ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್

‘ಧುರಂಧರ್’ ಸಿನಿಮಾದಿಂದ ನಟ ರಣವೀರ್ ಸಿಂಗ್ ಅವರ ಖ್ಯಾತಿ ವಿಶ್ವಾದ್ಯಂತ ಹೆಚ್ಚಾಗಿದೆ. ಈಗ ಅವರು ‘ಧುರಂಧರ್: ದಿ ರಿವೇಂಜ್’ ಸಿನಿಮಾ ಮೂಲಕ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಗ್ಯಾರಂಟಿ ಎಂಬ ಭರವಸೆ ಅವರಿಗೆ ಇದೆ.

ಭಾರತೀಯ ಚಿತ್ರರಂಗದ ಭವಿಷ್ಯ ಬದಲಿಸಲಿದೆ ಧುರಂಧರ್ 2: ರಣವೀರ್ ಸಿಂಗ್
Ranveer Singh (20)
Image Credit source: PTI

Updated on: Mar 18, 2026 | 11:12 AM

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅವರು ‘ಧುರಂಧರ್’ ಚಿತ್ರದ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಮಂಗಳವಾರ (ಮಾರ್ಚ್ 17) ಸಂಜೆ ಮುಂಬೈನಲ್ಲಿ ನಡೆದ ‘ಧುರಂಧರ್ 2’ (Dhurandhar 2) ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ತಮ್ಮ ವಿಶಿಷ್ಟ ಶೈಲಿಯ ಮೂಲಕ ವೇದಿಕೆಯ ಮೇಲೆ ಮಿಂಚಿದ ರಣವೀರ್, ಚಿತ್ರದ ಮೊದಲ ಭಾಗಕ್ಕೆ ಪ್ರೇಕ್ಷಕರು ನೀಡಿದ ಅಭೂತಪೂರ್ವ ಯಶಸ್ಸನ್ನು ನೆನೆದು ಭಾವುಕರಾದರು. ಅಲ್ಲದೇ, ‘ಧುರಂಧರ್ 2’ ಸಿನಿಮಾ ಮೇಲೆ ಜನರು ಇಟ್ಟಿರುವ ನಿರೀಕ್ಷೆಯ ಬಗ್ಗೆಯೂ ರಣವೀರ್ ಸಿಂಗ್ (Ranveer Singh) ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿ ಸಾರಾ ಅರ್ಜುನ್ ಮತ್ತು ಸಂಗೀತ ತಂಡದ ಸದಸ್ಯರಾದ ಶಾಶ್ವತ್ ಸಚದೇವ್, ಜಾಸ್ಮಿನ್ ಸ್ಯಾಂಡ್ಲಾಸ್, ಖಾನ್ ಸಾಬ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಮೊದಲ ಬಾರಿಗೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ರಣವೀರ್, ‘ಸ್ನೇಹಿತರೇ, ನೀವು ನಮ್ಮ ಧುರಂಧರ್ ಚಿತ್ರವನ್ನು ಐತಿಹಾಸಿಕ ಮೈಲಿಗಲ್ಲಿಗೆ ತಲುಪಿಸಿದ್ದೀರಿ. ಇದು ಕೇವಲ ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಇಡೀ ತಂಡದ ಪರವಾಗಿ ಪ್ರಪಂಚದಾದ್ಯಂತ ಇರುವ ಸಿನಿಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ತಿಳಿಸಿದರು.

ಆದಿತ್ಯ ಧಾರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾದ ಎರಡನೇ ಭಾಗದ ಬಗ್ಗೆ ಮಾತನಾಡಿದ ರಣವೀರ್ ಸಿಂಗ್, ‘ಈಗ ಎರಡನೇ ಭಾಗ ಬಿಡುಗಡೆಗೆ ಸಿದ್ಧವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನರು ಇದಕ್ಕೆ ಕಾಯುತ್ತಿದ್ದಾರೆ. ಎರಡನೇ ಭಾಗದ ಬಗ್ಗೆ ಇರುವ ನಿರೀಕ್ಷೆ ಅಭೂತಪೂರ್ವವಾದುದು’ ಎಂದು ಹೇಳಿದರು. ಅಲ್ಲದೇ, ಈ ಚಿತ್ರವು ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸಲಿದೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.

‘ಧುರಂಧರ್’ ಚಿತ್ರದಲ್ಲಿ ಪಾಕಿಸ್ತಾನದ ಕರಾಚಿಗೆ ತೆರಳಿದ್ದ ಭಾರತೀಯ ಗೂಢಚಾರಿಯ ಸಾಹಸದ ಕಥೆಯನ್ನು ಹೇಳಲಾಗಿತ್ತು. 1999ರ ವಿಮಾನ ಅಪಹರಣ, 2001ರ ಸಂಸತ್ ಮೇಲಿನ ದಾಳಿ ಮತ್ತು 2008ರ ಮುಂಬೈ ದಾಳಿಯಂತಹ ನೈಜ ಘಟನೆಗಳ ಎಳೆಯನ್ನು ಈ ಸಿನಿಮಾ ಒಳಗೊಂಡಿತ್ತು. ವಿಶ್ವದಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಧುರಂಧರ್: ದಿ ರಿವೇಂಜ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಬುಧವಾರ (ಮಾ.18) ಸಂಜೆ 5.30ರಿಂದಲೇ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿದ್ದು, ಸಿನಿಮಾ ಮತ್ತೊಂದು ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us