ರಾಮಾಯಣ ಕಥೆಯನ್ನು ಆಧರಿಸಿ ಈಗಾಗಲೇ ಅನೇಕ ಸಿನಿಮಾಗಳು ಬಂದು ಹೋಗಿವೆ. ಈಗ ಬಾಲಿವುಡ್ನಲ್ಲಿ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶಾಕಿಂಗ್ ಸಂಗತಿ ಏನೆಂದರೆ, ಈ ಚಿತ್ರತಂಡದ ಮೇಲೆ ಕಾಪಿರೈಟ್ (Copyright) ಉಲ್ಲಂಘನೆಯ ಆರೋಪ ಎದುರಾಗಿದೆ. ‘ರಾಮಾಯಣ’ (Ramayan) ಸಿನಿಮಾದ ನಿರ್ಮಾಪಕರಿಗೆ ನೋಟಿಸ್ ಕಳಿಸಲಾಗಿದೆ!
ಎಲ್ಲರಿಗೂ ತಿಳಿದಿರುವಂತೆ ‘ರಾಮಾಯಣ’ ಕಥೆ ಯಾರ ಸ್ವತ್ತೂ ಅಲ್ಲ. ಅದು ಎಲ್ಲರಿಗೂ ಸೇರಿದ್ದು. ಯಾರು ಬೇಕಿದ್ದರೂ ಆ ಕಥೆಯನ್ನು ಬಳಸಿಕೊಂಡು ಸಿನಿಮಾ, ನಾಟಕ, ಸೀರಿಯಲ್ ಮಾಡಬಹುದು. ಅದರ ಮೇಲೆ ಯಾರೂ ಕೂಡ ಕಾಪಿ ರೈಟ್ ಹೊಂದುವಂತಿಲ್ಲ. ಹಾಗಿದ್ದರೂ ಕೂಡ ಬಾಲಿವುಡ್ನ ‘ರಾಮಾಯಣ’ ಚಿತ್ರತಂಡಕ್ಕೆ ಕಾಪಿರೈಟ್ ಸಮಸ್ಯೆ ಎದುರಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಹಾಗೂ ಮಧು ಮಂಟೇನಾ ಅವರ ‘ಅಲ್ಲು ಮಂಟೇನಾ ಮೀಡಿಯಾ ವೆಂಚರ್ಸ್ ಎಲ್ಎಲ್ಪಿ’ ಕಂಪನಿಯ ಮೂಲಕ ಈ ನೋಟಿಸ್ ಕಳಿಸಿದ್ದಾರೆ. ಬಾಲಿವುಡ್ನಲ್ಲಿ ‘ರಾಮಾಯಣ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ‘ಪ್ರೈಂ ಫೋಕಸ್ ಟೆಕ್ನಾಲಜಿಸ್’ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಇದರ ಅನ್ವಯ ಏಪ್ರಿಲ್ನಲ್ಲಿ ‘ಪ್ರೈಂ ಫೋಕಸ್ ಟೆಕ್ನಾಲಜಿಸ್’ ಕಂಪನಿಯು ಕೆಲವು ಹಕ್ಕುಗಳನ್ನು ಖರೀದಿಸಬೇಕಿತ್ತು. ಆದರೆ ಒಪ್ಪಂದದ ಪ್ರಕಾರ ಹಕ್ಕು ಖರೀದಿಸದೇ ಸಿನಿಮಾ ಮಾಡುತ್ತಿರುವುದಕ್ಕೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ‘ರಾಮಾಯಣ’ ನಟಿ ಸಾಯಿ ಪಲ್ಲವಿ ಅಭಿನಯದ ಇನ್ನೊಂದು ಚಿತ್ರ 40 ಕೋಟಿ ರೂ.ಗೆ ಸೇಲ್
ರಾಮಾಯಣಕ್ಕೆ ಕಾಪಿರೈಟ್ ಇಲ್ಲವಾದರೂ ಸಹ, ಸ್ಕಿಪ್ಟ್ಗೆ ಕಾಪಿರೈಟ್ ಇರುತ್ತದೆ. ಸಿನಿಮಾದ ಟೈಟಲ್ಗೆ ಸಂಬಂಧಿಸಿದಂತೆ ಕೂಡ ಕಾಪಿರೈಟ್ ಸಮಸ್ಯೆ ಎದುರಾಗಬಹುದು. ಈಗ ಈ ಎರಡು ನಿರ್ಮಾಣ ಸಂಸ್ಥೆಗಳ ನಡುವೆ ಇದೇ ವಿಚಾರಕ್ಕೆ ಕಿರಿಕ್ ಆಗಿರಬಹುದು ಎನ್ನಲಾಗಿದೆ. ಬಾಲಿವುಡ್ನ ರಾಮಾಯಣ ಚಿತ್ರತಂಡದವರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಫೋಟೋಗಳು ಲೀಕ್ ಆಗಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.