ಮೋದಿ ಮತ್ತು ನಿರುದ್ಯೋಗದ ಬಗ್ಗೆ ರಣವೀರ್ ಸಿಂಗ್ ಮಾತಾಡಿದ್ದು ನಿಜವೇ? ಇಲ್ಲಿದೆ ಅಸಲಿ ಕಥೆ
ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಶಿಗೆ ತೆರಳಿದ್ದಾಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ ಒಂದಷ್ಟು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಈಗ ಅದೇ ವಿಡಿಯೋಗೆ ಎಐ ಧ್ವನಿ ಮೂಲಕ ಬೇರೆ ರೂಪ ನೀಡಲಾಗಿದೆ. ಬೆಲೆ ಏರಿಕೆ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ರಣವೀರ್ ಸಿಂಗ್ ಅವರು ಟೀಕೆ ಮಾಡಿದ್ದಾರೆ ಎಂಬ ರೀತಿಯಲ್ಲಿ ವಿಡಿಯೋ ತಿರುಚಲಾಗಿದೆ.
ಲೋಕಸಭಾ ಚುನಾವಣೆ (Lok Sabha Elections) ಕಾವು ಇಡೀ ದೇಶದಲ್ಲಿ ಹಬ್ಬಿದೆ. ಪ್ರಮುಖ ಪಕ್ಷಗಳು ಪ್ರಚಾರಕ್ಕಾಗಿ ಸೆಲೆಬ್ರಿಟಿಗಳ ಮೊರೆ ಹೋಗುತ್ತಿವೆ. ಸ್ಟಾರ್ ನಟ-ನಟಿಯರನ್ನು ಕರೆತಂದು ಪ್ರಚಾರ ಮಾಡಿಸಲಾಗುತ್ತಿದೆ. ಆದರೆ ಅದರ ನಡುವೆ ಒಂದು ಗಿಮಿಕ್ ಕೂಡ ನಡೆದಿದೆ. ಡೀಪ್ಫೇಕ್ (Deepfake) ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಸೆಲೆಬ್ರಿಟಿಗಳ ವಿಡಿಯೋಗಳನ್ನು ತಿರುಚಿ, ಜನರ ಗಮನ ಸೆಳೆಯುವ ಪ್ರಯತ್ನ ಕೂಡ ಆಗಿದೆ. ಇತ್ತೀಚೆಗಷ್ಟೇ ನಟ ಆಮಿರ್ ಖಾನ್ ಅವರ ವಿಡಿಯೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ರಣವೀರ್ ಸಿಂಗ್ (Ranveer Singh) ಅವರು ವಿಡಿಯೋವನ್ನು ತಿರುಚಲಾಗಿದೆ. ಅದರಲ್ಲಿ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ರೀತಿಯಲ್ಲಿ ಬಿಂಬಿಸಲಾಗಿದೆ.
ಕೆಲವೇ ದಿನಗಳ ಹಿಂದೆ ರಣವೀರ್ ಸಿಂಗ್ ಅವರು ಕಾಶಿಗೆ ತೆರಳಿದ್ದರು. ಆಗ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ಅಂಶಗಳನ್ನು ಹಂಚಿಕೊಂಡಿದ್ದರು. ಆ ವಿಡಿಯೋಗೆ ಎಐ ವಾಯ್ಸ್ ಮೂಲಕ ಬೇರೆಯದೇ ಧ್ವನಿಯನ್ನು ನೀಡಲಾಗಿದೆ. ರಣವೀರ್ ಸಿಂಗ್ ಅವರು ಬೆಲೆ ಏರಿಕೆ, ನಿರುದ್ಯೋಗ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ ಎನ್ನವ ಹಾಗೆ ಈ ವಿಡಿಯೋವನ್ನು ತಿರುಚಲಾಗಿದೆ.
Deepfake se bacho dostonnnn 💀
— Ranveer Singh (@RanveerOfficial) April 19, 2024
ಇದು ರಣವೀರ್ ಸಿಂಗ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಡೀಪ್ಫೇಕ್ ವಿಡಿಯೋ ಬಗ್ಗೆ ಎಚ್ಚರದಿಂದಿರಿ ಗೆಳೆಯರೇ..’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಾವು ಯಾವುದೇ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ನಕಲಿ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ನಟ ದ್ವಾರಕೀಶ್ ನಿಧನಕ್ಕೆ ನರೇಂದ್ರ ಮೋದಿ ಸಂತಾಪ; ಪ್ರಧಾನಿ ಹೇಳಿದ್ದೇನು?
ಡೀಪ್ಫೇಕ್ ವಿಡಿಯೋಗಳ ಮೂಲಕ ಸೆಲೆಬ್ರಿಟಿಗಳ ಹೆಸರಿಗೆ ಮಸಿ ಬಳಿಯುವ ಕೃತ್ಯ ನಡೆಯುತ್ತಿದೆ. ಈ ಮೊದಲು ರಶ್ಮಿಕಾ ಮಂದಣ್ಣ, ಕಾಜೋಲ್, ಆಲಿಯಾ ಭಟ್ ಮುಂತಾದ ನಟಿಯರಿಗೆ ಡೀಪ್ಫೇಕ್ ಕಾಟ ಎದುರಾಗಿತ್ತು. ಆಮಿರ್ ಖಾನ್ ಅವರ ವಿಡಿಯೋವನ್ನು ಕೂಡ ದುರ್ಬಳಕೆ ಮಾಡಿಕೊಳ್ಳಲಾಯಿತು. ಆ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.