‘ನನ್ನ ಗುರು ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ’: ಅಮಿತಾಭ್​ ಬಗ್ಗೆ ರಜನಿಕಾಂತ್​ ಗೌರವದ ಮಾತು

Thalaivar 170: ದೊಡ್ಡ ಬಜೆಟ್​ನಲ್ಲಿ ‘ತಲೈವರ್​ 170’ ಸಿನಿಮಾ ನಿರ್ಮಾಣ ಆಗುತ್ತಿದೆ. ರಜನಿಕಾಂತ್​, ಅಮಿತಾಭ್​ ಬಚ್ಚನ್​, ಫಹಾದ್ ಫಾಸಿಲ್​, ಮಂಜು ವಾರಿಯರ್​, ರಾಣಾ ದಗ್ಗುಬಾಟಿ ಮುಂತಾದವರು ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಮಿತಾಭ್​ ಮತ್ತು ರಜನಿಕಾಂತ್​ ಜೊತೆಯಾಗಿ ಇರುವ ಫೋಟೋ ಸಖತ್​ ವೈರಲ್​ ಆಗಿದೆ.

‘ನನ್ನ ಗುರು ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ’: ಅಮಿತಾಭ್​ ಬಗ್ಗೆ ರಜನಿಕಾಂತ್​ ಗೌರವದ ಮಾತು
ಅಮಿತಾಭ್​ ಬಚ್ಚನ್​, ರಜನಿಕಾಂತ್​

Updated on: Oct 25, 2023 | 2:46 PM

ಕಾಲಿವುಡ್​ ನಟ ರಜನಿಕಾಂತ್ (Rajinikanth)​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಈಗ ಅವರಿಗೆ 72 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರಿಗೆ ಸಿನಿಮಾ ಮೇಲಿನ ಆಸಕ್ತಿ ಕಡಿಮೆ ಆಗಿಲ್ಲ. ಇತ್ತೀಚೆಗೆ ನಟ ಅಮಿತಾಭ್​ ಬಚ್ಚನ್​ ಜೊತೆ ಅವರ ಹೊಸ ಸಿನಿಮಾ ಅನೌನ್ಸ್​ ಆಗಿತ್ತು. ಈಗ ಆ ಸಿನಿಮಾದ ಶೂಟಿಂಗ್​ ಆರಂಭ ಆಗಿದೆ. ಈ ಖುಷಿಯ ಸಂದರ್ಭದಲ್ಲಿ ಅಮಿತಾಭ್​ ಬಚ್ಚನ್ (Amitabh Bachchan)​ ಮತ್ತು ರಜನಿಕಾಂತ್​ ಅವರು ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ರಜನಿಕಾಂತ್​ ಅವರು ‘ನನ್ನ ಹೃದಯ ಖುಷಿಯಿಂದ ಬಡಿದುಕೊಳ್ಳುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್​ ಆಗುತ್ತಿದೆ.

ಈ ವರ್ಷ ಬಿಡುಗಡೆ ಆದ ‘ಜೈಲರ್​’ ಸಿನಿಮಾದಿಂದ ರಜನಿಕಾಂತ್ ಅವರು ಭರ್ಜರಿ ಸಕ್ಸಸ್​ ಪಡೆದಿದ್ದಾರೆ. ಅವರಿಗೆ ಇರುವ ಡಿಮ್ಯಾಂಡ್​ ಹೆಚ್ಚಾಗಿದೆ. ಅವರ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ. ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಮೂಲಕ ರಜನಿಕಾಂತ್​ ಅವರ 170ನೇ ಸಿನಿಮಾ ನಿರ್ಮಾಣ ಆಗಲಿದೆ. ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ನಟಿಸುತ್ತಿದ್ದಾರೆ. ಶೂಟಿಂಗ್​ ಆರಂಭ ಆಗಿರುವ ಹಿನ್ನೆಲೆಯಲ್ಲಿ ಅಮಿತಾಭ್​ ಬಚ್ಚನ್​ ಮತ್ತು ರಜನಿಕಾಂತ್​ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ‘ಹಮ್​’, ‘ಅಂದಾ ಕಾನೂನ್​’, ‘ಗಿರಫ್ತಾರ್​’ ಸಿನಿಮಾಗಳಲ್ಲೂ ಈ ಸ್ಟಾರ್​ ನಟರು ತೆರೆಹಂಚಿಕೊಂಡಿದ್ದರು.

‘33 ವರ್ಷಗಳ ಬಳಿಕ ನಾನು ನನ್ನ ಗುರು ಜೊತೆ ಕೆಲಸ ಮಾಡುತ್ತಿದ್ದೇನೆ’ ಎಂಬ ಕ್ಯಾಪ್ಷನ್​ ಜೊತೆಯಲ್ಲಿ ರಜನಿಕಾಂತ್​ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ತಮಗಿಂತ 9 ವರ್ಷ ಹಿರಿಯರಾದ ಅಮಿತಾಭ್​ ಬಚ್ಚನ್​ಗೆ ರಜನಿಕಾಂತ್ ನೀಡಿದ ಗೌರವ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಈ ಸಿನಿಮಾ ಮೇಲೆ ಸಿನಿಪ್ರಿಯರಿಗೆ ಸಖತ್​ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಸದ್ಯಕ್ಕೆ ಇದನ್ನು ‘ತಲೈವರ್​ 170’ ಎಂದು ಕರೆಯಲಾಗುತ್ತಿದೆ. ಈ ಬಹುನಿರೀಕ್ಷಿತ ಪ್ರಾಜೆಕ್ಟ್​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: Thalaivar 170: ‘ತಲೈವರ್​ 170’ ಚಿತ್ರತಂಡದಿಂದ ರಜನಿಕಾಂತ್​ ಫಸ್ಟ್​ ಲುಕ್​ ಬಿಡುಗಡೆ

ದೊಡ್ಡ ಬಜೆಟ್​ನಲ್ಲಿ ‘ತಲೈವರ್​ 170’ ಸಿನಿಮಾ ನಿರ್ಮಾಣ ಆಗುತ್ತಿದೆ. ರಜನಿಕಾಂತ್​, ಅಮಿತಾಭ್​ ಬಚ್ಚನ್​, ಫಹಾದ್ ಫಾಸಿಲ್​, ಮಂಜು ವಾರಿಯರ್​, ರಾಣಾ ದಗ್ಗುಬಾಟಿ ಮುಂತಾದವರು ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಹುತಾರಾಗಣದ ಕಾರಣದಿಂದ ಅಭಿಮಾನಿಗಳ ಮನದಲ್ಲಿ ಕೌತುಕ ಹೆಚ್ಚಿದೆ. ‘ಜೈ ಭೀಮ್​’ ಚಿತ್ರದ ಖ್ಯಾತಿಯ ಟಿ.ಜೆ. ಜ್ಞಾನವೇಲ್​ ಅವರ ನಿರ್ದೇಶನದಲ್ಲಿ ‘ತಲೈವರ್​ 170’ ಸಿನಿಮಾ ಮೂಡಿಬರುತ್ತಿದೆ. ಅನಿರುದ್ಧ್​ ರವಿಚಂದರ್​ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us