ರಿಜೆಕ್ಟ್​ ಮಾಡಿದ್ದ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?

Published On - 12:57 pm, Sat, 25 December 21