‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ

ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾದಲ್ಲಿ ಏನೆಲ್ಲ ಇದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ನೀಡಿದ ಸೂಚನೆಗಳ ವಿವರ ಹೊರಬಿದ್ದಿದ್ದು, ಒಂದಷ್ಟು ಮಾಹಿತಿ ಸಿಕ್ಕಿದೆ. ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗ ಮಾಡಿದೆ. ಹಾಗಾಗಿ ಚಿತ್ರದ ಅವಧಿ ಸ್ವಲ್ಪ ತಗ್ಗಿದೆ.

‘ಧುರಂಧರ್ 2’ ಸಿನಿಮಾದ ಭೀಕರ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ: ತಗ್ಗಿತು ಚಿತ್ರದ ಅವಧಿ
Ranveer Singh

Updated on: Mar 18, 2026 | 11:54 AM

ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್, ಆರ್. ಮಾಧವನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಧುರಂಧರ್ 2’ (Dhurandhar 2) ಸಿನಿಮಾದ ಹೈಪ್ ಹೆಚ್ಚಾಗಿದೆ. ನಿರ್ದೇಶಕ ಆದಿತ್ಯ ಧಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಇಂದು (ಮಾರ್ಚ್ 18) ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಯ (CBFC) ವರದಿ ಹೊರಬಿದ್ದಿದ್ದು, ಸಿನಿಮಾದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸದಸ್ಯರು ‘ಎ’ ಸರ್ಟಿಫಿಕೇಟ್ ನೀಡಿ, 21 ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ.

‘ಧುರಂಧರ್ 2’ ಚಿತ್ರದಲ್ಲಿ ಅತಿಯಾದ ಹಿಂಸೆಯ ದೃಶ್ಯಗಳು ಇರುವ ಕಾರಣದಿಂದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಒಟ್ಟು 21 ಪ್ರಮುಖ ಬದಲಾವಣೆಗಳನ್ನು ಸೂಚಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ 4 ದೃಶ್ಯಗಳು ಅತ್ಯಂತ ಭಯಾನಕವಾಗಿದ್ದವು ಎಂದು ವರದಿಯಾಗಿದೆ. ಕಣ್ಣುಗಳನ್ನು ಜಜ್ಜುವ ದೃಶ್ಯ, ತಕೆ ಕಡಿದು ಕಾಲಿನಿಂದ ಒದೆಯುವ ದೃಶ್ಯ, ಸಿಮೆಂಟ್ ಬ್ಲಾಕ್‌ನಿಂದ ತಲೆಗೆ ಹೊಡೆಯುವ ದೃಶ್ಯ ಹಾಗೂ ಸುತ್ತಿಗೆಯಿಂದ ತಲೆಗೆ ಬಡಿಯುವ ದೃಶ್ಯಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.

ಕೇವಲ ಹಿಂಸಾಚಾರ ಮಾತ್ರವಲ್ಲದೆ ಕೆಲವು ಮಾಹಿತಿಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನೂ ಮಂಡಳಿ ಸೂಚಿಸಿದೆ. ಸಬ್ಟೈಟಲ್‌ನಲ್ಲಿ ನೀಡಲಾಗಿದ್ದ ನೋಟ್ ಬ್ಯಾನ್ ದಿನಾಂಕಗಳನ್ನು ಸರಿಪಡಿಸಲಾಗಿದೆ. ‘ಲಾಹೋರ್’ ಎಂಬ ಹೆಸರನ್ನು ತೆಗೆದು ‘ದೆಹಲಿ’ ಎಂದು ಬದಲಾಯಿಸಲಾಗಿದೆ. ಅಲ್ಲದೆ, ಪ್ರಧಾನ ಮಂತ್ರಿಯವರ ಉಲ್ಲೇಖ ಮತ್ತು ಸುದ್ದಿ ತುಣುಕುಗಳನ್ನು ಬಳಸಲು ಚಿತ್ರತಂಡ ಅಧಿಕೃತ ಅನುಮತಿ ಪತ್ರವನ್ನು ಸಲ್ಲಿಸಿದೆ.

ವಿದೇಶಕ್ಕಿಂತ ಭಾರತದಲ್ಲಿ ಈ ಸಿನಿಮಾದ ಅವಧಿ ಕಡಿಮೆ ಆಗಿದೆ. ಸೆನ್ಸಾರ್ ಕಟ್‌ಗಳ ನಂತರ ಭಾರತದಲ್ಲಿ ಈ ಚಿತ್ರದ ಒಟ್ಟು ಅವಧಿ 3 ಗಂಟೆ 49 ನಿಮಿಷ 36 ಸೆಕೆಂಡ್ ಆಗಿದೆ. ವಿದೇಶಗಳಲ್ಲಿ ಬಿಡುಗಡೆಯಾಗುತ್ತಿರುವ ಅವೃತ್ತಿಯು 3 ಗಂಟೆ 55 ನಿಮಿಷಗಳಷ್ಟಿದ್ದು, ಭಾರತೀಯ ಆವೃತ್ತಿಯು ಸುಮಾರು 6 ನಿಮಿಷಗಳಷ್ಟು ಚಿಕ್ಕದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

ಸೆನ್ಸಾರ್ ಮಂಡಳಿಯ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಎ ರೇಟಿಂಗ್ (ವಯಸ್ಕರಿಗೆ ಮಾತ್ರ) ಎಂದು ಸರ್ಟಿಫಿಕೇಟ್ ನೀಡಿದ ಮೇಲೆ ದೃಶ್ಯಗಳನ್ನು ಕತ್ತರಿಸುವ ಅವಶ್ಯಕತೆಯಾದರೂ ಏನಿತ್ತು?’ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದಾರೆ. ‘ಸೆನ್ಸಾರ್ ಮಂಡಳಿ ಇರುವುದು ಸಿನಿಮಾ ಎಡಿಟ್ ಮಾಡಲಿಕ್ಕಲ್ಲ, ರೇಟಿಂಗ್ ನೀಡಲು ಮಾತ್ರ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us