ಆರ್​ಸಿಬಿ ಗೆಲುವು ಸಂಭ್ರಮಿಸಿದ ಬಾಲಿವುಡ್ ಸೆಲೆಬ್ರಿಟಿಗಳು, ಯಾರು ಏನು ಹೇಳಿದರು?

RCB victory: ಬರೋಬ್ಬರಿ 18 ವರ್ಷಗಳ ಬಳಿಕ ಆರ್​​ಸಿಬಿ ಕಪ್ ಗೆದ್ದಿದೆ. ಆರ್​ಸಿಬಿಯ ಗೆಲುವನ್ನು ಕನ್ನಡಿಗರು ಅದ್ಧೂರಿಯಾಗಿ ಸಂಭ್ರಮಿಸುತ್ತಿದ್ದಾರೆ. ಕನ್ನಡಿಗರು ಮಾತ್ರವೇ ಅಲ್ಲದೆ ಪರ ರಾಜ್ಯದವರು ಸಹ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಆರ್​ಸಿಬಿ ಗೆಲುವಿಗೆ ಬಾಲಿವುಡ್​ ಸೆಲೆಬ್ರಿಟಿಗಳು ಸಹ ಸಂಭ್ರಮಿಸಿದ್ದಾರೆ. ಹಲವು ಬಾಲಿವುಡ್ ಮಂದಿ ಸಂಭ್ರಮದ ಸಂದೇಶ ಹಂಚಿಕೊಂಡಿದ್ದಾರೆ.

ಆರ್​ಸಿಬಿ ಗೆಲುವು ಸಂಭ್ರಮಿಸಿದ ಬಾಲಿವುಡ್ ಸೆಲೆಬ್ರಿಟಿಗಳು, ಯಾರು ಏನು ಹೇಳಿದರು?
Rcb 2025

Updated on: Jun 04, 2025 | 10:55 AM

18 ವರ್ಷಗಳ ಕನಸು ನಿನ್ನೆ ರಾತ್ರಿ ನನಸಾಗಿದೆ. 18 ಸುದೀರ್ಘ ವರ್ಷಗಳ ಬಳಿಕ ಆರ್​ಸಿಬಿ (RCB) ನಿನ್ನೆ ಐಪಿಎಲ್ ಕಪ್ ಗೆದ್ದಿದ್ದಾರೆ. ಪಂಜಾಬ್ ಸೂಪರ್ ಕಿಂಗ್ಸ್ ಅವರನ್ನು ಫೈನಲ್​ನಲ್ಲಿ ಮಣಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್​ಸಿಬಿಯ ಗೆಲುವನ್ನು ಕನ್ನಡಿಗರು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಆರ್​ಸಿಬಿಯ ಗೆಲುವನ್ನು ಸಂಭ್ರಮಿಸಿದ್ದಾರೆ. ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳು ಸಹ ಆರ್​ಸಿಬಿ ಗೆಲುವನ್ನು ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಮುಂಬೈನವರಾದರೂ ಆರ್​ಸಿಬಿಯ ದೊಡ್ಡ ಅಭಿಮಾನಿ. ಆರ್​ಸಿಬಿಯ ಗೆಲುವನ್ನು ಅವರು ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಚಿತ್ರ ಹಂಚಿಕೊಂಡಿರುವ ರಣ್ವೀರ್ ಸಿಂಗ್ ಭಾವುಕವಾಗಿ ‘ಇದೇ ಸರ್ವಸ್ವ’ ಎಂದು ಬದುಕೊಂಡಿದ್ದಾರೆ. ವರ್ಷಗಳಿಂದಲೂ ಆರ್​ಸಿಬಿ ಗೆಲುವಿಗಾಗಿ ಕಾಯುತ್ತಿದ್ದೆವು, ಈಗ ಆ ಕ್ಷಣ ಬಂದಿದೆ ಎಂದಿದ್ದಾರೆ. ರಣ್ವೀರ್ ಸಿಂಗ್ ಈ ಹಿಂದೆಯೂ ಆರ್​ಸಿಬಿ ಪರ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದ್ದರು.

ಕನ್ನಡತಿಯೇ ಆದರು ಪರಭಾಷೆಯಲ್ಲಿಯೇ ಹೆಚ್ಚಾಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಸಹ ಆರ್​ಸಿಬಿ ಪರವಾಗಿ ಪೋಸ್ಟ್ ಹಂಚಿಕೊಂಡಿದ್ದು, ಆರ್​ಸಿಬಿಯ ಎಲ್ಲ ಆಟಗಾರರ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ಗೆಲುವಿನ ವಾಸನೆ ಬರುತ್ತಿದೆ’ ಎಂದಿದ್ದಾರೆ. ಜೊತೆಗೆ ಆರ್​ಸಿಬಿ ಇನ್ ಹಿಂದಿ, ಆರ್​ಸಿಬಿ ಇನ್ ಕನ್ನಡ ಎಂದೂ ಸಹ ಬರೆದಿದ್ದಾರೆ.

ನಟ ಸೋನು ಸೂದ್ ಸಹ ಆರ್​ಸಿಬಿ ಗೆಲುವಿಗೆ ಪ್ರತಿಕ್ರಿಯಿಸಿದ್ದು, ‘ಶ್ರಮದ ಫಲ ಸಿಹಿಯಾಗಿರುತ್ತದೆ. ಕೊನೆಗೂ ಆರ್​ಸಿಬಿ ಕಪ್ ಗೆದ್ದಿದ್ದಾರೆ. ಆರ್​ಸಿಬಿಯವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅದೃಷ್ಟ ಇಂದು ಪಂಜಾಬ್ ಪರವಾಗಿ ಇರಲಿಲ್ಲ. ಆದರೆ ಅವರು ಅದ್ಭುತವಾಗಿ ಆಡಿದರು. ಎರಡೂ ತಂಡಗಳಿಗೆ ನನ್ನ ಹೃದಯಪೂರ್ವಕ ಗೌರವ’ ಎಂದಿದ್ದಾರೆ.

ನಟ ಅರ್ಜುನ್ ಕಪೂರ್ ಪೋಸ್ಟ್ ಹಂಚಿಕೊಂಡಿದ್ದು, ‘18 ವರ್ಷ’ ಎಂದು ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕ್ರೀಡೆಗಾಗಿ ಎಲ್ಲವನ್ನೂ ಕೊಟ್ಟಿದ್ದಾರೆ. ಅವರಿಗಾಗಿ ಈ ಗೆಲುವು’ ಎಂದಿದ್ದಾರೆ. ವಿರಾಟ್ ಕೊಹ್ಲಿಯ ಹಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಭಾವುಕರಾಗಿರುವ ವಿಡಿಯೋ ಹಂಚಿಕೊಂಡಿರುವ ಕಾರ್ತಿಕ್ ಆರ್ಯನ್ ‘18 ವರ್ಷದ ಬಳಿಕ ಜರ್ಸಿ ನಂಬರ್ 18ಕ್ಕೆ ಗೆಲುವು ದೊರೆತಿದೆ’ ಎಂದಿದ್ದಾರೆ.

ನಟ ವಿಕ್ಕಿ ಕೌಶಲ್ ‘18’ ಎಂದಷ್ಟೆ ಪೋಸ್ಟ್ ಮಾಡಿದ್ದಾರೆ. ನಟ ಅಜಯ್ ದೇವಗನ್ ಅವರು ಇಡೀ ಆರ್​ಸಿಬಿಯ ಆಟಗಾರರ ಚಿತ್ರವನ್ನು ಹಂಚಿಕೊಂಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 am, Wed, 4 June 25