ಈಗಂತೂ ಹಿಂದಿ ಚಿತ್ರರಂಗಕ್ಕೆ ಶುಭಕಾಲ ಅಲ್ಲ. ಬಾಲಿವುಡ್ ಸಿನಿಮಾಗಳು ಸತತವಾಗಿ ಸೋಲುತ್ತಿವೆ. ಅದರಲ್ಲೂ ನಟ ಅಕ್ಷಯ್ ಕುಮಾರ್ (Akshay Kumar) ಅವರು 2022ರಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸಿದ್ದಾರೆ. ಈ ವರ್ಷ ಗೆದ್ದಿರುವ ಬಾಲಿವುಡ್ (Bollywood) ಸಿನಿಮಾಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದರಿಂದಾಗಿ ಎಲ್ಲ ಸ್ಟಾರ್ ನಟರು ತಮ್ಮ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ತಮ್ಮ ಸಂಬಳದಲ್ಲಿ ಶೇಕಡ 30ರಿಂದ ಶೇಕಡ 40ರವರೆಗೆ ಕಡಿಮೆ ಮಾಡಿಕೊಳ್ಳುವ ಬಗ್ಗೆ ಅವರು ಆಲೋಚಿಸಿದ್ದಾರೆ. ಈ ಕುರಿತು ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ. ಸಂಭಾವನೆ (Akshay Kumar Remuneration) ಕಡಿತ ಮಾತ್ರವಲ್ಲದೇ ಅನೇಕ ವಿಚಾರಗಳ ಕುರಿತು ಅಕ್ಷಯ್ ಕುಮಾರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಬಾಲಿವುಡ್ ಸಿನಿಮಾಗಳು ನಷ್ಟ ಅನುಭವಿಸುತ್ತಿರುವುದಕ್ಕೆ ಹಲವು ಕಾರಣಗಳು ಇವೆ. ಸಿನಿಮಾ ನಿರ್ಮಾಣದ ವೆಚ್ಚ ಮಿತಿ ಮೀರಿರುವುದು ಕೂಡ ನಷ್ಟ ಹೆಚ್ಚಲು ಕಾರಣ ಆಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ಬಜೆಟ್ ಕಡಿಮೆ ಮಾಡಬೇಕು ಎಂದರೆ ಸ್ಟಾರ್ ಕಲಾವಿದರ ಸಂಭಾವನೆ ಕೂಡ ತಗ್ಗಬೇಕು ಎಂದು ಅವರು ಹೇಳಿದ್ದಾರೆ.
‘ನನ್ನ ಸಂಭಾವನೆಯಲ್ಲಿ ಶೇಕಡ 30ರಿಂದ ಶೇಕಡ 40ರಷ್ಟು ಕಡಿಮೆ ಮಾಡಲು ಬಯಸಿದ್ದೇನೆ. ಕಲಾವಿದರು ಮಾತ್ರವಲ್ಲದೇ ನಿರ್ಮಾಪಕರು ಮತ್ತು ಚಿತ್ರಮಂದಿರದವರು ಕೂಡ ಈ ಬಗ್ಗೆ ಆಲೋಚನೆ ಮಾಡಬೇಕಿದೆ. ಇದು ಆರ್ಥಿಕ ಹಿಂಜರಿತದ ಸಮಯ. ಮನರಂಜನೆಗಾಗಿ ಖರ್ಚು ಮಾಡಲು ಜನರ ಬಳಿ ಇರುವುದು ಕಡಿಮೆ ಹಣ. ಹೆಚ್ಚು ಕರ್ಚು ಮಾಡಲು ಸಾಧ್ಯವಿಲ್ಲ. ಎಲ್ಲದೂ ಬದಲಾಗಬೇಕಿದೆ’ ಎಂದು ಅಕ್ಷಯ್ ಕುಮಾರ್ ಹೇಳಿರುವುದು ವರದಿ ಆಗಿದೆ.
ಅಕ್ಷಯ್ ಕುಮಾರ್ ಸಿನಿಮಾಗಳಿಗೆ ಹಣ ಹೂಡಿದರೆ ಮಿನಿಮಮ್ ಲಾಭ ಗ್ಯಾರಂಟಿ ಎಂಬ ಮಾತು ಒಂದು ಕಾಲದಲ್ಲಿ ಚಾಲ್ತಿಯಲ್ಲಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. 2023ರಲ್ಲಿ ಅಕ್ಷಯ್ ಕುಮಾರ್ ಅವರು ಪದೇಪದೇ ಮುಗ್ಗರಿಸಿದ್ದಾರೆ. ‘ಬಚ್ಚನ್ ಪಾಂಡೆ’, ‘ಸಾಮ್ರಾಟ್ ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ರಾಮ್ ಸೇತು’ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲವಾಗಿದೆ. ಬಾಲಿವುಡ್ನಲ್ಲಿ ಸ್ಟಾರ್ ನಟರ ಸಿನಿಮಾ ಎಂದರೆ 100ರಿಂದ 150 ಕೋಟಿ ರೂಪಾಯಿ ಗಳಿಕೆ ಮಾಡಲೇಬೇಕು. ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಸೋಲುತ್ತಿವೆ.
‘ಡಿಫರೆಂಟ್ ಆಗಿರುವುದನ್ನು ಪ್ರೇಕ್ಷಕರು ಬಯಸುತ್ತಿದ್ದಾರೆ. ಇದರ ಬಗ್ಗೆ ನಾವು ಆಲೋಚಿಸಬೇಕು. ಚಿತ್ರಮಂದಿರಕ್ಕೆ ಜನರು ಬರುತ್ತಿಲ್ಲ ಎಂದರೆ ಅದು ನಮ್ಮ ತಪ್ಪು ಹೊರತು ಪ್ರೇಕ್ಷಕರ ತಪ್ಪಲ್ಲ. ಜನರು ಬಯಸಿದ್ದನ್ನು ನಾವು ನೀಡಬೇಕು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Sun, 13 November 22