ಸಿನಿಮಾ ಸೋಲಿನ ಬಳಿಕ 15 ಕೋಟಿ ರೂ. ಸಂಭಾವನೆ ಬಿಟ್ಟುಕೊಟ್ಟ ಕಾರ್ತಿಕ್ ಆರ್ಯನ್
ಕಾರ್ತಿಕ್ ಆರ್ಯನ್ ಅಭಿನಯದ ಹೊಸ ಸಿನಿಮಾ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸೋತಿದೆ. ಈ ಸಿನಿಮಾಗೆ ಬಂಡವಾಳ ಹೂಡಿದ ಕರಣ್ ಜೋಹರ್ ಅವರಿಗೆ ಬಹುಕೋಟಿ ರೂಪಾಯಿ ನಷ್ಟ ಆಗಿದೆ. ಆದ್ದರಿಂದ ಕಾರ್ತಿಕ್ ಆರ್ಯನ್ 15 ಕೋಟಿ ರೂಪಾಯಿ ಸಂಬಳ ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ಆಗಿದೆ.

ನಟ ಕಾರ್ತಿಕ್ ಆರ್ಯನ್ (Kartik Aaryan) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2025ರ ಡಿಸೆಂಬರ್ನಲ್ಲಿ ಅವರು ನಟಿಸಿದ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ (TMMTMTTM) ಸಿನಿಮಾ ಬಿಡುಗಡೆ ಆಯಿತು. ಕಾರ್ತಿಕ್ ಆರ್ಯನ್ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಅವರು ಅಭಿನಯಿಸಿದ್ದರು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಮಾಡಲಿಲ್ಲ. ಅದರಿಂದಾಗಿ ನಿರ್ಮಾಪಕರಿಗೆ ನಷ್ಟ ಆಗಿದೆ. ಹಾಗಾಗಿ ತಮ್ಮ ಪಾಲಿನ 15 ಕೋಟಿ ರೂಪಾಯಿ ಸಂಭಾವನೆಯನ್ನು (Remuneration) ಬಿಟ್ಟುಕೊಡಲು ಕಾರ್ತಿಕ್ ಆರ್ಯನ್ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
‘ಧರ್ಮ ಪ್ರೊಡಕ್ಷನ್ಸ್’ ಮೂಲಕ ಕರಣ್ ಜೋಹರ್ ಅವರು ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಜೊತೆಯಲ್ಲಿ ನೀನಾ ಗುಪ್ತಾ, ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಿಸೆಂಬರ್ 25ರಂದು ರಿಲೀಸ್ ಆದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂದಾಜು 90 ಕೋಟಿ ರೂಪಾಯಿ ಬಜೆಟ್ನಲ್ಲಿ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾ ನಿರ್ಮಾಣ ಆಗಿತ್ತು. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಗಳಿಸಿದ್ದು 30 ಕೋಟಿ ರೂಪಾಯಿ ಮಾತ್ರ. ಇದರಿಂದಾಗಿ ನಿರ್ಮಾಪಕ ಕರಣ್ ಜೋಹರ್ ಅವರು ನಷ್ಟ ಅನುಭವಿಸಿದ್ದಾರೆ. ನಿರ್ಮಾಪಕರ ನಷ್ಟ ಕಡಿಮೆ ಮಾಡಲು ಕಾರ್ತಿಕ್ ಆರ್ಯನ್ ಅವರು 15 ಕೋಟಿ ರೂಪಾಯಿ ಸಂಭಾವನೆ ಬಿಟ್ಟುಕೊಟ್ಟಿದ್ದಾರೆ ಎಂದು ವರದಿ ಆಗಿದೆ.
2021ರಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕರಣ್ ಜೋಹರ್ ನಡುವೆ ಮನಸ್ತಾಪ ಉಂಟಾಗಿತ್ತು. ಆದರೆ 2023ರ ವೇಳೆಗೆ ಅವರ ನಡುವಿನ ಮುನಿಸು ಕಡಿಮೆ ಆಯಿತು. ಆ ಬಳಿಕ ಅವರು ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಆರಂಭಿಸಿದರು. ಆದರೆ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಚಿತ್ರದ ಸೋಲಿನಿಂದಾಗಿ ಅವರಿಬ್ಬರ ನಡುವೆ ಪುನಃ ಕಿರಿಕ್ ಆರಂಭ ಆಗಿದೆ ಎಂಬ ಗಾಸಿಪ್ ಹಬ್ಬಿತ್ತು. ಆ ವದಂತಿಯನ್ನು ಅವರ ಆಪ್ತ ಮೂಲಗಳು ತಳ್ಳಿಹಾಕಿವೆ.
ಇದನ್ನೂ ಓದಿ: ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ
‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾದ ಸೋಲಿಗೆ ಕೆಲವು ಕಾರಣಗಳಿವೆ. ಪ್ರೇಕ್ಷಕರಿಗೆ ಈ ಸಿನಿಮಾ ಅಷ್ಟೇನೂ ಇಷ್ಟ ಆಗಲಿಲ್ಲ. ಈ ಚಿತ್ರ ಬಿಡುಗಡೆ ಆದಾಗ ಥಿಯೇಟರ್ಗಳಲ್ಲಿ ‘ಧುರಂಧರ್’ ಸಿನಿಮಾದ ಅಬ್ಬರ ಜೋರಾಗಿತ್ತು. ‘ಧುರಂಧರ್’ ಚಿತ್ರದ ಎದುರು ಪೈಪೋಟಿ ನೀಡಲು ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾಗೆ ಸಾಧ್ಯವಾಗಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




