ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಈಗ ಯಾಕೋ ಟೈಮ್ ಚೆನ್ನಾಗಿಲ್ಲ ಎನಿಸುತ್ತದೆ. ಅವರು ಮಾಡಿನ ಎಲ್ಲ ಕೆಲಸಗಳು ಕೈ ಕೊಡುತ್ತಿವೆ. ಕಳೆದ ವರ್ಷ ಅವರು ನಟಿಸಿದ ‘83’ ಸಿನಿಮಾ ರಿಲೀಸ್ ಆಗಿ ನೆಲಕಚ್ಚಿತು. ಈಗ ಅವರ ಹೊಸ ಚಿತ್ರ ‘ಜಯೇಶ್ಭಾಯ್ ಜೋರ್ದಾರ್’ (Jayeshbhai Jordaar) ಸಿನಿಮಾ ತೆರೆಕಂಡಿದೆ. ಈ ಸಿನಿಮಾ ಮೇಲೆ ರಣವೀರ್ ಸಿಂಗ್ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕುರಿತ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಅವರು ಜೋರಾಗಿಯೇ ಪ್ರಚಾರ ಮಾಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಈ ಚಿತ್ರಕ್ಕೆ 2 ಆಘಾತಗಳು ಎದುರಾಗಿವೆ. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಗೆ ನೆಗೆಟಿವ್ ಪ್ರತಿಕ್ರಿಯೆ ಬಂದಿರುವುದು ಮೊದಲ ಆಘಾತ. ಇಂಟರ್ನೆಟ್ನಲ್ಲಿ ಈ ಸಿನಿಮಾ ಲೀಕ್ ಆಗಿರುವುದು ಎರಡನೇ ಆಘಾತ! ಹೌದು, ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾ ಪೈರಸಿ (Piracy) ಆಗಿದೆ. ಈ ಚಿತ್ರ ಲೀಕ್ ಆಗಿದ್ದು, ಇದರಿಂದ ಚಿತ್ರತಂಡಕ್ಕೆ ಬಹುದೊಡ್ಡ ನಷ್ಟ ಆಗಿದೆ.
ಚಿತ್ರರಂಗದಲ್ಲಿ ಪೈರಸಿ ಎಂಬುದು ಬಹುದೊಡ್ಡ ಪಿಡುಗಾಗಿದೆ. ಬಹುತೇಕ ಸ್ಟಾರ್ ನಟರು ಇದರ ಕಾಟದಿಂದ ನಷ್ಟ ಅನುಭವಿಸಿದ್ದಾರೆ. ಈಗ ರಣವೀರ್ ಸಿಂಗ್ ಅಭಿನಯದ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾವನ್ನು ಕೂಡ ಇಂಟರ್ನೆಟ್ನಲ್ಲಿ ಹರಿಬಿಡಲಾಗಿದೆ. ಕೆಲವು ಕುಖ್ಯಾತ ಪೈರಸಿ ವೆಬ್ಸೈಟ್ಗಳಲ್ಲಿ ಈ ಸಿನಿಮಾ ಲಭ್ಯವಾಗುತ್ತಿದೆ. ಇದರಿಂದ ಸಹಜವಾಗಿಯೇ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬೀಳಲಿದೆ.
ಸಿನಿಮಾ ತುಂಬ ಚೆನ್ನಾಗಿದ್ದರೆ ಪೈರಸಿಯಿಂದ ಅಷ್ಟೇನೂ ತೊಡಕು ಆಗುವುದಿಲ್ಲ ಎಂಬುದು ಕೂಡ ಇತ್ತೀಚೆಗೆ ಸಾಬೀತಾದ ವಿಚಾರ. ಹೌದು, ‘ಆರ್ಆರ್ಆರ್’, ‘ಕೆಜಿಎಫ್ 2’ ಮುಂತಾದ ಸಿನಿಮಾಗಳು ಕೂಡ ಆನ್ಲೈನ್ನಲ್ಲಿ ಲೀಕ್ ಆಗಿದ್ದವು. ಆದರೆ ಆ ಸಿನಿಮಾಗಳ ಮೇಕಿಂಗ್ ಗುಣಮಟ್ಟ ಮತ್ತು ಕಥೆ ಚೆನ್ನಾಗಿ ಇದ್ದಿದ್ದರಿಂದ ಜನರು ಪೈರಸಿ ಕಾಪಿ ಕಡೆಗೆ ಗಮನ ನೀಡದೇ, ನೇರವಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿದರು. ಆದರೆ ‘ಜಯೇಶ್ಭಾಯ್ ಜೋರ್ದಾರ್’ ಚಿತ್ರದ ವಿಚಾರದಲ್ಲಿ ಹೀಗೆ ಆಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಈ ಸಿನಿಮಾ ಕೆಟ್ಟ ವಿಮರ್ಶೆಯನ್ನು ಪಡೆದುಕೊಂಡಿದೆ.
‘ಜಯೇಶ್ಭಾಯ್ ಜೋರ್ದಾರ್’ ಚಿತ್ರದಲ್ಲಿ ರಣವೀರ್ ಸಿಂಗ್ಗೆ ಜೋಡಿಯಾಗಿ ಶಾಲಿನಿ ಪಾಂಡೆ ನಟಿಸಿದ್ದಾರೆ. ‘ಅರ್ಜುನ್ ರೆಡ್ಡಿ’ ಸಿನಿಮಾದಿಂದ ದೊಡ್ಡ ಗೆಲುವು ಪಡೆದ ಬಳಿಕ ಭರ್ಜರಿಯಾಗಿ ಬಾಲಿವುಡ್ಗೆ ಕಾಲಿಟ್ಟ ಅವರು ಈಗ ಸೋಲು ಅನುಭವಿಸುವಂತಾಗಿದೆ. ಈ ಚಿತ್ರಕ್ಕೆ ದಿವ್ಯಾಂಗ್ ಟಕ್ಕರ್ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದೆ.
ಉತ್ತಮ ವಿಮರ್ಶೆ ಪಡೆಯುವಲ್ಲಿ ಸೋತ ‘ಜಯೇಶ್ಭಾಯ್ ಜೋರ್ದಾರ್’:
ವಿಮರ್ಶಕರ ವಲಯದಿಂದ ಈ ಚಿತ್ರಕ್ಕೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದೆ. ಖ್ಯಾತ ಸಿನಿಮಾ ವಿಮರ್ಶಕ ಮತ್ತು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಅವರು ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾವನ್ನು ಒಂದು ವಾಕ್ಯದಲ್ಲಿ ಬಣ್ಣಿಸಿದ್ದು ‘ಕಳಪೆ’ ಎಂದು ಕರೆದಿದ್ದಾರೆ. ವಿಮರ್ಶಕ ರೋಹಿತ್ ಜೈಸ್ವಾಲ್ ಐದಕ್ಕೆ ಒಂದು ಸ್ಟಾರ್ ನೀಡಿದ್ದಾರೆ. ಜನಸಾಮಾನ್ಯರು ಕೂಡ ಈ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೆಲವರು ‘ಡಿಸಾಸ್ಟರ್’ ಎಂದು ಕರೆದಿದ್ದಾರೆ. ಇದರಿಂದ ರಣವೀರ್ ಸಿಂಗ್ ಸಿನಿಮಾಗೆ ತೀವ್ರ ಹಿನ್ನಡೆ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.