ಭಾರತ ವೇಗವಾಗಿ ಬೆಳೆಯುತ್ತಿದೆ, ಈ ಪ್ರಗತಿ ನಿಲ್ಲಬಾರದು: ರಶ್ಮಿಕಾ ಮಂದಣ್ಣ

|

Updated on: May 15, 2024 | 9:07 AM

ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ನಿರ್ಮಿಸಲಾಗಿರುವ ಅಟಲ್ ಸೇತು ಬಗ್ಗೆ ಮಾತನಾಡುತ್ತಾ, ಭಾರತ ಕಳೆದ ಹತ್ತು ವರ್ಷಗಳಿಂದ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಈ ಪ್ರಗತಿ ನಿಲ್ಲಬಾರದು ಎಂದಿದ್ದಾರೆ.

ಭಾರತ ವೇಗವಾಗಿ ಬೆಳೆಯುತ್ತಿದೆ, ಈ ಪ್ರಗತಿ ನಿಲ್ಲಬಾರದು: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
Follow us on

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್ ನಟಿಯಾಗಿಬಿಟ್ಟಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಗಿಂತಲೂ ಬಾಲಿವುಡ್ ಪ್ರಾಜೆಕ್ಟ್​ಗಳನ್ನು ಬಾಚಿಕೊಳ್ಳುವುದರ ಮೇಲೆ ಹೆಚ್ಚು ಗಮನವಹಿಸಿದ್ದಾರೆ. ಈ ಹಿಂದೆ ಹೈದರಾಬಾದ್​ನಲ್ಲಿ ವಾಸ್ತವ್ಯ ಹೂಡಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮ ವಾಸ್ತವ್ಯವವನ್ನು ಮುಂಬೈಗೆ ಬದಲಾಯಿಸಿದ್ದಾರೆ. ಮುಂಬೈ ನಗರದ ಒಳಿತು, ಕೆಡಕುಗಳ ಬಗ್ಗೆ ಕಮೆಂಟ್ ಮಾಡಲು ಆರಂಭಿಸಿ, ಪಕ್ಕಾ ‘ಮುಂಬೈಕರ್’ ಆಗುವತ್ತ ಹೆಜ್ಜೆ ಇಟ್ಟಂತಿದೆ ರಶ್ಮಿಕಾ ಮಂದಣ್ಣ. ಇದೀಗ ಮುಂಬೈನ ಅಟಲ್ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಇದೇ ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್) ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಮಾತನಾಡಿದ್ದಾರೆ. ‘ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ ಅದು 20 ನಿಮಿಷಗಳಿಗೆ ಇಳಿದಿದೆ. ಯೋಚಿಸಿದರೆ ಅಸಾಧ್ಯ ಎನಿಸುತ್ತದೆ. ಅದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹಾಗೂ ಇನ್ನಿತರೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

‘ಭಾರತದ ಕೈಯಲ್ಲಿ ಸಾಧ್ಯವಿಲ್ಲ ಎಂದು ಯಾರೂ ಸಹ ಇಂದು ಹೇಳಲಾಗುವುದಿಲ್ಲ. ಭಾರತ ಈಗ ವೇಗವಾಗಿ ಸಾಗುತ್ತಿದೆ, ಎಲ್ಲೂ ನಿಲ್ಲುತ್ತಿಲ್ಲ. ಕಳೆದು ಹತ್ತು ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿಯನ್ನು ಸಾಧಿಸಿದೆ. ಪ್ರಗತಿ ಎಂಬುದು ಬಹಳ ವೇಗವಾಗಿ ಆಗುತ್ತಿದೆ. ಈ ಅಟಲ್ ಸೇತು ಕೇವಲ ಏಳು ವರ್ಷಗಳಲ್ಲಿ ಮುಗಿದಿದೆಯಂತೆ. ಹೊಸ ಭಾರತ ಉದಯವಾಗುತ್ತಿದೆ. ಭಾರತದ ಯುವಕರು ಜಾಗರೂಕರಾಗಿರಬೇಕು, ಅತಿ ಹೆಚ್ಚು ಯುವಕರು ಇರುವ ಭಾರತ ವಿಶ್ವದ ಬುದ್ಧಿವಂತ ದೇಶ. ಭಾರತದ ಯುವಕರು ಜವಾಬ್ದಾರಿಯುತವಾಗಿ ಮತ ಹಾಕಬೇಕು. ನಮ್ಮ ದೇಶ ಸಾಧಿಸುತ್ತಿರುವ ಪ್ರಗತಿ ನಿಲ್ಲಬಾರದು, ಹಾಗಾಗಿ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತ ಹಾಕಬೇಕು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ಇದನ್ನೂ ಓದಿ:‘ಸಿಕಂದರ್​’ ಮಾತ್ರವಲ್ಲ, ರಶ್ಮಿಕಾ ಮಂದಣ್ಣ ಕೈಯಲ್ಲಿವೆ 5 ಹೈವೋಲ್ಟೇಜ್​ ಸಿನಿಮಾಗಳು

ಆದರೆ ರಶ್ಮಿಕಾರ ಈ ವಿಡಿಯೋಗೆ ಋಣಾತ್ಮಕ ಕಮೆಂಟ್​ಗಳೇ ಹೆಚ್ಚು ಬಂದಿದೆ. ‘ಯಾವಾಗಲಾದರೂ ಮುಂಬೈನ ವಿರಾರ್​ಗೂ ಬಂದು ನೋಡಿ ಆಗ ನಮ್ಮ ದೇಶದ ಮೂಲಸೌಕರ್ಯ ಹೇಗಿದೆ ಎಂಬ ಅರಿವಾಗುತ್ತದೆ’ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ಮತ್ತೊಬ್ಬರು ರಶ್ಮಿಕಾ ಮಂದಣ್ಣ ಮನೆ ಮೇಲೆ ನಡೆದ ಐಟಿ ದಾಳಿಯ ಸುದ್ದಿಯನ್ನು ಹಂಚಿಕೊಂಡಿದ್ದು, ಐಟಿ ದಾಳಿ ಬಳಿಕ ರಶ್ಮಿಕಾ ಅನಿವಾರ್ಯವಾಗಿ ಬಿಜೆಪಿಯ ಬೆಂಬಲಿಸುವಂತಾಗಿದೆ ಎಂದಿದ್ದಾರೆ. ಇನ್ನು ಕೆಲವರು ‘ಅಟಲ್ ಸೇತು’ವಿನ ಫೌಂಡೇಶನ್ ಹಾಕಿದ್ದು ಕಾಂಗ್ರೆಸ್​ನವರು ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲವರು ‘ಬಿಜೆಪಿಯಿಂದ ಹಣ ಪಡೆದು ರಶ್ಮಿಕಾ ಮಂದಣ್ಣ ಪೇಯ್ಡ್ ಪ್ರೊಮೊಷನ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೆಲವು ದಿನಗಳ ಮುಂಚೆಯಷ್ಟೆ ಹೋಲ್ಡಿಂಗ್ ಒಂದು ಬಿದ್ದು ಮುಂಬೈನಲ್ಲಿ 14 ಜನ ಸಾವನ್ನಪ್ಪಿದ್ದಾರೆ ಇದಾ ನೀವು ಹೇಳುತ್ತಿರುವ ಪ್ರಗತಿ ಸಾಧಿಸುತ್ತಿರುವ ಭಾರತದ ಉದಾಹರಣೆ’ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ