ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಹೂಡಿಕೆ: 3.31 ಕೋಟಿ ರೂಪಾಯಿಗೆ ಜಮೀನು ಖರೀದಿಸಿದ ನಟ

ಅಮಿತಾಭ್ ಬಚ್ಚನ್ ಹಾದಿಯಲ್ಲೇ ರಣಬೀರ್ ಕಪೂರ್ ಕೂಡ ಸಾಗುತ್ತಿದ್ದಾರೆ. ಅಯೋಧ್ಯೆಯ ಆಕರ್ಷಣೆಗೆ ಮಾರುಹೋಗಿರುವ ರಣಬೀರ್ ಅಲ್ಲಿನ ಐಷಾರಾಮಿ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ಬಳಿಕ ಅಯೋಧ್ಯೆಯು ದೇಶದ ಪ್ರಮುಖ ಪ್ರವಾಸಿ ಮತ್ತು ರಿಯಲ್ ಎಸ್ಟೇಟ್ ಕೇಂದ್ರವಾಗಿ ಮಾರ್ಪಟ್ಟಿದೆ.

ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಹೂಡಿಕೆ: 3.31 ಕೋಟಿ ರೂಪಾಯಿಗೆ ಜಮೀನು ಖರೀದಿಸಿದ ನಟ
Ranbir Kapoor

Updated on: May 14, 2026 | 8:12 PM

ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಬೆನ್ನಲ್ಲೇ ಈಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ. ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯ ಮೇಲೆ ನಿರ್ಮಾಣವಾಗುತ್ತಿರುವ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಅವರ ‘ದಿ ಸರಯೂ’ ಎಂಬ ಅತ್ಯಾಧುನಿಕ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ನಲ್ಲಿ ರಣಬೀರ್ ಕಪೂರ್ (Ranbir Kapoor) ಅವರು 3.31 ಕೋಟಿ ರೂಪಾಯಿ ಮೌಲ್ಯದ ಜಾಗ ಖರೀದಿಸಿದ್ದಾರೆ ಎಂದು ಸಂಸ್ಥೆ ಗುರುವಾರ (ಮೇ 14) ಪ್ರಕಟಿಸಿದೆ.

ರಣಬೀರ್ ಖರೀದಿಸಿರುವ ಈ ಭೂಮಿಯು 2,134 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಇದು ದೇಗುಲ ನಗರಿ ಅಯೋಧ್ಯೆಯಲ್ಲಿ ಐಷಾರಾಮಿ ನಿವೇಶನಗಳಿಗೆ ಇರುವ ಬೇಡಿಕೆಯನ್ನು ಪ್ರತಿಫಲಿಸುತ್ತದೆ. 75 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯು ಸರಯೂ ನದಿಯ ದಡದಲ್ಲಿದೆ. ಇಲ್ಲಿ ಬೃಹತ್ ಕ್ಲಬ್‌ಹೌಸ್, 35ಕ್ಕೂ ಹೆಚ್ಚು ಆಧುನಿಕ ಸೌಲಭ್ಯಗಳು ಮತ್ತು ಐದು ಎಕರೆ ವಿಸ್ತೀರ್ಣದ ಸಂಪೂರ್ಣ ಸಸ್ಯಾಹಾರಿ ‘ದಿ ಲೀಲಾ’ ಐಷಾರಾಮಿ ಹೋಟೆಲ್ ಕೂಡ ತಲೆ ಎತ್ತಲಿದೆ.

ಈ ಹೂಡಿಕೆಯ ಬಗ್ಗೆ ಮಾತನಾಡಿರುವ ರಣಬೀರ್ ಕಪೂರ್, ‘ಅಯೋಧ್ಯೆ ನನ್ನನ್ನು ಆಯ್ಕೆ ಮಾಡಿದೆ ಎಂದು ನಾನು ನಂಬುತ್ತೇನೆ. ಇದು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನನ್ನ ಕುಟುಂಬದ ಪರಂಪರೆಯಲ್ಲಿ ಈ ಜಾಗವೂ ಒಂದಾಗಲಿ ಎಂಬುದು ನನ್ನ ಆಶಯ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ, ರಣಬೀರ್ ಕಪೂರ್ ಸದ್ಯ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಯಶ್ ಅವರು ರಾವಣನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

ಅಮಿತಾಭ್ ಬಚ್ಚನ್ ಈಗಾಗಲೇ ಅಯೋಧ್ಯೆಯಲ್ಲಿ ಹಲವಾರು ಬಾರಿ ಭೂಮಿ ಖರೀದಿಸಿದ್ದಾರೆ. 2026ರ ಮಾರ್ಚ್‌ನಲ್ಲಿ ಅವರು 35 ಕೋಟಿ ರೂ. ವೆಚ್ಚದಲ್ಲಿ 2.67 ಎಕರೆ ಜಮೀನು ಖರೀದಿಸಿದ್ದರು. ಅದಕ್ಕೂ ಮುನ್ನ 2025ರಲ್ಲಿ 40 ಕೋಟಿ ರೂ. ಮತ್ತು 2024ರಲ್ಲಿ 14.5 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಯೋಧ್ಯೆಯಲ್ಲಿ ಖರೀದಿಸಿ ಸುದ್ದಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us