ಬಾಲಿವುಡ್ನಲ್ಲಿ ‘ಅನಿಮಲ್’ ಸಿನಿಮಾದ ಯಶಸ್ಸಿನಿಂದ ರಣಬೀರ್ ಕಪೂರ್ (Ranbir Kapoor) ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಅವರ ಜೊತೆ ನಟಿಸಿದ ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಕೂಡ ಹೆಚ್ಚಾಗಿದೆ. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 550 ಕೋಟಿ ರೂಪಾಯಿ ಗಳಿಕೆ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನ ಕಲೆಕ್ಷನ್ ಕೂಡ ಸೇರಿಸಿದರೆ ‘ಅನಿಮಲ್’ ಸಿನಿಮಾದ (Animal Movie) ಒಟ್ಟು ಗಳಿಕೆ ಅಂದಾಜು 900 ಕೋಟಿ ರೂಪಾಯಿ ಆಗಲಿದೆ. ಈಗ ಸಿನಿಪ್ರಿಯರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಈ ಸಿನಿಮಾದ ಟಿಕೆಟ್ ಬೆಲೆಯನ್ನು 100 ರೂಪಾಯಿಗೆ ಇಳಿಸಲಾಗಿದೆ.
‘ಅನಿಮಲ್’ ಸಿನಿಮಾ ಬಿಡುಗಡೆ ಆದಾಗ ಟಿಕೆಟ್ ಬೆಲೆ ಮುಗಿಲು ಮುಟ್ಟಿತ್ತು. ಆದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿ ಮಾಡಿದ್ದರು. ಸಾವಿರ ರೂಪಾಯಿಯ ಟಿಕೆಟ್ಗಳು ಕೂಡ ಸೋಲ್ಡ್ ಔಟ್ ಆಗಿದ್ದವು. ಈಗ ಈ ಚಿತ್ರದ ಟಿಕೆಟ್ ಬೆಲೆ ಕಡಿಮೆ ಮಾಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಈ ಖುಷಿಯ ಸಮಾಚಾರವನ್ನು ತಿಳಿಸಲಾಗಿದೆ.
ಬಿಡುಗಡೆಯಾಗಿ ಒಂದು ತಿಂಗಳ ಮೇಲಾಗಿದ್ದರೂ ಕೂಡ ಇನ್ನೂ ಕೆಲವು ಕಡೆಗಳಲ್ಲಿ ‘ಅನಿಮಲ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೇಕ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ‘ಅನಿಮಲ್’ ತಂಡ ಬೆಲೆ ಇಳಿಕೆಯ ತಂತ್ರ ರೂಪಿಸಿದೆ. ಆ ಮೂಲಕ ಇನ್ನಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರಲು ಪ್ಲ್ಯಾನ್ ಮಾಡಲಾಗಿದೆ. ಈ ತಂತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾ ಗೆಲುವು ಅಪಾಯಕಾರಿ ಎಂದ ಜಾವೇದ್ ಅಖ್ತರ್; ಪ್ರೇಕ್ಷಕರಿಗೆ ಕಿವಿಮಾತು
ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕೆಲವು ದೃಶ್ಯಗಳಿಗೆ ಅನೇಕರಿಂದ ಆಕ್ಷೇಪ ವ್ಯಕ್ತವಾಗಿದೆ. ಮಹಿಳೆಯರನ್ನು ಅವಹೇಳನ ಮಾಡುವಂತಹ ದೃಶ್ಯಗಳು ಇವೆ, ಕ್ರೌರ್ಯದ ವೈಭವೀಕರಣ ಆಗಿದೆ, ಡೈಲಾಗ್ಗಳು ಅಸಭ್ಯವಾಗಿವೆ ಎಂಬಿತ್ಯಾದಿ ಟೀಕೆಗಳು ಬಂದಿವೆ. ಅವುಗಳ ನಡುವೆಯೂ ಸಿನಿಮಾ ಸೂಪರ್ ಹಿಟ್ ಆಗಿದೆ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಜೊತೆ ಅನಿಲ್ ಕಪೂರ್, ಬಾಬಿ ಡಿಯೋಲ್ ಮುಂತಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ