ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಒಂದಕ್ಕಿಂತ ಮತ್ತೊಂದು ಸೂಪರ್ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರನ್ನು ಬಾಲಿವುಡ್ ಕೈ ಬೀಸಿ ಕರೆಯಿತು. ಅಲ್ಲಿಯೂ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಅಭಿನಯಿಸುವ ಅವಕಾಶ ಅವರಿಗೆ ಸಿಗುತ್ತಿದೆ. ಅದರಲ್ಲೂ ಅಮಿತಾಭ್ ಬಚ್ಚನ್ (Amitabh Bachchan) ಜೊತೆ ತೆರೆ ಹಂಚಿಕೊಳ್ಳುವುದು ಎಂದರೆ ತಮಾಷೆಯ ಮಾತಲ್ಲ. ರಶ್ಮಿಕಾ ಮಂದಣ್ಣ ಅವರಿಗೆ ‘ಗುಡ್ಬೈ’ (Goodbye) ಚಿತ್ರದಲ್ಲಿ ಅಂಥ ಚಾನ್ಸ್ ಸಿಕ್ಕಿತು. ಈಗ ಆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಅಕ್ಟೋಬರ್ 7ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರ ತಿಳಿಸಲು ಹೊಸ ಪೋಸ್ಟರ್ ಅನಾವರಣ ಮಾಡಲಾಗಿದೆ.
‘ಗುಡ್ಬೈ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅವರು ಅಪ್ಪ-ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ದಿಗ್ಗಜ ನಟನ ಜೊತೆ ತೆರೆ ಹಂಚಿಕೊಂಡಿರುವುದು ರಶ್ಮಿಕಾ ಪಾಲಿನ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ಜನರು ಯಾವ ರೀತಿ ರೆಸ್ಪಾನ್ಸ್ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗುತ್ತಿದೆ.
ಬಾಲಿವುಡ್ನಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ರಶ್ಮಿಕಾ ಮಂದಣ್ಣ ಸಿದ್ಧರಾಗಿದ್ದಾರೆ. ‘ಗುಡ್ ಬೈ’ ಚಿತ್ರದ ರಿಲೀಸ್ ದಿನಾಂಕವನ್ನು ಅವರು ಖುಷಿಖುಷಿಯಿಂದ ತಿಳಿಸಿದ್ದಾರೆ. ‘ಅಪ್ಪ ಮತ್ತು ನಾನು ನಿಮ್ಮ ಕುಟುಂಬವನ್ನು ಭೇಟಿ ಆಗಲು ಅಕ್ಟೋಬರ್ 7ರಂದು ಬರುತ್ತಿದ್ದೇವೆ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಅದರ ಜೊತೆ ಅವರು ಹಂಚಿಕೊಂಡಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ.
ಅಮಿತಾಭ್ ಬಚ್ಚನ್ ಗಾಳಿಪಟ ಹಾರಿಸುತ್ತಿದ್ದಾರೆ. ಅವರ ಹಿಂದೆ ನಿಂತು ರಶ್ಮಿಕಾ ಮಂದಣ್ಣ ಅವರು ನಗು ಬೀರುತ್ತಿದ್ದಾರೆ. ತಂದೆ-ಮಗಳ ನಡುವಿನ ಕಥೆಯೇ ಈ ಸಿನಿಮಾದ ಹೈಲೈಟ್ ಎಂಬುದನ್ನು ಈ ಪೋಸ್ಟರ್ ಒತ್ತಿ ಹೇಳುತ್ತಿದೆ. ಅಮಿತಾಭ್ ಬಚ್ಚನ್ ಅವರು ವಯಸ್ಸಿಗೆ ತಕ್ಕಂತಹ ಪಾತ್ರಗಳಿಗೆ ಜೀವ ತುಂಬುತ್ತಾ ಇಂದಿಗೂ ಚಾರ್ಮ್ ಉಳಿಸಿಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾರೆ.
‘ಪುಷ್ಪ’ ಚಿತ್ರದ ಹಿಂದಿ ವರ್ಷನ್ ಹಿಟ್ ಆದ ಬಳಿಕ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್ನಲ್ಲಿ ಆಫರ್ ಹೆಚ್ಚಿದವು. ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಆ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ರಣಬೀರ್ ಕಪೂರ್ ಜೊತೆ ‘ಅನಿಮಲ್’ ಚಿತ್ರದಲ್ಲಿ ರಶ್ಮಿಕಾ ತೆರೆಹಂಚಿಕೊಳ್ಳಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 pm, Sat, 3 September 22