‘ಅನಿಮಲ್’ ಸಿನಿಮಾ ಗೆಲುವು ಅಪಾಯಕಾರಿ ಎಂದ ಜಾವೇದ್ ಅಖ್ತರ್; ಪ್ರೇಕ್ಷಕರಿಗೆ ಕಿವಿಮಾತು
Javed Akhtar On Animal: ‘ಈಗ ಸಿನಿಮಾದವರಿಗಿಂತಲೂ ಪ್ರೇಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಒಳ್ಳೆಯ ಸಿನಿಮಾ ಮಾಡುವವರೂ ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಅವರಿಗೆ ನೀವು ಎಲ್ಲಿಯವರೆಗೆ ಬೆಂಬಲ ನೀಡುತ್ತೀರಿ ಎಂಬುದರ ಮೇಲೆ ಅಂಥ ಸಿನಿಮಾಗಳ ಭವಿಷ್ಯ ನಿರ್ಧಾರ ಆಗಿರುತ್ತದೆ’ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಅಂದಾಜು 900 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಆದರೆ ವಿಮರ್ಶೆಯ ದೃಷ್ಟಿಯಲ್ಲಿ ಈ ಚಿತ್ರ ಸೋತಿದೆ. ಅನೇಕ ವಿಮರ್ಶಕರು ಈ ಸಿನಿಮಾವನ್ನು ಖಂಡಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಕೂಡ ‘ಅನಿಮಲ್’ ಸಿನಿಮಾದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಆ ಸಾಲಿಗೆ ಖ್ಯಾತ ಗೀತ ರಚನಕಾರ ಜಾವೇದ್ ಅಖ್ತರ್ (Javed Akhtar) ಕೂಡ ಸೇರ್ಪಡೆ ಆಗಿದ್ದಾರೆ. ಅವರು ಈ ಸಿನಿಮಾದ ಗೆಲುವು ಅಪಾಯಕಾರಿ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಚರ್ಚೆಗೆ ಒಳಗಾಗುತ್ತಿದೆ.
‘ಅನಿಮಲ್’ ಸಿನಿಮಾದಲ್ಲಿ ಮಹಿಳೆಯರನ್ನು ಅವಮಾನಿಸುವಂತಹ ದೃಶ್ಯಗಳು ಇವೆ ಎಂಬುದು ಅನೇಕರ ಆರೋಪ. ಅದೇ ವಿಚಾರವನ್ನು ಜಾವೇದ್ ಅಖ್ತರ್ ಅವರು ಖಂಡಿಸಿದ್ದಾರೆ. ‘ಒಂದು ಸಿನಿಮಾದಲ್ಲಿ ಹೀರೋ ತಮ್ಮ ಬೂಟು ನೆಕ್ಕು ಎಂದು ಮಹಿಳೆಗೆ ಹೇಳುತ್ತಾನೆ ಎಂದಾದರೆ, ಒಂದು ಸಿನಿಮಾದಲ್ಲಿ ಮಹಿಳೆಯರಿಗೆ ಹೊಡೆಯುವುದು ಓಕೆ ಎಂದು ಹೀರೋ ಹೇಳುತ್ತಾನೆ ಎಂದಾದರೆ.. ಆ ಸಿನಿಮಾದ ಗೆಲುವು ಅಪಾಯಕಾರಿ’ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್ ಅವರು ‘ಅನಿಮಲ್’ ಸಿನಿಮಾದ ಹೆಸರು ಹೇಳಿಲ್ಲ. ಹಾಗಿದ್ದರೂ ಕೂಡ ಇದು ಆ ಸಿನಿಮಾ ಕುರಿತಾಗಿಯೇ ಹೇಳಿದ್ದು ಎಂಬುದು ಸ್ಪಷ್ಟ. ಈ ಸಿನಿಮಾದ ಒಂದು ದೃಶ್ಯದಲ್ಲಿ ರಣಬೀರ್ ಕಪೂರ್ ಅವರು ತೃಪ್ತಿ ದಿಮ್ರಿಗೆ ಬೂಟು ನೆಕ್ಕಲು ಹೇಳುತ್ತಾರೆ. ಕೆಲವು ದೃಶ್ಯಗಳಲ್ಲಿ ಅವರು ಮಹಿಳೆಯರ ಮೇಲೆ ಕೈ ಮಾಡುತ್ತಾರೆ. ಈ ದೃಶ್ಯಗಳಿಗೆ ಜಾವೇದ್ ಅಖ್ತರ್ ತಕರಾರು ತೆಗೆದಿದ್ದಾರೆ. ಇಂಥ ಸಿನಿಮಾಗಳನ್ನು ಇಷ್ಟಪಡಬಾರದು ಎಂದು ಪ್ರೇಕ್ಷಕರಿಗೆ ಅವರು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಕಲೆಕ್ಷನ್ ಬಗ್ಗೆ ರಣಬೀರ್ ಕಪೂರ್ ಬಯಸಿದ್ದು ಎಷ್ಟು? ಆಗಿದ್ದೆಷ್ಟು?
‘ಈಗ ಸಿನಿಮಾದವರಿಗಿಂತಲೂ ಪ್ರೇಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಯಾವ ಸಿನಿಮಾವನ್ನು ಇಷ್ಟಪಡಬೇಕು ಎಂಬುದನ್ನು ಪ್ರೇಕ್ಷಕರು ನಿರ್ಧರಿಸಬೇಕು. ಒಳ್ಳೆಯ ಸಿನಿಮಾ ಮಾಡುವವರೂ ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಅವರಿಗೆ ನೀವು ಎಲ್ಲಿಯವರೆಗೆ ಬೆಂಬಲ ನೀಡುತ್ತೀರಿ ಎಂಬುದರ ಮೇಲೆ ಅಂಥ ಸಿನಿಮಾಗಳ ಭವಿಷ್ಯ ನಿರ್ಧಾರ ಆಗಿರುತ್ತದೆ’ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ