
ನಟಿ ಸಾಯಿ ಪಲ್ಲವಿ (Sai Pallavi) ದಕ್ಷಿಣದ ಸ್ಟಾರ್ ನಟಿ. ತಮ್ಮ ಅದ್ಭುತ ನಟನೆ, ನೃತ್ಯ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಾಯಿ ಪಲ್ಲವಿ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುತ್ತಾರೆ. ಇತರೆ ಸಮಕಾಲೀನ ನಟಿಯರಂತೆ ಗ್ಲಾಮರಸ್ ಮಾತ್ರ, ಮರ ಸುತ್ತುವ ಪಾತ್ರಗಳಲ್ಲಿ ಮಾತ್ರ ನಟಿಸದೆ ಸಮಾಜಕ್ಕೆ ಸಂದೇಶ ನೀಡುವ, ನಟನೆಗೆ ಒತ್ತು ಇರುವ ಪಾತ್ರಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸಾಯಿ ಪಲ್ಲವಿ ಮೊದಲ ಬಾರಿ ಬಾಲಿವುಡ್ಗೆ ಕಾಲಿಟ್ಟಿದ್ದು, ಮೊದಲ ಹೆಜ್ಜೆಯಲ್ಲೇ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಮೂಲಕ ಇಷ್ಟು ವರ್ಷ ಪಾಲಿಸಿಕೊಂಡು ಬಂದ ಸಂಪ್ರದಾಯವೊಂದನ್ನು ಮುರಿದಿದ್ದಾರೆ.
ಸಾಯಿ ಪಲ್ಲವಿ ಹಿಂದಿಯ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದು ತಿಳಿದೇ ಇದೆ. ಆದರೆ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ಇದಲ್ಲ ಬದಲಿಗೆ ಆಮಿರ್ ಖಾನ್ ಪುತ್ರನ ಜೊತೆಗೆ ನಟಿಸಿರುವ ‘ಏಕ್ ದಿನ್’. 2024 ರ ಆರಂಭದಲ್ಲೇ ಚಿತ್ರೀಕರಣ ಶುರುವಾದರೂ ಬಹಳ ತಡವಾಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಸಾಯಿ ಪಲ್ಲವಿ ಸಖತ್ ಗಮನ ಸೆಳೆಯುತ್ತಿದ್ದಾರೆ.
ಆಮಿರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ಸಾಯಿ ಪಲ್ಲವಿ ನಾಯಕಿಯಾಗಿರುವ ‘ಏಕ್ ದಿನ್’ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಇಬ್ಬರು ಭಾರತೀಯರು ದೂರದ ಜಪಾನ್ನಲ್ಲಿ ಪರಸ್ಪರ ಪ್ರೀತಿಗೆ ಬೀಳುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಪಾನ್ನಲ್ಲಿಯೇ ಚಿತ್ರೀಕರಿಸಲಾಗಿದ್ದು, ಸಿನಿಮಾದ ಟೀಸರ್ನಲ್ಲಿ ಜಪಾನ್ ಸುಂದರ ತಾಣಗಳು ಅದ್ಭುತವಾಗಿ ಕಾಣುತ್ತಿವೆ.
ಇದನ್ನೂ ಓದಿ:ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?
‘ಏಕ್ ದಿನ್’ ಸಿನಿಮಾ, ಹೆಸರಿನಂತೆ ಒಂದೇ ದಿನದಲ್ಲಿ ನಡೆಯುವ ಕತೆ ಎನ್ನಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಸಾಯಿ ಪಲ್ಲವಿ ತಮ್ಮ ನಟನೆ, ಕ್ಯೂಟ್ನೆಸ್ನಿಂದ ಗಮನ ಸೆಳೆಯುತ್ತಿದ್ದಾರೆ. ಝುನೈದ್ ಖಾನ್ ಸಹ ಪ್ರಬುದ್ಧ ನಟನೆ ನೀಡಿದಂತೆ ಟೀಸರ್ನಲ್ಲಿ ಕಾಣುತ್ತಿದೆ. ಸಿನಿಮಾದ ಕತೆ ಇಬ್ಬರು ಪ್ರಬುದ್ಧರ ನಡುವೆ ನಡೆಯುವ ಪ್ರೇಮಕತೆಯನ್ನು ಒಳಗೊಂಡಿದೆಯಂತೆ.
‘ಏಕ್ ದಿನ್’ ಸಿನಿಮಾವನ್ನು ಸುನಿಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರಾಮ್ ಸಂಪತ್ ಸಂಗೀತವಿದೆ. ಈ ಸಿನಿಮಾ 2016ರಲ್ಲಿ ಬಿಡುಗಡೆ ಆಗಿದ್ದ ಥಾಯ್ ಸಿನಿಮಾದ ರೀಮೇಕ್ ಆಗಿದೆ. ಅಸಲಿಗೆ ಸಾಯಿ ಪಲ್ಲವಿ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಈ ಹಿಂದೆ ರೀಮೇಕ್ ಸಿನಿಮಾ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದರು. ಖುದ್ದು ವೇದಿಕೆ ಮೇಲೆ ತಾವು ರೀಮೇಕ್ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಥಾಯ್ ಭಾಷೆಯ ‘ಒನ್ ಡೇ’ ಸಿನಿಮಾದ ರೀಮೇಕ್ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ‘ಏಕ್ ದಿನ್’ ಸಿನಿಮಾ ಮೇ 1 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ