ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸ್ ಅಪರಾಧ ವಿಭಾಗವು ಪ್ರತಿದಿನ ಹೊಸಹೊಸ ವಿಚಾರವನ್ನು ಪತ್ತೆ ಮಾಡುತ್ತಿದೆ. ರಾಜ್ ಕುಂದ್ರಾ ಅವರ ಈ ಅಶ್ಲೀಲ ದಂಧೆ ಪ್ರಕರಣಕ್ಕೂ ಉತ್ತರ ಪ್ರದೇಶದ ಕಾನ್ಪುರಕ್ಕೂ ನಂಟು ಸಿಕ್ಕಿದೆ. ಕಾನ್ಪುರ್ ಮಹಿಳೆಯ ಖಾತೆಗೆ ರಾಜ್ ಕುಂದ್ರಾ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹರ್ಷಿತಾ ಶ್ರೀವಾಸ್ತವ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಖಾತೆಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಖಾತೆಯಲ್ಲಿ ಸುಮಾರು 2,32,45,222 ರೂಪಾಯಿ ಇತ್ತು. ಹಾಟ್ ಶಾಟ್ಸ್ ವಾಟ್ಸಾಪ್ ಗ್ರೂಪ್‌ನಲ್ಲಿ ಅರವಿಂದ್ ಕುಮಾರ್ ಶ್ರೀವಾಸ್ತವ ಹೆಸರಿನ ವ್ಯಕ್ತಿ ಇದ್ದಾರೆ. ಈ ಅರವಿಂದ್ ಅವರ ಪತ್ನಿ ಹರ್ಷಿತಾ. ಅರವಿಂದ್ ಕೋಟ್ಯಂತರ ರೂಪಾಯಿಗಳನ್ನು ಹರ್ಷಿತಾಗೆ ಮಾತ್ರವಲ್ಲ, ತಂದೆ ನರ್ವದ ಶ್ರೀವಾಸ್ತವ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದರು. ಆದರೆ, ಪಾರ್ನ್ ದಂಧೆಯಿಂದ ಗಳಿಸಿದ ಹಣವನ್ನು ಅರವಿಂದ್ ತನ್ನ ಕುಟುಂಬದ ಖಾತೆಗೆ ಏಕೆ ಕಳುಹಿಸುತ್ತಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಮೂಲಗಳ ಪ್ರಕಾರ, ಈ ಬ್ಯಾಂಕ್ ಖಾತೆಗಳನ್ನು ಕಪ್ಪು ಹಣ, ಹವಾಲಾ ಮತ್ತು ಬೆಟ್ಟಿಂಗ್‌ಗೆ ಬಳಸಲಾಗಿದೆಯೆಂದು ಶಂಕಿಸಲಾಗಿದೆ. ಹರ್ಷಿತಾ ಮತ್ತು ನರ್ವದ ಶ್ರೀವಾಸ್ತವ ಅವರ ಖಾತೆಗಳಿಗೆ ಈ ಮೊತ್ತವು ಬಂದ ಕೆಲವು ದಿನಗಳ ನಂತರ, ಅದನ್ನು ಇತರ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ಅರವಿಂದ್ ಅವರ ಖಾತೆಯನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ 1.81 ಕೋಟಿ ರೂಪಾಯಿ ಇತ್ತು.
ಸುಮಾರು 6 ವರ್ಷಗಳ ಹಿಂದೆ ಹರ್ಷಿತಾ ಖಾತೆಯನ್ನು ತೆರೆಯಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ಎರಡು ವರ್ಷಗಳಿಂದ ಮೊತ್ತದ ವಹಿವಾಟು ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ ಕುಂದ್ರಾ ನಡೆಸುತ್ತಿದ್ದ ದಂಧೆ ಬಗ್ಗೆ ಶಿಲ್ಪಾ ಶೆಟ್ಟಿಗೆ ಇತ್ತು ಮಾಹಿತಿ? ಪೊಲೀಸರಿಂದ ವಿಚಾರಣೆ
‘ಲಂಚವನ್ನು ನಾನು ಸ್ವೀಕರಿಸುವುದೂ ಇಲ್ಲ, ಕೊಡುವುದೂ ಇಲ್ಲ’; ವೈರಲ್ ಆಯ್ತು ರಾಜ್ ಕುಂದ್ರಾ ಹಳೆಯ ವಿಡಿಯೋ