ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ

ಟೀಕೆ ಮತ್ತು ಮಿಶ್ರ ಪ್ರತಿಕ್ರಿಯೆ ನಡುವೆಯೂ ‘ಧುರಂಧರ್ 2’ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ನಟ ರಣವೀರ್ ಸಿಂಗ್ ಅವರ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾವಾಗಿ ಈ ಚಿತ್ರ ಹೊರಹೊಮ್ಮಿದೆ. ಪ್ರೀಮಿಯರ್ ಸೇರಿ 3 ದಿನಕ್ಕೆ ‘ಧುರಂಧರ್ 2’ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಿದೆ.

ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ
Ranveer Singh

Updated on: Mar 22, 2026 | 7:20 AM

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮೋಡಿ ಮಾಡುತ್ತಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರ ನಡುವೆಯೂ ಗಳಿಕೆ ಜೋರಾಗಿದೆ. ಪ್ರೀಮಿಯರ್ ಶೋ ಸೇರಿಸಿ ಕೇವಲ ಮೂರೇ ದಿನಕ್ಕೆ ‘ಧುರಂಧರ್ 2’ ಸಿನಿಮಾದ ಕಲೆಕ್ಷನ್ (Dhurandhar 2 Box Office Collection) 300 ಕೋಟಿ ರೂಪಾಯಿ ಮೀರಿದೆ. ಆ ಬಗ್ಗೆ ಇಲ್ಲಿದೆ ವಿವರ..

ಮಾರ್ಚ್ 18ರ ಸಂಜೆಯಿಂದ ‘ಧುರಂಧರ್ 2’ ಸಿನಿಮಾಗೆ ಪ್ರೀಮಿಯರ್ ಶೋ ಆರಂಭ ಆಯಿತು. ಅಂದು ಈ ಚಿತ್ರಕ್ಕೆ 43 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಮಾರ್ಚ್ 19ರಂದು ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಯಿತು. ಆ ದಿನ 102.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶುಕ್ರವಾರ (ಮಾರ್ಚ್ 20) 80.72 ಕೋಟಿ ರೂಪಾಯಿ ಕಮಾಯಿ ಮಾಡಿತು. ಶನಿವಾರ (ಮಾರ್ಚ್ 21) ಬರೋಬ್ಬರಿ 113 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ.

ಒಂದು ಸಿನಿಮಾ ಒಂದೇ ದಿನದಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯೇ ಅಲ್ಲ. ಟಿಕೆಟ್ ಬೆಲೆ ಏರಿಕೆ ಆಗಿದೆ. ಹಾಗಿದ್ದರೂ ಕೂಡ ಜನರು ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಅನೇಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆಗಳು ಕೂಡ ಹೆಚ್ಚಾಗಿವೆ. ಅದರ ನಡುವೆಯೂ ಈ ಸಿನಿಮಾ ಪ್ರತಿ ದಿನ ನೂರಾರು ಕೋಟಿ ರೂಪಾಯಿ ಗಳಿಸುತ್ತಿದೆ.

ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರು ಈ ಸಿನಿಮಾದಿಂದ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅನುಪಮ್ ಖೇರ್, ರಿಷಬ್ ಶೆಟ್ಟಿ, ಜೂನಿಯರ್ ಎನ್​ಟಿಆರ್, ರವಿತೇಜ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

ಬಿಡುಗಡೆಗೂ ಮುನ್ನವೇ ‘ಧುರಂಧರ್ 2’ ಸಿನಿಮಾ ಬಗ್ಗೆ ವಿವಾದ ಶುರುವಾಗಿತ್ತು. ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಟೀಕಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಲೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಮುಂದಿನ ದಿನಗಳಲ್ಲಿ ‘ಧರಂಧರ್ 2’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us