‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರು ರಾಮಾಯಣ ಕಥೆಯಾಧಾರಿತ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲು ಸಿದ್ಧರಾಗಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ (Ramayana Movie) ಬಗ್ಗೆ ಸಿಕ್ಕಾಪಟ್ಟೆ ಗಾಳಿಸುದ್ದಿ ಹರಿದಾಡಿವೆ. ಅವುಗಳ ನಡುವೆಯೇ ಸದ್ದಿಲ್ಲದೇ ಶೂಟಿಂಗ್ ಆರಂಭ ಆಗುತ್ತಿದೆ ಎಂದು ವರದಿ ಆಗಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ರಾಮನಾಗಿ ನಟಿಸಲಿದ್ದಾರೆ. ಹಾಗಂತ ಅವರು ಮೊದಲು ಶೂಟಿಂಗ್ನಲ್ಲಿ ಭಾಗಿ ಆಗುವುದಿಲ್ಲ!
ನಿರ್ದೇಶಕ ನಿತೇಶ್ ತಿವಾರಿ ಅವರು ಗುರುಕುಲದ ದೃಶ್ಯದ ಮೂಲಕ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಆರಂಭಿಸಬೇಕು ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ಬಾಲ ನಟರು ಮೊದಲು ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ. ರಾಮ, ಲಕ್ಷ್ಮಣ ಹಾಗೂ ಭರತನ ಪಾತ್ರ ಮಾಡಲಿರುವ ಬಾಲ ಕಲಾವಿದರು ಶೂಟಿಂಗ್ಗೆ ಹಾಜರಿ ಹಾಕಲಿದ್ದಾರೆ. ಏಪ್ರಿಲ್ 2ರಿಂದಲೇ ಚಿತ್ರೀಕರಣ ಆರಂಭ ಆಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಮುಂಬೈನ ಫಿಲ್ಮ್ ಸಿಟಿಯಲ್ಲಿ ಸೆಟ್ ನಿರ್ಮಾಣ ಆಗಿದೆ. ಗುರುಕುಲದ ಸೆಟ್ ಹಾಕಲಾಗಿದೆ. ಜೊತೆಗೆ ಗ್ರೀನ್ ಸ್ಕ್ರೀನ್ ಕೂಡ ಬಳಸಿಕೊಳ್ಳಲಾಗುತ್ತಿದೆ. ಗುರುಕುಲದ ದೃಶ್ಯಗಳಿಂದಲೇ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಗುರು ವಸಿಷ್ಠರ ಪಾತ್ರವನ್ನು ಶಿಶಿರ್ ಶರ್ಮಾ ನಿಭಾಯಿಸಲಿದ್ದಾರೆ. ಆದರೆ ಬಾಲ ಕಲಾವಿದರ ಹೆಸರನ್ನು ಸದ್ಯಕ್ಕೆ ಗೌಪ್ಯವಾಗಿ ಇಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ಪಿಂಕ್ವಿಲ್ಲಾ’ ಸುದ್ದಿ ಪ್ರಕಟಿಸಿದೆ.
ಇದನ್ನೂ ಓದಿ: ಜನರು ‘ಸಿಂಗಂ’ ಅಂದುಕೊಂಡಿದ್ರು; ಆದ್ರೆ ರಣಬೀರ್ ಕಪೂರ್ ಆಗಿದ್ದು ಕೇವಲ ‘ಚಿಂಗಂ’
ರಾಮನ ಪಾತ್ರ ಮಾಡಲಿರುವ ರಣಬೀರ್ ಕಪೂರ್ ಅವರು ಈಗಾಗಲೇ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈಗ ಅವರು ಲಾಸ್ ಏಂಜಲಿಸ್ಗೆ ತೆರಳಲಿದ್ದಾರೆ. ಅಲ್ಲಿ ಅವರ 3ಡಿ ಸ್ಕ್ಯಾನ್ ಮಾಡಲಾಗುತ್ತಿದೆ. ಈ ಮೊದಲು ಕೂಡ ಅವರು ಒಂದೆರಡು ಬಾರಿ ಅಲ್ಲಿಗೆ ತೆರಳಿ 3ಡಿ ಸ್ಕ್ಯಾನ್ಗೆ ಒಳಗಾಗಿದ್ದರು. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ಈ ಸ್ಕ್ಯಾನ್ ಉಪಯೋಗಕ್ಕೆ ಬರಲಿದೆ. ದೊಡ್ಡ ಬಜೆಟ್ನಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣ ಆಗಲಿದೆ.
ಇದನ್ನೂ ಓದಿ: ಮದುವೆ ದಿನವೇ ರಣಬೀರ್ ಬಳಿ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಹೆಣ್ಣಿನ ಕಡೆಯವರು?
ಪಾತ್ರವರ್ಗದ ಬಗ್ಗೆ ಅನೇಕ ಗಾಸಿಪ್ ಹಬ್ಬಿದೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಯಶ್ ಅವರು ರಾವಣನಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆಂಜನೇಯನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಅಧಿಕೃತ ಘೋಷಣೆ ಆಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.