ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?

'ಕಾಕ್‌ಟೇಲ್ 2' ಸಿನಿಮಾ ಬಿಡುಗಡೆಗೆ ಮುನ್ನ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ನಡುವೆ ಜಗಳ ನಡೆದಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ 'ಕ್ಯಾಟ್ ಫೈಟ್' ವಾಸ್ತವವಾಗಿ ಚಿತ್ರದ ಪ್ರಚಾರಕ್ಕಾಗಿ ಹೂಡಿದ ಚಾಣಾಕ್ಷ ತಂತ್ರ ಎಂದು ಸಿನಿಮಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಸಿನಿಮಾ ತಂಡದ ಸ್ಮಾರ್ಟ್ ಮಾರ್ಕೆಟಿಂಗ್ ತಂತ್ರವಷ್ಟೇ ಹೊರತು ನಿಜವಾದ ವೈಮನಸ್ಸಲ್ಲ.

ರಶ್ಮಿಕಾ-ಕೃತಿ ಮಧ್ಯೆ ಕ್ಯಾಟ್ ಫೈಟ್; ಸಿನಿಮಾ ಪ್ರಚಾರಕ್ಕಾಗಿ ಚೀಪ್ ಗಿಮಿಕ್?
ರಶ್ಮಿಕಾ-ಕೃತಿ

Updated on: May 22, 2026 | 12:11 PM

ಬಾಲಿವುಡ್‌ನ ಬಹುನಿರೀಕ್ಷಿತ ‘ಕಾಕ್‌ಟೇಲ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ಕೃತಿ ಸನೋನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ನಡುವೆ ಕಿರಿಕ್ ನಡೆದಿದೆ ಎನ್ನಲಾಗಿದೆ. ಈ ಜಗಳದ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಲ್ಲಿ ನಡೆದ ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ, ನಂತರ ಇನ್‌ಸ್ಟಾಗ್ರಾಮ್ ಪೋಸ್ಟ್​​ಗಳಲ್ಲೂ ಮುಂದುವರಿದಿದೆ.

ವೇದಿಕೆಯಲ್ಲೇ ಶುರುವಾದ ಪೈಪೋಟಿ:

ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಮ್ಯಾಡಾಕ್ ಫಿಲ್ಮ್ಸ್’ಗೆ ಯಾರು ಹೆಚ್ಚು ಆಪ್ತರು ಎಂಬ ವಿಷಯವಾಗಿ ವೇದಿಕೆ ಮೇಲೆಯೇ ಕೃತಿ ಹಾಗೂ ರಶ್ಮಿಕಾ ನಡುವೆ ಲಘು ಪೈಪೋಟಿ ಆರಂಭವಾಯಿತು. ಕೃತಿ ಸನೋನ್ ಮಾತನಾಡುತ್ತಾ, ‘ನಾನು ಈಗಾಗಲೇ ಮ್ಯಾಡಾಕ್ ಸಂಸ್ಥೆಯೊಂದಿಗೆ 7 ಸಿನಿಮಾಗಳನ್ನು ಮಾಡಿದ್ದೇನೆ, ಹಾಗಾಗಿ ಇದು ನನ್ನದೇ ಸಾಂಗ್ ಲಾಂಚ್’ ಎಂದು ಹೆಮ್ಮೆಯಿಂದ ಹೇಳಿದರು. ಇದಕ್ಕೆ ಕೌಂಟರ್ ನೀಡಿದ ರಶ್ಮಿಕಾ, ‘ನನ್ನ ಹಾಡು ಅಧಿಕೃತವಾಗಿ ಲಾಂಚ್ ಆಗುತ್ತಿದೆ, ಆದರೆ ನಿಮ್ಮ (ಕೃತಿ) ಹಾಡು ಕೇವಲ ನಿಮ್ಮ ಮನರಂಜನೆಗಾಗಿ ಅಷ್ಟೇ’ ಎಂದು ತಮಾಷೆ ಮಾಡಿದರು.

ಫ್ಯಾನ್ಸ್ ವೋಟಿಂಗ್ ಮತ್ತು ರಶ್ಮಿಕಾ ಆಕ್ರೋಶ:

ಕೃತಿ ಅವರ ‘ಮಾಶೂಕಾ’ ಮತ್ತು ರಶ್ಮಿಕಾ ಅವರ ‘ತುಜ್ಕೋ’ ಹಾಡುಗಳಲ್ಲಿ ಯಾವುದು ಮೊದಲು ಪ್ರಸಾರವಾಗಬೇಕು ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಅಭಿಮಾನಿಗಳ ಬಳಿ ವೋಟ್ ಮಾಡಲು ಕೇಳಿದಾಗ, ಪ್ರೇಕ್ಷಕರು ಕೃತಿ ಅವರ ಹಾಡಿಗೆ ಜೋರಾಗಿ ಜೈಕಾರ ಹಾಕಿದರು. ಇದರಿಂದ ತಮಾಷೆಯಾಗಿಯೇ ಅಸಮಾಧಾನಗೊಂಡ ರಶ್ಮಿಕಾ, ‘ಈ ವೋಟಿಂಗ್ ಪ್ರಕ್ರಿಯೆಯೇ ಫೇಕ್ ಎಂದು ವೇದಿಕೆಯಲ್ಲೇ ಕೂಗಾಡಿದರು. ಇದು ಅಲ್ಲಿ ನೆರೆದಿದ್ದವರಲ್ಲಿ ದೊಡ್ಡ ನಗುವಿನ ಅಲೆ ಎಬ್ಬಿಸಿತು.

ಮೈಕ್‌ನಲ್ಲಿ ರಶ್ಮಿಕಾ ಬಾಯಿಂದ ಬಂದ ಬೈಗುಳ:

ಕಾರ್ಯಕ್ರಮದ ಮಧ್ಯೆ ರಶ್ಮಿಕಾ ಮಂದಣ್ಣ ಅವರು ಕೃತಿ ಸನೋನ್ ಅವರ ಸೌಂದರ್ಯವನ್ನು ಹೊಗಳುವ ಉತ್ಸಾಹದಲ್ಲಿ, ಮೈಕ್ ಆನ್ ಇರುವುದನ್ನು ಮರೆತು ಅಚಾತುರ್ಯದಿಂದ ಇಂಗ್ಲಿಷ್‌ನ ಕೆಟ್ಟ ಪದವೊಂದನ್ನು ಬಳಸಿಬಿಟ್ಟರು. ಇದನ್ನು ಕೇಳಿ ಒಂದು ಕ್ಷಣ ಇಡೀ ಸಭಾಂಗಣವೇ ಸ್ತಬ್ಧವಾಯಿತು. ಆದರೆ, ತಕ್ಷಣವೇ ಪರಿಸ್ಥಿತಿಯನ್ನು ನಿಭಾಯಿಸಿದ ಕೃತಿ ಮತ್ತು ರಶ್ಮಿಕಾ ಜೋರಾಗಿ ನಗಲು ಆರಂಭಿಸಿದರು. ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತು.

ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿ ನೀಡಿದ ಟಾಂಗ್:

ಆದರೆ ಈ ಮುನಿಸು ಅಷ್ಟಕ್ಕೇ ನಿಲ್ಲಲಿಲ್ಲ. ರಶ್ಮಿಕಾ ಅವರು ಕೃತಿಗೆ ಟಾಂಗ್ ಕೊಡೋ ರೀತಿ ಸ್ಟೇಟಸ್ ಹಾಕಿದರು. ಕೃತಿ ಸನೋನ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ‘ಮಾಶೂಕಾಗೆ ಹಣ್ಣಾದ ಮಾವಿನಹಣ್ಣು ಇಷ್ಟ, ಹುಳಿ ದ್ರಾಕ್ಷಿ ಅಲ್ಲ’ ಎಂದು ಬರೆಯುವ ಮೂಲಕ ರಶ್ಮಿಕಾ ಅವರ ‘ಫೇಕ್ ವೋಟಿಂಗ್’ ಕಾಮೆಂಟ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಫ್ರಾನ್ಸ್​​ನಲ್ಲಿ ಕನ್ನಡದ ಸಂಸ್ಕೃತಿ ಮೆರೆದ ದಿಶಾ ಮದನ್

ನಿಜವಾದ ಜಗಳನಾ ಅಥವಾ ಸ್ಮಾರ್ಟ್ ಪ್ರಮೋಷನಾ?

ಮಾಧ್ಯಮಗಳಲ್ಲಿ ಇದನ್ನು ‘ಕ್ಯಾಟ್ ಫೈಟ್’ ಎಂದು ಬಿಂಬಿಸಲಾಗುತ್ತಿದ್ದರೂ, ಸಿನಿಮಾ ತಜ್ಞರ ಪ್ರಕಾರ ಇಬ್ಬರ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಬದಲಿಗೆ, ಇದು ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೂಡಿರುವ ಅತ್ಯಂತ ಚಾಣಾಕ್ಷ ತಂತ್ರವಾಗಿದೆ. ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ ಚಿತ್ರದ ಇಬ್ಬರೂ ನಾಯಕಿಯರ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನಲಾಗಿದೆ. ಜೂನ್ 19ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:01 am, Fri, 22 May 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us