‘83’ ಸಿನಿಮಾ (83 Movie) ನೋಡಿದ ಬಹುತೇಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ. ಶುಕ್ರವಾರ (ಡಿ.24) ಈ ಚಿತ್ರ ಅದ್ದೂರಿಯಾಗಿ ತೆರೆಕಂಡಿತು. ಮೊದಲ ದಿನ ಅನೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಮಾಯಿ (Box Office Collection) ಆಗಿದೆ. 1983ರ ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ತಂಡ ಟ್ರೋಫಿ ಗೆದ್ದ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ (Ranveer Singh) ಅಭಿನಯಿಸಿದ್ದಾರೆ. ಕಪಿಲ್ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ಪಡುಕೋಣೆ (Deepika Padukone) ಮಾಡಿದ್ದಾರೆ. ಕಬೀರ್ ಖಾನ್ (Kabir Khan) ನಿರ್ದೇಶನ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊದಲ ದಿನವೇ ಈ ಸಿನಿಮಾ ಬರೋಬ್ಬರಿ 16 ಕೋಟಿ ರೂ.ಗಿಂತಲೂ ಹೆಚ್ಚಿನ ಕಮಾಯಿ ಮಾಡಿದೆ ಎನ್ನಲಾಗಿದೆ.
ಮೊದಲ ದಿನ ‘83’ ಸಿನಿಮಾಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿದೆ. ಹಿಂದಿಯಲ್ಲಿ ನಿರ್ಮಾಣ ಆದ ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳಿಗೂ ಡಬ್ ಆಗಿ ತೆರೆಕಂಡಿದೆ. ಹಿಂದಿ ವರ್ಷನ್ನಿಂದಲೇ ಬರೋಬ್ಬರಿ 15.25 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನುಳಿದ ಭಾಷೆಗಳಿಂದ ಒಂದೂವರೆ ಕೋಟಿ ರೂ. ಬಂದಿರಬಹುದು ಎಂದು ಹೇಳಲಾಗುತ್ತಿದೆ. ಎಲ್ಲ ಸೇರಿಸಿದರೆ ಈ ಚಿತ್ರ 16 ಕೋಟಿಗಿಂತಲೂ ಹೆಚ್ಚು ಕಮಾಯಿ ಮಾಡಿದೆ.
ಶನಿವಾರ (ಡಿ.25) ವೀಕೆಂಡ್ ಮತ್ತು ಕ್ರಿಸ್ಮಸ್ ರಜೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಸೃಷ್ಟಿ ಆಗಿದೆ. ಆದ್ದರಿಂದ ಡಬ್ಬಿಂಗ್ ವರ್ಷನ್ನಲ್ಲೂ ಈ ಚಿತ್ರಕ್ಕೆ ಕಲೆಕ್ಷನ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಆ ಮೂಲಕ ರಣವೀರ್ ಸಿಂಗ್ ಖಾತೆಗೆ ಮತ್ತೊಂದು ಸೂಪರ್ ಹಿಟ್ ಸೇರ್ಪಡೆ ಆಗಲಿದೆ. ಮೊದಲ ಲಾಕ್ಡೌನ್ ಶುರು ಆಗುವುದಕ್ಕಿಂತಲೂ ಮುನ್ನವೇ ಈ ಚಿತ್ರ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಪದೇಪದೇ ಕೊರೊನಾ ಕಾಟ ಕೊಟ್ಟಿದ್ದರಿಂದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಇಷ್ಟು ತಿಂಗಳ ಕಾಲ ಕಾದಿದ್ದಕ್ಕೂ ಸಾರ್ಥಕ ಆಯ್ತು ಎಂದು ನಿಟ್ಟುಸಿರು ಬಿಡುತ್ತಿದೆ ‘83’ ಚಿತ್ರತಂಡ.
ಇದನ್ನೂ ಓದಿ:
83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್ಪ್ರಿಯರ ಎಮೋಷನ್, ವಿಶ್ವಕಪ್ ಗೆಲುವಿನ ಹೊಸ ಸೆಲೆಬ್ರೇಷನ್
ಬಿಡುಗಡೆಗೂ ಮುನ್ನ ‘83’ ಚಿತ್ರ ನೋಡಲು ನಿರಾಕರಿಸಿದ್ದ 1983 ವಿಶ್ವಕಪ್ ಟೀಮ್ ಆಟಗಾರರು; ಕಾರಣ ಏನು?