
ಕರಣ್ ಜೋಹರ್, ‘ಕಾಫಿ ವಿತ್ ಕರಣ್’ ಸೀಸನ್ 9ನ್ನು ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೆ ಶೋಗೆ ಜಾನ್ಹವಿ ಕಪೂರ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ‘ಪೆದ್ದಿ’ ಸಿನಿಮಾ ವಿವಾದದ ಬಗ್ಗೆ ಕರಣ್ ಮಾತನಾಡಿದರು. ಜಾನ್ಹವಿಗೆ ಅನ್ಯಾಯವಾಗಿದೆ ಎಂಬರ್ಥ ಬರುವಂತೆ ಅವರ ಪ್ರಶ್ನೆ ಇತ್ತು. ಜಾನ್ಹವಿ ಸಹ, ‘ನನಗೆ ಪ್ರತಿಭಟಿಸಲು ಆಗಲಿಲ್ಲ, ಆ ರೀತಿಯ ವಾತಾವರಣ ಇತ್ತು’ ಎಂಬಂತೆ ಮಾತನಾಡಿದ್ದರು. ಕರಣ್ ಸಹ, ತಾವು ಮಹಿಳಾಪರ ಅಥವಾ ನಟಿಯರಿಗೆ ಆಗುವ ಅನ್ಯಾಯದ ಪರ ಎಂಬಂತೆ ಇಮೇಜು ಸೃಷ್ಟಿಸಿಕೊಂಡಿದ್ದಾರೆ. ಆದರೆ ದಕ್ಷಿಣದ ನಟಿ ರೆಜಿನಾ ಕೆಸಾಂಡ್ರಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಹೆಸರು ಹೇಳಿ, ಆರೋಪ ಮಾಡಿದ್ದಾರೆ.
ದಕ್ಷಿಣದ ಖ್ಯಾತ ನಟಿ ರೆಜಿನಾ ಕೆಸಾಂಡ್ರಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಪೆದ್ದಿ’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಗ್ಲಾಮರಸ್ ಆಗಿ ಬಿಂಬಿಸಲಾಗಿದೆ ಎಂಬ ಜಾನ್ವಿ ಕಪೂರ್ ಅವರ ಹೇಳಿಕೆ ಹಾಗೂ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ತಮ್ಮ ಅನುಭವದ ಕುರಿತು ರಾಧಿಕಾ ಆಪ್ಟೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅದೇ ಸಂದರ್ಶನದಲ್ಲಿ ಕರಣ್ ಜೋಹರ್, ತಮ್ಮೊಂದಿಗೆ ನಡೆದುಕೊಂಡ ರೀತಿಯ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
‘ನಾನು ಕರಣ್ ಜೋಹರ್ ನಿರ್ಮಾಣದ ‘ಕೇಸರಿ 2’ ಹಿಂದಿ ಸಿನಿಮಾನಲ್ಲಿ ನಟಿಸಿದ್ದೆ ಆದರೆ ಸಿನಿಮಾದ ಪ್ರಚಾರ ಮತ್ತು ಬಿಡುಗಡೆ ವೇಳೆ ಸಂಪೂರ್ಣವಾಗಿ ನನ್ನನ್ನು ನಿರ್ಲಕ್ಷಿಸಿದರು. ನನ್ನನ್ನು ಪ್ರಮೋಷನ್ಗೆ ಸಹ ಕರೆಯಲಿಲ್ಲ. ನನ್ನ ಹೆಸರು ಸಹ ಎಲ್ಲೂ ಉಲ್ಲೇಖಿಸಲಿಲ್ಲ. ಧರ್ಮಾ ಪ್ರೊಡಕ್ಷನ್ನ ಇನ್ಸ್ಟಾಗ್ರಾಂನಲ್ಲಿ ಆ ಸಿನಿಮಾದ ಹಾಡೊಂದನ್ನು ಹಂಚಿಕೊಳ್ಳಲಾಗಿತ್ತು. ಆ ಹಾಡಿನಲ್ಲಿ ನಾನು ಮಾತ್ರವೇ ಇದ್ದೆ. ಆದರೆ ನನಗೆ ಟ್ಯಾಗ್ ಸಹ ಅವರು ಮಾಡಿರಲಿಲ್ಲ, ಇದೆಲ್ಲವನ್ನೂ ನಾನು ಮಾತನಾಡುವುದಿಲ್ಲ, ಆದರೆ ಈಗ ಅವರು ಹೀಗೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಹೀಗಳೆಯಬೇಕಾದರೆ ನಾನು ಮಾತನಾಡದೇ ಇರುವುದು ಸರಿಯಲ್ಲ ಎನಿಸಿತು ಹಾಗಾಗಿ ಹೇಳುತ್ತಿದ್ದೀನಿ’ ಎಂದಿದ್ದಾರೆ ರೆಜಿನಾ.
ಇದನ್ನೂ ಓದಿ:‘ರಾ’ ಸಂಸ್ಥಾಪಕ ಆರ್.ಎನ್. ಕಾವ್ ಬಯೋಪಿಕ್ ಘೋಷಿಸಿದ ಕರಣ್ ಜೋಹರ್
ಜಾನ್ಹವಿ ಹಾಗೂ ರಾಧಿಕಾ ಆಪ್ಟೆ ಕುರಿತಾಗಿ ಸಹ ಮಾತನಾಡಿರುವ ರೆಜಿನಾ ಕೆಸಾಂಡ್ರಾ, ‘ನಿಮಗೆ (ನಾಯಕಿಯರಿಗೆ) ಅಸಹನೀಯ ಅನಿಸಿದರೆ, ದಯವಿಟ್ಟು ಆ ಚಿತ್ರದಿಂದ ಹೊರನಡೆಯಬೇಕು. ನಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಇದು ಗಂಡಸು ಅಥವಾ ಹೆಂಗಸಿನ ವಿರುದ್ಧದ ವಿಷಯವಲ್ಲ. ಒಬ್ಬ ಮಹಿಳೆಯಾಗಿ ನನಗೆ ಬೆಂಬಲ ನೀಡುವುದು ತುಂಬಾ ಸುಲಭ, ನಾನು ಸಹಜವಾಗಿ ಮಹಿಳೆಯ ಪರವಾಗಿಯೇ ನಿಲ್ಲುತ್ತೇನೆ. ಆದರೆ ಇಂದು, ವಿಶೇಷವಾಗಿ ನೀವು ನೀಡಿದ ಉದಾಹರಣೆಗಳಲ್ಲಿರುವ ಇಬ್ಬರೂ, ಅವರು ಯಾರೆಂಬುದನ್ನು ನೋಡಿದರೆ ಚಿತ್ರದಿಂದ ಹೊರನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ ಎಂದು ನನಗನ್ನಿಸುವುದಿಲ್ಲ’ ಎಂದಿದ್ದಾರೆ.
‘ನಂದಮೂರಿ ಬಾಲಕೃಷ್ಣ ಅವರು ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ, ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ. ನಿಮಗೆ ಅವರೊಟ್ಟಿಗೆ ನಟಿಸಲು ಇಷ್ಟವಿಲ್ಲ ಎಂದರೆ ಒಪ್ಪಿಕೊಂಡಿದ್ದು ಏಕೆ, ಬಳಿಕ ಈಗ ದೂರುತ್ತಿರುವುದು ಏಕೆ?’ ಎಂದು ರೆಜಿನಾ ಪ್ರಶ್ನೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಧಿಕಾ ಆಪ್ಟೆ, ಬಾಲಕೃಷ್ಣ ಅವರ ಹೆಸರು ಹೇಳದೆ, ‘ನಾನು ನಟಿಸಿದ್ದ ದಕ್ಷಿಣ ಭಾರತ ಸಿನಿಮಾನಲ್ಲಿ ನನಗಿಂತ ಬಹಳ ಹಿರಿಯ ನಟನೊಟ್ಟಿಗೆ ನಾನು ರೊಮ್ಯಾನ್ಸ್ ಮಾಡಬೇಕಿತ್ತು, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರ ಮೈಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ’ ಎಂದೆಲ್ಲ ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ